ಮೈಸೂರು:ಮತದಾರರ ಸೆಳೆಯಲು ಸಾಂಪ್ರದಾಯಿಕ ಮತಗಟ್ಟೆ ನಿರ್ಮಾಣ!
ಮೈಸೂರು, ಮೇ 1: ರಾಜ್ಯದಲ್ಲಿ ಐದು ವರ್ಷಗಳ ಬಳಿಕ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಅಧಿಕಾರ ಉಳಿಸಿಕೊಳ್ಳಲು ಮತ್ತು ಅಧಿಕಾರ ಪಡೆಯಲು ಪಕ್ಷಗಳು ಹೋರಾಟ ನಡೆಸುತ್ತಿದ್ದರೆ, ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಗೆಲುವಿಗಾಗಿ ಮತದಾರರ ಮನೆಬಾಗಿಲು ತಟ್ಟುತ್ತಾ ಮತ ನೀಡುವಂತೆ ಮತದಾರರ ಮನವೊಲಿಸುತ್ತಿದ್ದಾರೆ. ಇದೆಲ್ಲದರ ನಡುವೆ ಚುನಾವಣಾ ಆಯೋಗ ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದು, ಮತದಾರರನ್ನು ಮತಕೇಂದ್ರದತ್ತ ಆಕರ್ಷಿಸುವ ಕಾರ್ಯಕ್ಕೆ ಮುಂದಾಗಿದೆ.
ಪ್ರತಿ ಚುನಾವಣೆ ಬಂದಾಗಲೂ ಹೊಸ ಮತದಾರರು ಸೇರ್ಪಡೆಯಾಗುತ್ತಾರೆ. ಅದರಲ್ಲೂ ಈ ಬಾರಿ ರಾಜ್ಯದಲ್ಲಿ ಸುಮಾರು ಇಪ್ಪತ್ತು ಲಕ್ಷ ಮತದಾರರು ಮತಚಲಾಯಿಸಲಿದ್ದಾರೆ. ಹೊಸ ಮತದಾರರಿಗೆ ಮತಚಲಾಯಿಸುವುದು ಹೊಸ ಅನುಭವವಾಗಿದೆ. ಜೊತೆಗೆ ಮತದಾನ ಏಕೆ ಮಾಡಬೇಕು? ಪ್ರಜಾಪ್ರಭುತ್ವದಲ್ಲಿ ಮತಕ್ಕೆ ಎಷ್ಟು ಪ್ರಾಮುಖ್ಯತೆಯಿದೆ? ಎಂಬುದರ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಈಗಾಗಲೇ ಚುನಾವಣಾ ಆಯೋಗ ರಾಜ್ಯದಾದ್ಯಂತ ಮಾಡಿದ್ದು, ಪ್ರತಿಯೊಬ್ಬರೂ ಚುನಾವಣೆಯನ್ನು ಹಬ್ಬದಂತೆ ಸಂಭ್ರಮಿಸುವಂತೆ ಮನವಿ ಮಾಡಲಾಗಿದೆ.

ಪ್ರಜಾಪ್ರಭುತ್ವದಲ್ಲಿ ಐದು ವರ್ಷಕ್ಕೊಮ್ಮೆ ಬದಲಾವಣೆಯನ್ನು ತರುವ ಶಕ್ತಿ ಮತದಾರರಿಗಿದೆ. ಹೀಗಾಗಿಯೇ ಮತದಾರರನ್ನು ಪ್ರಭುಗಳು ಎಂದು ಕರೆಯಲಾಗುತ್ತದೆ. ಇದನ್ನು ಅರಿತು ಪ್ರತಿಯೊಬ್ಬ ಮತದಾರರು ತಮ್ಮ ಮತಕ್ಕೆಷ್ಟು ಮೌಲ್ಯವಿದೆ ಎಂಬುದನ್ನು ಅರಿತು ಅದನ್ನು ಚಲಾಯಿಸಬೇಕಾಗಿದೆ. ಇವತ್ತಿಗೂ ಶೇ.100ರಷ್ಟು ಮತದಾನಗಳಾಗುತ್ತಿಲ್ಲ. ವಿದ್ಯಾವಂತ ಮತದಾರರೇ ಮತಕೇಂದ್ರದತ್ತ ಸುಳಿಯುತ್ತಿಲ್ಲ. ಅಯ್ಯೋ ನಮ್ಮ ಒಂದು ಮತದಿಂದ ಏನಾಗುತ್ತದೆ ಎಂಬ ಉಡಾಫೆಯ ಮಾತನಾಡುತ್ತಾರೆ. ಇಂತಹವರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಂಡು ಈ ದೇಶದ ಪ್ರಜೆಯಾಗಿ ನಮ್ಮನ್ನು ಆಳುವ ನಾಯಕರನ್ನು ಆಯ್ಕೆ ಮಾಡುವ ಕಾರ್ಯದಲ್ಲಿ ನನ್ನ ಪಾತ್ರ ಎಷ್ಟಿದೆ ಎಂಬುದರ ಬಗ್ಗೆ ಮಂಥನ ಮಾಡಬೇಕಿದೆ.
