S. R. Mahesh: ಚುನಾವಣಾ ರಾಜಕಾರಣದಿಂದ ದೂರವಾಗ್ತಾರಾ ಸಾ.ರಾ.ಮಹೇಶ್?
ಮೈಸೂರು, ಜನವರಿ 06: ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರಲ್ಲಿ ಒಬ್ಬರಾಗಿ ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆಲುವನ್ನು ಕಾಣುತ್ತಾ ಬಂದಿದ್ದ ಮಾಜಿ ಸಚಿವ ಸಾ.ರಾ.ಮಹೇಶ್ ಕಳೆದ ಬಾರಿಯ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ನಿರಾಸರಾಗಿದ್ದು, ತಾಲೂಕಿನಿಂದ ಮಾತ್ರವಲ್ಲದೆ ಚುನಾವಣಾ ರಾಜಕಾರಣದಿಂದಲೇ ದೂರ ಉಳಿಯುವ ತೀರ್ಮಾನ ಮಾಡಿದ್ದಾರಾ? ಎಂಬ ಪ್ರಶ್ನೆ ರಾಜಕೀಯ ಪಡಸಾಲೆಯಲ್ಲಿ ಎದ್ದಿದೆ. ಇದಕ್ಕೆ ಅವರ ನಡೆ ಮತ್ತು ಹೇಳಿಕೆಗಳು ಕಾರಣವಾಗಿವೆ.
ಬಿಜೆಪಿಯಿಂದ ಜೆಡಿಎಸ್‌ಗೆ ಹೋಗಿ ಅಲ್ಲಿ ರಾಜಕೀಯ ಭವಿಷ್ಯ ಕಂಡು ಕೊಂಡಿದ್ದ ಸಾ.ರಾ.ಮಹೇಶ್ ಅವರು ಅಲ್ಲಿ ಶಾಸಕರಾಗಿ, ಮಂತ್ರಿಯಾಗಿ, ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತ ವಲಯದಲ್ಲಿ ಕಾಣಿಸಿಕೊಂಡವರಾಗಿದ್ದಾರೆ. ಕೆ.ಆರ್.ನಗರದಲ್ಲಿ ಶಾಸಕರಾಗಿ ಜನರಿಗೆ ಹತ್ತಿರವಾಗಿದ್ದಲ್ಲದೆ, ಅವರು ಮಾಡಿದ ಸಮಾಜ ಸೇವೆಗಳ ಬಗ್ಗೆ ಇವತ್ತಿಗೂ ಕೆ.ಆರ್.ನಗರದ ಜನ ಮಾತನಾಡಿಕೊಳ್ಳುತ್ತಾರೆ. ಆದರೆ ಕಳೆದ 2023ರ ವಿಧಾನಸಭಾ ಚುನಾವಣೆ ಅವರ ಕನಸನ್ನು ನುಚ್ಚು ನೂರು ಮಾಡಿತ್ತು. ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸಕ್ಕೆ ತಣ್ಣೀರು ಎರಚಿತ್ತು.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಅವರು ತಮ್ಮ ಕಾರ್ಯಸ್ಥಾನವಾಗಿದ್ದ ಕೆ.ಆರ್.ನಗರದ ಅರ್ಥಾತ್ ತಾಲೂಕು ರಾಜಕೀಯದಿಂದ ಬಹುತೇಕ ದೂರವೇ ಸರಿದಂತೆ ಗೋಚರಿಸುತ್ತಿದೆ. ಒಂದು ವೇಳೆ ಅವರೇನಾದರೂ ಮುಂದಿನ ಚುನಾವಣೆಯಲ್ಲಿ ಕೆ.ಆರ್.ನಗರದಿಂದಲೇ ಮತ್ತೆ ಗೆದ್ದೇ ಗೆಲ್ಲಬೇಕು ಎಂಬ ಹಠಕ್ಕೆ ಬಿದ್ದಿದ್ದರೆ, ಹಾಲಿ ಕಾಂಗ್ರೆಸ್ ಶಾಸಕ ಡಿ.ರವಿಶಂಕರ್ ಬಗ್ಗೆ ಟೀಕೆ ಮಾಡುವುದಾಗಲೀ, ಹೇಳಿಕೆಗಳನ್ನು ನೀಡುವುದಾಗಲೀ ಅಥವಾ ತಾಲೂಕಿನಲ್ಲಿ ಮುಂದಿನ ಚುನಾವಣೆಗೆ ಬೇಕಾದ ಸಿದ್ಧತೆಗಳನ್ನು ಈಗಿನಿಂದಲೇ ಮಾಡಲು ಏನಾದರೊಂದು ತಂತ್ರಗಳನ್ನು ರೂಪಿಸುತ್ತಿದ್ದರೇನೋ? ಆದರೆ ಅದ್ಯಾವುದು ಸದ್ಯಕ್ಕೆ ಕಾಣಿಸುತ್ತಿಲ್ಲ.
