ಬಿಎಸ್‌ವೈ ಬದಲಾವಣೆಗೆ ಜಯಮೃತ್ಯುಂಜಯ ಸ್ವಾಮೀಜಿ ಸಾಥ್
ಮೈಸೂರು, ಜುಲೈ 5: ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ, ಬಿ.ಎಸ್. ಯಡಿಯೂರಪ್ಪ ನಾಯಕತ್ವದ ಕುರಿತು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಸಹ ಬಹಿರಂಗ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಜಯಮೃತ್ಯುಂಜಯ ಸ್ವಾಮೀಜಿ, "ಯಡಿಯೂರಪ್ಪ ಆಡಳಿತ ಕೊರೊನಾ ಸಂದರ್ಭದಲ್ಲಿ ರಾಜ್ಯದ ಜನರಿಗೆ ನಿರಾಶೆ ಮೂಡಿಸಿರುವುದು ಸತ್ಯ. ಇದಕ್ಕೆ ಅವರ ಆರೋಗ್ಯ ಕ್ಷೀಣಿಸಿರುವುದು ಸಹ ಕಾರಣ ಇರಬಹುದು. ಆದರೂ ಅವರು ಇನ್ನು ಚೆನ್ನಾಗಿ ಕೆಲಸ ಮಾಡಬಹುದಿತ್ತು. ಮುಂದೆ ಅವಕಾಶ ಸಿಗುತ್ತದೆ ಆಗ ಒಳ್ಳೆಯ ಕೆಲಸ ಮಾಡಲಿ. ಸದ್ಯ ಅವರ ಆಡಳಿತದ ಬಗ್ಗೆ ಜನರಲ್ಲಿ ಅಸಮಾಧಾನ ಇದೆ. ಅದರಲ್ಲಿ ಕೆಲವರು ಬಹಿರಂಗವಾಗಿ ಹೇಳಿಕೊಂಡಿದ್ದು, ಈ ಬಗ್ಗೆ ನಾನು ರಾಜಕೀಯವಾಗಿ ಏನು ಹೇಳುವುದಿಲ್ಲ,'' ಎಂದರು.
"ಆದರೆ ಒಂದೊಮ್ಮೆ ಸಿಎಂ ಬದಲಾವಣೆ ಮಾಡುವುದಾದರೆ ಲಿಂಗಾಯತ ಸಮುದಾಯದ ಉತ್ತರ ಕರ್ನಾಟಕದ ಭಾಗದವರಿಗೆ ನೀಡಬೇಕು. ನಾಯಕರು ಇಲ್ಲ ಎಂದು ಅವಮಾನ ಮಾಡಬೇಡಿ. ನಮ್ಮಲ್ಲಿ ತುಂಬಾ ಜನ ಸಮರ್ಥ ಪರ್ಯಾಯ ನಾಯಕರಿದ್ದಾರೆ. ನಾಯಕರನ್ನು ಸೃಷ್ಟಿಸುವ ಶಕ್ತಿ ಮಠಗಳಿಗೆ ಇದೆ,'' ಅಂತಲೂ ಹೇಳಿದರು.

"ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಸಿಎಂ ಯಡಿಯೂರಪ್ಪ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಬೇಕು. ಇಲ್ಲವಾದರೆ ಮತ್ತೆ ಹೋರಾಟ ಅನಿವಾರ್ಯ. ಈ ಬಾರಿಯೂ ಬೆಂಗಳೂರಿನ ಅರಮನೆ ಮೈದಾನದಲ್ಲೇ ಹೋರಾಟ ಮಾಡುತ್ತೇವೆ. 20 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಹೋರಾಟ ನಡೆಸುತ್ತೇವೆ,'' ಎಂಬ ಎಚ್ಚರಿಕೆ ನೀಡಿದರು.
"ಒಂದು ಬಾರಿ ನಮ್ಮ ಹೋರಾಟ ನಿರ್ಲಕ್ಷ್ಯ ಮಾಡಿ ಬಿಜೆಪಿ ನಷ್ಟ ಅನುಭವಿಸಿದೆ. ಎರಡು ಉಪ ಚುನಾವಣೆಯಲ್ಲೂ ಕೈ ಸುಟ್ಟುಕೊಂಡಿದೆ. ಮತ್ತೆ ಈ ತಪ್ಪು ಮಾಡಬೇಡಿ ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ ಸ್ವಾಮೀಜಿ, "ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ನಾಯಕರು ವಿಧಾನಸಭೆಯಲ್ಲಿ ಇದ್ದಿದ್ದಕ್ಕೆ ನಮ್ಮ ಪರ ಧ್ವನಿ ಆಯ್ತು. ಇದೇ ಕಾರಣಕ್ಕೆ ಸದನದಲ್ಲೂ ಅದು ರೆಕಾರ್ಡ್ ಆಯ್ತು. ಆದ್ದರಿಂದ ಸಿಎಂ ಯಡಿಯೂರಪ್ಪ ಅವರ ಅವಧಿಯಲ್ಲೇ ನಮಗೆ ಮೀಸಲಾತಿ ಸಿಗಬೇಕು,'' ಎಂದರು.












Click it and Unblock the Notifications