ಯುವ ಮತದಾರರು ಭವಿಷ್ಯದ ನೇತಾರರು
ಯುವ ಮತದಾರರು ದೇಶದ ಭವಿಷ್ಯ ಸೃಷ್ಟಿಸುವ ನೇತಾರರಾಗಿದ್ದಾರೆ. ಅವರು ವಿದ್ಯಾವಂತರಾಗಿದ್ದಾರೆ. ಅವರಿಗೆ ರಾಜಕೀಯದ ವಿದ್ಯಮಾನಗಳು ಗೊತ್ತಿವೆ. ಒಳಿತು ಕೆಡಕುಗಳ ಅರಿವಿದೆ. ಹೀಗಾಗಿ ಭವ್ಯ ಭಾರತ ಸೃಷ್ಟಿಯಾಗಬೇಕಾದರೆ ನಾವು ಎಂತಹ ನಾಯಕರನ್ನು ಆಯ್ಕೆ ಮಾಡಬೇಕು ಎಂಬುದು ಗೊತ್ತಿದೆ. ಹೀಗಿರುವಾಗ ಅದನ್ನು ತಮ್ಮ ಮತದ ಮೂಲಕ ಚಲಾಯಿಸಿ ಕರ್ತವ್ಯ ಮೆರೆಯ ಬೇಕಾಗಿದೆ. ಮತದಾರರು ಹಣ, ಆಮಿಷಗಳಿಗೆ ಒಳಗಾಗಿ ತಮ್ಮ ಮತವನ್ನು ಮಾರಿಕೊಳ್ಳದೆ ತಮ್ಮ ಸ್ವಂತ ನಿರ್ಧಾರದಿಂದ ಮತವನ್ನು ಚಲಾಯಿಸಬೇಕಾಗಿದೆ. ಹೀಗಾದರೆ ಒಂದೊಳ್ಳೆಯ ರಾಜಕೀಯ ವ್ಯವಸ್ಥೆಯನ್ನು ಸೃಷ್ಟಿ ಮಾಡಲು ಸಾಧ್ಯವಾಗುತ್ತದೆ.

ಕಳೆದ ಕೆಲವು ವರ್ಷಗಳಿಂದ ಚುನಾವಣಾ ಆಯೋಗ ಕೂಡ ಮತದಾರರನ್ನು ಸೆಳೆಯುವ ಸಲುವಾಗಿ ಅದರಲ್ಲೂ ಗ್ರಾಮೀಣ ಪ್ರದೇಶದ ಹಿಂದುಳಿದ ಪ್ರದೇಶದಲ್ಲಿರುವ ಹಾಡಿಗಳಲ್ಲಿ ವಾಸಿಸುವ ಮತದಾರರನ್ನು ಮತಕೇಂದ್ರಕ್ಕೆ ಬರುವಂತೆ ಮಾಡಲು ಮತಗಟ್ಟೆಗಳನ್ನು ವಿಭಿನ್ನವಾಗಿ ನಿರ್ಮಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಇದೀಗ ಮೈಸೂರು ಜಿಲ್ಲೆಯ ಹಿಂದುಳಿದ ತಾಲೂಕು ಎಂದೇ ಹೇಳಲಾಗುತ್ತಿರುವ ಹೆಚ್.ಡಿ.ಕೋಟೆಯಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಹಾಡಿಗಳಲ್ಲಿ ವಿಭಿನ್ನ ರೀತಿಯ ಮತಗಟ್ಟೆಗಳನ್ನು ಸೃಷ್ಟಿ ಮಾಡಲಾಗಿದ್ದು, ಅವು ಮತದಾರರನ್ನು ಸ್ವಾಗತಿಸಲು ಸಿದ್ಧಗೊಳ್ಳುತ್ತಿವೆ.