ತಾಲೂಕು ರಾಜಕಾರಣದಿಂದ ದೂರವಾಗಿದ್ದೇಕೆ?
ಕೆ.ಆರ್.ನಗರ ತಾಲೂಕು ರಾಜಕೀಯದಿಂದ ಒಂದು ವೇಳೆ ಸಾ.ರಾ.ಮಹೇಶ್ ಅವರು ಹಿಂದೆ ಸರಿದಿದ್ದೇ ಆದರೆ ಅದರ ಲಾಭ ಮತ್ತೆ ಕಾಂಗ್ರೆಸ್ ಗೆ ಆಗಲಿದೆ. ಹಾಲಿ ಶಾಸಕ ರವಿಶಂಕರ್ ತಾಲೂಕು ವ್ಯಾಪ್ತಿಯಲ್ಲಿ ಇನ್ನಷ್ಟು ಗಟ್ಟಿಯಾಗುವ ಸಾಧ್ಯತೆಯಿದೆ. ಇಲ್ಲಿ ಸಾ.ರಾ.ಮಹೇಶ್ ದೂರ ಸರಿದಷ್ಟು ಜೆಡಿಎಸ್ ವರ್ಚಸ್ಸು ಕಡಿಮೆಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಈಗಾಗಲೇ ಮೈಸೂರಿನಿಂದಲೇ ರಣಕಹಳೆ ಮೊಳಗಿಸುವ ತೀರ್ಮಾನವನ್ನು ಜೆಡಿಎಸ್ ವರಿಷ್ಟರು ಮಾಡಿದ್ದಾರೆ. ಹೀಗಿರುವಾಗ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಗೆಲುವು ಪಡೆಯಬೇಕಾದರೆ ಮೈಸೂರು ಗ್ರಾಮೀಣ ಭಾಗದಲ್ಲಿ ಸಾ.ರಾ.ಮಹೇಶ್ ಪ್ರಭಾವ ತೋರಲೇ ಬೇಕಾಗಿದೆ.

ಕೆ.ಆರ್.ನಗರ ಗ್ರಾಮೀಣ ಭಾಗದಲ್ಲಿ ಜೆಡಿಎಸ್ ಸದೃಢವಾಗಿದೆ. ಹೀಗಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಮತ್ತು ತಾಲೂಕು ಮಟ್ಟದ ನಾಯಕರನ್ನು ಒಟ್ಟಾಗಿ ಸಂಘಟಿಸ ಬೇಕಾದರೆ ಸಾ.ರಾ.ಮಹೇಶ್ ಅವರ ಉಪಸ್ಥಿತಿ ಅಗತ್ಯವಿದೆ. ಆದರೆ ಅವರು ಕಳೆದ ವಿಧಾನಸಭಾ ಚುನಾವಣೆ ನಂತರ ಕೆ.ಆರ್.ನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೆ, ಮೈಸೂರಿನಲ್ಲಿ ಕುಟುಂಬದೊಂದಿಗೆ ನೆಮ್ಮದಿಯಾಗಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಕೆ.ಆರ್.ನಗರದಲ್ಲಿ ರಾಜಕೀಯ ಮುಂದುವರೆಸುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.
