Dhruva Narayan: ಧ್ರುವನಾರಾಯಣ ಇಲ್ಲದ ಕಾಂಗ್ರೆಸ್ ಊಹಿಸಿಕೊಳ್ಳುವುದೇ ಕಷ್ಟ!
ಮೈಸೂರು: ಹಳೇ ಮೈಸೂರು ಭಾಗದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಂತರದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಹೃದಯಾಘಾತದಿಂದ ನಿಧನರಾಗಿರುವುದು ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷದ ಮೇಲೆ ಭಾರೀ ಪರಿಣಾಮ ಬೀರಲಿದೆ.
ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದ ಆರ್.ಧ್ರುವನಾರಾಯಣ ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕಾಗಿ ತರಲೇ ಬೇಕೆಂಬ ಹಠಕ್ಕೆ ಬಿದ್ದಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಶ್ರೀನಿವಾಸ ಪ್ರಸಾದ್ ಅವರ ಎದುರು ಚಾಮರಾಜನಗರದಲ್ಲಿ ಸೋಲು ಕಂಡಿದ್ದ ಅವರು ಆ ನಂತರ ಅವರು ಸುಮ್ಮನೆ ಕೂರಲಿಲ್ಲ. ಪಕ್ಷದ ಸಂಘಟನೆಗಾಗಿ ಹಗಲಿರುಳು ಶ್ರಮಿಸತೊಡಗಿದ್ದರು.
ಅದರಲ್ಲೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಗಳಿಂದ ಆರಂಭವಾಗಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಇಳಿದರು. ಸ್ಥಳೀಯ ನಾಯಕರನ್ನು ಭೇಟಿ ಮಾಡಿ ಸಭೆಗಳನ್ನು ನಡೆಸಲು ಆರಂಭಿಸಿದರು. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ನಾಯಕರು ಸಂಘಟನೆಯಿಂದ ದೂರವುಳಿದಿದ್ದ ಕಾಲದಲ್ಲಿ ಏಕಾಂಗಿಯಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಕೀರ್ತಿ ಅವರಿಗೆ ಸಲ್ಲುತ್ತದೆ.

ಹಳೇ ಮೈಸೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಚೇತರಿಕೆ
ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದರು. ಕೇವಲ ಮೈಸೂರು ಮಾತ್ರವಲ್ಲದೆ, ರಾಜ್ಯದಾದ್ಯಂತ ಪ್ರವಾಸ ಕೈಗೊಂಡರು. ಅದರ ಪರಿಣಾಮ ಕಾಂಗ್ರೆಸ್ ಹಳೇ ಮೈಸೂರು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಚೇತರಿಕೆ ಕಂಡಿತ್ತು. ಹಳೇ ಮೈಸೂರು ಭಾಗದಲ್ಲಿ ಒಂದಷ್ಟು ಕಾಂಗ್ರೆಸ್ ಮುಖಂಡರು ಇದ್ದರೂ ಸಿದ್ದರಾಮಯ್ಯ ಹೊರತುಪಡಿಸಿದರೆ ಎದ್ದು ಕಾಣಿಸುತ್ತಿದ್ದದ್ದು ಧ್ರುವನಾರಾಯಣ ಎಂದರೆ ತಪ್ಪಾಗಲಾರದು.
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸಂಸದರಾಗಿದ್ದ ಧ್ರುವನಾರಾಯಣ ಉತ್ತಮ ಆಡಳಿತಗಾರ ಎಂಬುದನ್ನು ಪಕ್ಷಾತೀತವಾಗಿ ಒಪ್ಪಿಕೊಳ್ಳಬೇಕಾಗಿದೆ. ತಮ್ಮ ಸಂಸದರ ಅನುದಾನ ಬಳಸಿಕೊಂಡು ಕ್ಷೇತ್ರದ ಅಭಿವೃದ್ಧಿ ಮಾಡುವಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದರು. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಶ್ರೀನಿವಾಸ ಪ್ರಸಾದ್ ಎದುರು ಸೋಲು ಕಂಡಿದ್ದರು.

