ಮೈಸೂರು: ಡಿಕೆಶಿ ಮಾವನ ಮನೆಯಲ್ಲಿ ಮುಂದುವರಿದ ತನಿಖೆ
ಡಿಕೆ ಶಿವಕುಮಾರ್ ಅವರ ಮಾವನ ಮನೆಯಲ್ಲಿ ಮುಂದುವರಿದ ತನಿಖೆ. ಮನೆಯಲ್ಲಿ ವಿವಿಧ ದಾಖಲಾತಿ ಪರಿಶೀಲನೆಯಲ್ಲಿ ತೊಡಗಿರುವ ಐಟಿ ಅಧಿಕಾರಿಗಳು.
ಮೈಸೂರು, ಆಗಸ್ಟ್ 3: ಸಚಿವ ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ ಹಿನ್ನೆಲೆಯಲ್ಲಿ ಮೈಸೂರಿನ ಇಟ್ಟಿಗೆಗೂಡಿನಲ್ಲಿರುವ ಸಚಿವ ಡಿ.ಕೆ. ಶಿವಕುಮಾರ್ ಮಾವನ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ಆಗಸ್ಟ್ 3ರ ಮಧ್ಯರಾತ್ರಿಯಾದರೂ ಮುಂದುವರಿದಿತ್ತು.
ಡಿಕೆ ಶಿವಕುಮಾರ್ ಮಾವ ನೆಲೆಸಿರುವ ಈ ಮನೆಯಲ್ಲಿ, ಸತತ 15 ಗಂಟೆಯಿಂದ ಐಟಿ ಇಲಾಖೆ ಅಧಿಕಾರಿಗಳು ದಾಖಲೆ ಪರಿಶೀಲನೆ ಕಾರ್ಯದಲ್ಲಿ ತೊಡಗಿದ್ದು, ಮಧ್ಯರಾತ್ರಿ 1 ಗಂಟೆಯಾದರೂ ಆ ಕಾರ್ಯ ಮುಗಿದಿರಲಿಲ್ಲ.

ಪ್ರತಿಭಟನೆ
ಸಚಿವ ಡಿ.ಕೆ.ಶಿವಕುಮಾರ್ ಮನೆ ಹಾಗೂ ಈಗಲ್ ಟನ್ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೈಸೂರಿನ ನ್ಯಾಯಾಲಯದ ಗಾಂಧೀ ಪ್ರತಿಮೆಯ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಮರಿಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್ ಅವರ ಮನೆ, ರೆಸಾರ್ಟ್ ಮೇಲೆ ಬೆಳಗ್ಗೆ ಏಕಾಏಕಿ ಐಟಿ ದಾಳಿ ನಡೆಸಿದೆ.
ಕಾಂಗ್ರೆಸ್ ಅಧಿಕಾರಿಗಳ ಮೇಲೆ ಉದ್ದೇಶ ಪೂರ್ವಕವಾಗಿ ಮೋದಿ ಸರ್ಕಾರ ಐಟಿ ದಾಳಿ ಮಾಡಿಸುತ್ತಿರುವುದು ಖಂಡನೀಯ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.












Click it and Unblock the Notifications