ನಿಮಗಿಷ್ಟ ಬಂದವರ ಆಯ್ಕೆ ಮಾಡಿಕೊಳ್ಳಿ
ಇದಕ್ಕೆ ಒತ್ತು ನೀಡುವಂತೆ ಇತ್ತೀಚೆಗೆ ಕೆ.ಆರ್.ನಗರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಶಿವರಾಮು ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡುತ್ತಾ ಇತ್ತೀಚಿನ ದಿನಗಳಲ್ಲಿ ರಾಜಕೀಯ ಬೇಸರ ತಂದಿದೆ ತಾಲೂಕು ರಾಜಕಾರಣಕ್ಕೆ ನಾನು ಬರಬಾರದು ಎಂದೇ ದೂರವಾಗಿ ಕುಟುಂಬದೊಂದಿಗೆ ನೆಮ್ಮದಿಯಾಗಿದ್ದೇನೆ ಎಂಬ ಮಾತನ್ನು ಹೊರಹಾಕಿದ್ದಲ್ಲದೆ, ನಾನು ರಾಜಕೀಯ ಬಿಡುವುದಿಲ್ಲ. ರಾಜಕೀಯ ಗುರುಗಳಾಗಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಜೊತೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದಿದ್ದರು.

ಚುನಾವಣೆ ಬೇಸರ ತಂದಿದ್ದು ರಾಜಕಾರಣ ಸಾಕಾಗಿದೆ. ನಿಮ್ಮ ಕ್ಷೇತ್ರದಲ್ಲಿ ನಿಮಗಿಷ್ಟ ಬಂದವರನ್ನು ಆಯ್ಕೆ ಮಾಡಿಕೊಳ್ಳಿ ನಿಮ್ಮೊಂದಿಗೆ ನಾನು ಕೂಡ ಇರುತ್ತೇನೆ ಎಂಬ ಮಾತನ್ನು ಹೇಳಿದ್ದು ಅಚ್ಚರಿ ಮೂಡಿಸಿತ್ತು. ಇಷ್ಟಕ್ಕೂ ಅವರಿಗೆ ಬೇಸರ ತಂದಿದ್ದು ಅವರ ಸಮುದಾಯದ ಕೆಲವರು ಕೈಹಿಡಿಯಲಿಲ್ಲ ಎಂಬ ವಿಚಾರ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಇನ್ನು ಮೂರು ವರ್ಷ ಕಳೆಯುವ ಹೊತ್ತಿಗೆ ಇನ್ನಷ್ಟು ಬದಲಾವಣೆಗಳಾಗಲಿದ್ದು, ಇದಲ್ಲೆವನ್ನು ಗಮನಿಸಿರುವ ಅವರು ತನ್ನ ಕುಟುಂಬವನ್ನು ರಾಜಕಾರಣಕ್ಕೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. ಜತೆಗೆ ಕಾರ್ಯಕರ್ತರಿಗೆ ನಮಗಿಂತ ಉತ್ತಮವಾದವರು ಇದ್ದರೆ ಆಯ್ಕೆ ಮಾಡಿಕೊಳ್ಳಿ ಎಂಬ ಸಲಹೆ ನೀಡಿದ್ದಾರೆ.
ಸಾ.ರಾ.ಮಹೇಶ್ ಅವರ ನಡೆ ಏನು?