ಧ್ರುವನಾರಾಯಣ ಸೋಲಿಗೆ ಕಾರಣವಾಯ್ತ ಸಿದ್ದರಾಮಯ್ಯ ಜಿದ್ದು
ಆ ಸೋಲಿಗೂ ಕಾರಣವಿತ್ತು. ಸಿದ್ದರಾಮಯ್ಯ ಮತ್ತು ಶ್ರೀನಿವಾಸ ಪ್ರಸಾದ್ ಅವರ ನಡುವಿನ ಜಿದ್ದಾಜಿದ್ದಿಗೆ ಕೊನೆಗಳಿಗೆಯಲ್ಲಿ ಧ್ರುವನಾರಾಯಣ ಬಲಿಯಾಗಿದ್ದರು. ಆದರೆ ಅವರು ಸೋಲನ್ನು ಕೊಡವಿಕೊಂಡು ಹೊರ ಬಂದಿದ್ದರು. ಅಲ್ಲದೆ ಹೇಗಾದರೂ ಮಾಡಿ ಕಾಂಗ್ರೆಸ್ ನ್ನು ಅಧಿಕಾರಕ್ಕೆ ತರಬೇಕೆನ್ನುವ ಶಪಥ ಮಾಡಿದ್ದರು. ಕೇವಲ ಚಾಮರಾಜನಗರ ಮಾತ್ರವಲ್ಲದೆ, ಹಳೇ ಮೈಸೂರು ವ್ಯಾಪ್ತಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಪಡೆಯಲೇ ಬೇಕೆಂಬ ಹಠಕ್ಕೆ ಬಿದ್ದಿದ್ದರು. ಜತೆಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರುವ ಸಲುವಾಗಿ ಕೇಂದ್ರದ ಕಡೆಗೆ ಹೆಚ್ಚು ಗಮನಹರಿಸದೆ ರಾಜ್ಯದ ರಾಜಕೀಯದತ್ತ ಹೆಚ್ಚಿನ ಒಲವು ತೋರಲು ಆರಂಭಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಚಾಮರಾಜನಗರವನ್ನು ಬಿಟ್ಟು ನಂಜನಗೂಡು ಕ್ಷೇತ್ರದತ್ತ ಮುಖ ಮಾಡಿದ್ದ ಧ್ರುವನಾರಾಯಣ ಅವರು ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸುವ ಸಲುವಾಗಿ ಅರ್ಜಿಯನ್ನು ಹಾಕಿದ್ದರು. ಆದರೆ ಅಂದುಕೊಂಡಿದ್ದೆಲ್ಲವನ್ನು ಮಾಡಿ ಮುಗಿಸುವ ಮುನ್ನವೇ ಅವರು ಇಹಲೋಕ ತ್ಯಜಿಸಿರುವುದು ಕಾಂಗ್ರೆಸ್‌ಗೆ ತುಂಬಲಾರದ ನಷ್ಟವಾಗಿದೆ.

ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿದ್ದ ಧ್ರುವನಾರಾಯಣ್
ಇನ್ನು ರಾಜಕೀಯವಾಗಿ ನೋಡಿದ್ದೇ ಆದರೆ ಧ್ರುವನಾರಾಯಣ ಅವರು, 1999 ರಲ್ಲಿ ಅವರು ಬಿಜೆಪಿಯಿಂದ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಸ್ಪರ್ಧಿಸಿ ಸೋಲುಕಂಡಿದ್ದರು. ಆ ಬಳಿಕ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಕೈ ಪಾಳಯಕ್ಕೆ ಬಂದ ನಂತರ ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರುತ್ತಾ ಹೋದರು.
2004ರ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಮೀಸಲು ವಿಧಾನ ಕ್ಷೇತ್ರದಲ್ಲಿ ಎ.ಆರ್.ಕೃಷ್ಣಮೂರ್ತಿ ರವರ ವಿರುದ್ಧ ಕೇವಲ ಒಂದು ಮತದಿಂದ ರೋಚಕವಾಗಿ ಗೆದ್ದು ದೇಶದಾದ್ಯಂತ ಧ್ರುವನಾರಾಯಣ ಸುದ್ದಿಯಾಗಿದ್ದರು. ವಿಧಾನ ಸಭಾ ಕ್ಷೇತ್ರ ಮರುವಿಂಗಡಣೆಯ ನಂತರ ಸಂತೇಮರಹಳ್ಳಿ ಕ್ಷೇತ್ರ ಇರಲಿಲ್ಲ. 2008ರ ಚುನಾವಣೆಯಲ್ಲಿ ಕೊಳ್ಳೇಗಾಲದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು.

ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ ಸೋಲು ಕಂಡಿದ್ದ ಧ್ರುವನಾರಾಯಣ
2009 ರ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷವು ಆರ್ ಧ್ರುವನಾರಾಯಣ ರವರನ್ನು ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿತು. ಬಿಜೆಪಿಯ ಅಭ್ಯರ್ಥಿಯಾಗಿದ್ದ ಎ.ಆರ್.ಕೃಷ್ಣಮೂರ್ತಿ ವಿರುದ್ಧ 4,002 ಮತಗಳ ಅಂತರದಿಂದ ಗೆದ್ದು ರಾಷ್ಟ್ರರಾಜಕಾರಣಕ್ಕೆ ಹೋದರು. ಸಂಸದರಾಗಿ ಆಯ್ಕೆಯಾದ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 2014 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಅವರು ಮತ್ತೆ ಎ.ಆರ್.ಕೃಷ್ಣಮೂರ್ತಿ ವಿರುದ್ಧ 1,41,182 ಮತಗಳ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದರು.
ಕ್ಷೇತ್ರದಾದ್ಯಂತ ಉತ್ತಮ ಸಂಸದ ಎಂದು ಮನೆಮಾತಾಗಿದ್ದ ಅವರು, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದ್ದರು. ಅವರ ಎರಡು ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಅಭಿವೃದ್ಧಿ ಕೆಲಸಗಳಾಗಿದ್ದವು. 2019ರ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ವಿ.ಶ್ರೀನಿವಾಸ ಪ್ರಸಾದ್ ವಿರುದ್ಧ 1,817 ಮತಗಳ ಅಂತರದಲ್ಲಿ ಸೋತು, ನಿರಾಸೆ ಅನುಭವಿಸಿದ್ದರು.

ಚಾಣಾಕ್ಷ ರಾಜಕಾರಣಿ ಎಂದೇ ಹೆಸರು ಪಡೆದಿದ್ದ ಧ್ರುವನಾರಾಯಣ
ಫಲಿತಾಂಶದ ಬಳಿಕ ಅವರು ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ವರಿಷ್ಠರು ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಹೊರಿಸಿತ್ತು. ತಮ್ಮ ಸಾರ್ವಜನಿಕ ಜೀವನದಲ್ಲಿ ಎಲ್ಲೂ ಎಡವದೇ ಇದ್ದ ಆರ್ ಧ್ರುವನಾರಾಯಣ ಯಾವುದೇ ಕಪ್ಪು ಚುಕ್ಕೆ ಹೊಂದಿರಲಿಲ್ಲ. ಕ್ಷೇತ್ರದ ಜನರ ಸಂಪರ್ಕಕ್ಕೆ ಸದಾ ಸಿಗುವ ಧ್ರುವನಾರಾಯಣ ಅವರಿಗೆ ಎದುರಾಳಿ ಪಕ್ಷಗಳ ಮುಖಂಡರೊಂದಿಗೂ ಉತ್ತಮ ಬಾಂಧವ್ಯವನ್ನೂ ಹೊಂದಿದ್ದರು.
ರಾಜಕಾರಣದ ಎಲ್ಲ ಪಟ್ಟುಗಳನ್ನು ಅರಿತಿದ್ದ ಅವರು, ಚಾಣಾಕ್ಷ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಜನಜನಿತರಾಗಿದ್ದರು. ವಿ. ಶ್ರೀನಿವಾಸ ಪ್ರಸಾದ್ ನಂತರ ಮೈಸೂರು ಭಾಗದ ದಲಿತ ಸಮುದಾಯದ ಪ್ರಮುಖ ನಾಯಕರಾಗಿ ಹೊರಹೊಮ್ಮುತ್ತಾ ಬಂದಿದ್ದರು. ಕಳೆದ ಲೋಕಸಭಾ ಚುನಾವಣೆ ಸೋಲು ಅವರಿಗೆ ಕೊಂಚ ಹಿನ್ನಡೆ ತಂದಿತ್ತು. ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಬಳಿಕ ಮತ್ತೆ ಈ ಭಾಗದಲ್ಲಿ ತಮ್ಮ ಪ್ರಭಾವವನ್ನು ಬೆಳೆಸಿಕೊಂಡಿದ್ದರು. ಮುಂದೆ ಧ್ರುವನಾರಾಯಣ ಇಲ್ಲದ ಕಾಂಗ್ರೆಸ್‌ಅನ್ನು ಊಹಿಸಿಕೊಳ್ಳುವುದು ಕಷ್ಟವಾಗಿದೆ.












Click it and Unblock the Notifications