ವಿಭಿನ್ನ ವಿಶಿಷ್ಟ ಮತಗಟ್ಟೆ ನಿರ್ಮಾಣ
ಇದೀಗ ಚುನಾವಣಾ ಆಯೋಗ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಚುನಾವಣಾ ಭಾಗವಹಿಸುವಿಕೆ (ಸ್ವೀಪ್) ಕಾರ್ಯಕ್ರಮದ ಅಡಿಯಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ಬಸವನಗಿರಿ ಹಾಡಿಯ ಸರ್ಕಾರಿ ಬುಡಗಟ್ಟು ಆಶ್ರಮ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 57ನ್ನು ಸುಂದರವಾಗಿ ಸಾಂಪ್ರದಾಯಿಕವಾಗಿ ಆಕರ್ಷಣೀಯವಾಗಿ ತಯಾರು ಮಾಡಲಾಗಿದೆ. ಸಾಂಪ್ರದಾಯಿಕ ಸ್ವಾಗತ ಕಮಾನು ಎಲ್ಲರನ್ನು ಆಕರ್ಷಿಸುತ್ತಿದೆ. ಇದೇ ರೀತಿಯ ವಿಭಿನ್ನ ಮತ್ತು ವಿಶಿಷ್ಟವಾದ ಆಕರ್ಷಕ ಮತಗಟ್ಟೆಗಳನ್ನು ರಾಜ್ಯದಾದ್ಯಂತ ನಿರ್ಮಾಣ ಮಾಡಲಾಗುತ್ತಿದೆ.
ಕೇಂದ್ರ ಚುನಾವಣಾ ಆಯೋಗವು ಮತದಾನ ದಿನವನ್ನು ಹಬ್ಬದ ರೀತಿಯಲ್ಲಿ ಸಂಭ್ರಮದಿಂದ ಆಚರಿಸಲು ಕರೆ ನೀಡಿದ್ದು, ಅದರಂತೆ ಹಬ್ಬದ ವಾತಾವರಣವನ್ನು ಸೃಷ್ಟಿಮಾಡುವ ಕೆಲಸವನ್ನು ಮೈಸೂರು ಜಿಲ್ಲಾ ಸ್ವೀಪ್ ಸಮಿತಿಯು ಮಾಡುತ್ತಿದೆ. ಬಸವನಹಾಡಿಯಲ್ಲಿ ವಾಸಿಸುವ ಮತದಾರರ ಪೈಕಿ ಕೆಲವರು ಅನಕ್ಷರಸ್ಥರಾಗಿದ್ದು ಅವರಲ್ಲಿ ಮತದಾನ ಅರಿವು ಮೂಡಿಸಿ ಮತಗಟ್ಟೆಯತ್ತ ಕರೆತರುವ ಸಲುವಾಗಿ ಇದೀಗ ನಿರ್ಮಾಣ ಮಾಡಿರುವ ಮತಗಟ್ಟೆಯು ಬುಡಗಟ್ಟು ಸಾಂಪ್ರದಾಯಿಕ ಕಲೆ, ಸಂಸ್ಕೃತಿ, ವೈಭವವನ್ನು ಮೆರೆಯುತ್ತಿದ್ದು, ಎಲ್ಲರ ಗಮನಸೆಳೆಯುತ್ತಿದೆ.












Click it and Unblock the Notifications