ಇದೆಲ್ಲದರ ನಡುವೆ ಬೇಡಪ್ಪ ರಾಜಕೀಯ ಸಹವಾಸ. ಈಗಾಗಲೇ ಶಾಸಕರಾಗಿರುವವರು, ಶಾಸಕರಾಗಿ ಅಧಿಕಾರ ಮಾಡಿರುವವರನ್ನು ಕೇಳಿನೋಡಿ ಶಾಸಕರುಗಳ ಕಥೆ ಏನು ಎಂಬುದನ್ನು ಅವರು ಹೇಳುತ್ತಾರೆ, ರಾಜಕೀಯದ ಜೊತೆಗೆ ಬೇರೊಂದು ಉದ್ಯಮ, ವ್ಯವಹಾರ ಮಾಡುವವರಿಗೆ ಮಾತ್ರ ರಾಜಕೀಯದಲ್ಲಿ ಒಂದಷ್ಟು ದಿನ ಜನರ ಸೇವೆ ಮಾಡಲು ಸಾಧ್ಯವಾಗಲಿದೆ. ರಾಜಕಾರಣದಿಂದಲೇ ಜನರ ಸೇವೆ ಮಾಡುತ್ತೇನೆ ಎಂದರೆ ಸಾಧ್ಯವಾಗದು. ಇತ್ತೀಚಿನ ರಾಜಕಾರಣ ಹಣ, ಜಾತಿ. ಮತಗಳ ನಡುವೆ ಸಿಲುಕಿಕೊಂಡಿದೆ ನನ್ನ ಪಾಡಿಗೆ ನನ್ನನ್ನು ಬಿಡಿ ನನ್ನ ಉಸಿರಿರುವ ತನಕ ಜನರ ಸೇವೆ ಮಾತ್ರ ಬಿಡುವುದಿಲ್ಲ ಎಂದಿದ್ದಾರೆ.
ಈಗಾಗಲೇ ಪಕ್ಷದ ಮುಖಂಡರು ನೀವು ತಾಲೂಕಿನ ರಾಜಕಾರಣದಿಂದ ದೂರ ಇರಬಾರದು. ನಿಮ್ಮ ಜೊತೆಯಲ್ಲೇ ಇದ್ದವರು ಏನು ಮಾಡಿದ್ದಾರೆ ಎಂಬುದು ಈಗಾಗಲೇ ನಿಮಗೆ ಗೊತ್ತಾಗಿದೆ. ಜನ ನಿಮ್ಮನ್ನು ಮೂರು ಬಾರಿ ಶಾಸಕರಾಗಿ ಸಚಿವರಾಗಿ ಮಾಡಿದ್ದಾರೆ. ಲಕ್ಷಾಂತರ ಮತದಾರರು ಕಾರ್ಯಕರ್ತರು ನಿಮ್ಮೊಂದಿಗಿದ್ದಾರೆ. ನಿಮ್ಮನ್ನು ನಾವು ಕಳೆದುಕೊಳ್ಳುವುದಿಲ್ಲ. ನಿಮ್ಮ ಮಾರ್ಗದರ್ಶನದಲ್ಲಿ ನಿಮ್ಮ ಪುತ್ರ ಜಯಂತ್ ಅವರನ್ನು ಸಾರ್ವಜನಿಕರ ಸೇವೆಗೆ ಬಿಡಿ. ನೀವು ಸೋತರೂ ಸಾರ್ವಜನಿಕರ ಸೇವೆ ಮರೆತಿಲ್ಲ ಈಗಲೂ ಅದೇ ರೀತಿ ಮಾಡುತ್ತಿದ್ದೀರಿ ಅದನ್ನು ತಾಲೂಕಿನಲ್ಲಿ ನಿಮ್ಮ ಪುತ್ರನ ಮೂಲಕ ಮಾಡಿಸಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸಾ.ರಾ.ಮಹೇಶ್ ಅವರ ನಿರ್ಧಾರ ಏನು ಎಂಬುದನ್ನು ಕಾದು ನೋಡಬೇಕಿದೆ.
-
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್: ಕಾಂಗ್ರೆಸ್ ಉಗ್ರರಿಗೆ 'ಗ್ಯಾರಂಟಿ ಭಾಗ್ಯ' ನೀಡಿದರೂ ಅಚ್ಚರಿಯಿಲ್ಲ; ವಿಜಯೇಂದ್ರ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications