PM Narendra Modi: ಬಿಜೆಪಿ ಗೆದ್ದರೆ ಕರ್ನಾಟಕ ನಂಬರ್ ಒನ್: ನಂಜನಗೂಡಿನಲ್ಲಿ ಪ್ರಧಾನಿ ಮೋದಿ ಶಪಥ
ಮೈಸೂರು, ಮೇ, 08: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ನಂಜನಗೂಡಿಗೆ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕರ್ನಾಟಕ ವಿಕಾಸ ಹಾಗೂ ಅಭಿವೃದ್ಧಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಬೇಕಾದರೆ ಬಿಜೆಪಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ನಂಜಗೂಡಿನ ಎಲಚಗೆರೆ ಗ್ರಾಮದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, "ಭಾರತಕ್ಕೆ ವಿದೇಶಿ ಬಂಡವಾಳ ನಿರಂತರವಾಗಿ ಹರಿದುಬರುತ್ತಿದೆ. ಇದರಿಂದ ಆರ್ಥಿಕ ವ್ಯವಸ್ಥೆಯಲ್ಲಿ ಮೂರನೇ ಸ್ಥಾನದಲ್ಲಿರುವ ದೇಶ ನಂಬರ್ ಒನ್ ಆಗುವ ದಿನ ದೂರವಿಲ್ಲ. ಅದೇ ರೀತಿ ಕರ್ನಾಟಕವನ್ನು ನಂಬರ್ ಒನ್ ಮಾಡುವುದು ಬಿಜೆಪಿಯ ಸಂಕಲ್ಪವಾಗಿದೆ. ಇದು ಸಾಧ್ಯವಾಗಬೇಕಾದರೆ ಜನತೆ ಬಿಜೆಪಿಗೆ ಮತ ಚಲಾಯಿಸಬೇಕಿದೆ ಎಂದು ಮನವಿ ಮಾಡಿದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ರಾಜ್ಯ ಸರ್ವಾಂಗೀಣ ಅಭಿವೃದ್ಧಿ ಕಾಣುತ್ತದೆ. ಶಿಕ್ಷಣ, ಸ್ಟಾರ್ಟ್ ಅಪ್, ರಸ್ತೆ, ಮೆಟ್ರೋ, ರೈಲು, ಇಂಡಸ್ಟ್ರಿ, ಆರೋಗ್ಯ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಸಮಗ್ರ ಅಭಿವೃದ್ಧಿ ಆಗುತ್ತದೆ. ಹಾಗೆಯೆ ಎಸ್‌ಸಿ, ಎಸ್‌ಟಿ, ಒಬಿಸಿಗೆ ಸಕಲ ಸೌಲಭ್ಯ ಸಿಗುತ್ತವೆ. ಮಹಿಳೆಯರು, ಮಕ್ಕಳು ಸುರಕ್ಷತೆಯಿಂದ ಇರುತ್ತಾರೆ ಎಂದರು. ಜನರು ಮೋದಿ ಮೋದಿ ಎಂಬ ಘೋಷಣೆ ಕೂಗುತ್ತಾರೆ. ಈ ನಿಮ್ಮ ಪ್ರೀತಿಯನ್ನು ನಾನು ಮರೆಯುವುದಿಲ್ಲ. ಹೃದಯದಿಂದ ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ'' ಎಂದರು.
ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ
ಮತ್ತೊಂದೆಡೆ ಡಬಲ್ ಇಂಜಿನ್ ಸರ್ಕಾರದಿಂದ ಡಬಲ್ ದರೋಡೆಯಾಗಿದೆ. ಪ್ರಧಾನಮಂತ್ರಿಗಳೇ 40% ಕಮಿಷನ್ ಲಂಚದಲ್ಲಿ ಯಾವ ಇಂಜಿನ್‌ಗೆ ಎಷ್ಟು ಪಾಲು ದೊರೆತಿದೆ? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
ಆನೇಕಲ್‌ನಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಮಂತ್ರಿಗಳು ಇಲ್ಲಿಗೆ ಬಂದು ಕಾಂಗ್ರೆಸ್ ಪಕ್ಷ 91 ಬಾರಿ ನನ್ನನ್ನು ಟೀಕೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಇದಕ್ಕೂ ಮೊದಲು ರಾಜ್ಯದಲ್ಲಿ ಭ್ರಷ್ಟಾಚಾರ ತಡೆಯಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನಿಸಿದ ಅವವರು, ಎಷ್ಟು ಜನರನ್ನು ಜೈಲಿಗೆ ಹಾಕಿದ್ದೀರಿ? ನಾನು ಲೋಕಸಭೆಯಲ್ಲಿ ನಿಮಗೆ ಅಧಾನಿ ಅವರ ಜತೆ ನಿಮ್ಮ ಸಂಬಂಧದ ಬಗ್ಗೆ ಪ್ರಶ್ನೆ ಕೇಳಿದ್ದೆ.
ನನ್ನನ್ನು ಅನರ್ಹ ಮಾಡಿದರು. ನಾನು ಭ್ರಷ್ಟಾಚಾರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಲೋಕಸಭೆಯಿಂದ ಹೊರಗೆಹಾಕಿದರು ಎಂದು ಅಸಮಾಧಾನ ಹೊರ ಹಾಕಿದರು. ರಾಜ್ಯದಲ್ಲಿ ಕಳ್ಳತನ ಆಗಿದ್ದರೆ ಅದರ ಲಾಭ ದೆಹಲಿಗೂ ತಲುಪಿರುತ್ತದೆ. ಇಲ್ಲದಿದ್ದರೆ ಪ್ರಧಾನಮಂತ್ರಿಗಳು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳಬೇಕಿತ್ತು. ಕಳೆದ 3 ವರ್ಷಗಳಲ್ಲಿ ಮೋದಿ ಅವರು ಏನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಭ್ರಷ್ಟಾಚಾರ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಒಂದು ಮಾತನ್ನು ಆಡಿಲ್ಲ. ಮಣಿಪುರದಲ್ಲಿ ದೊಡ್ಡ ಗಲಾಟೆ ನಡೆದು ಜನ ಸಾಯುತ್ತಿದ್ದರಾ. ಆದರೂ ಪ್ರಧಾನಿಗಳು ಹಾಗೂ ಗೃಹಸಚಿವರಿಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ದ್ವೇಷ ರಾಜಕೀಯದ ಫಲ ಇದಾಗಿದೆ. ಮಣಿಪುರ ಹೊತ್ತಿ ಉರಿಯುತ್ತಿದ್ದರೆ ಅದಕ್ಕೆ ದ್ವೇಷ ರಾಜಕಾರಣವೇ ಕಾರಣ. ಈ ರಾಜನೀತಿ ವಿರುದ್ಧವಾಗಿಯೇ ನಾವು ಭಾರತ ಜೋಡೋ ಯಾತ್ರೆ ಮಾಡಿದೆವು. ಇದು ನಮ್ಮ ವಿಚಾರಧಾರೆ.
ನಿಮ್ಮ ಸರ್ಕಾರವನ್ನು ಕಳ್ಳತನ ಮಾಡಿ ಮೂರು ವರ್ಷಗಳಾಗಿವೆ. ನೀವು ಆರಿಸಿದ್ದು, ಬೇರೆ ಸರ್ಕಾರ, ಆದರೆ ಆಡಳಿತ ಮಾಡಿದ್ದು, ಬೇರೆ ಸರ್ಕಾರ. ಶಾಸಕರನ್ನು ಹಣದಿಂದ ಖರೀದಿ ಮಾಡಿ ಸರ್ಕಾರವನ್ನು ಕದಿಯಲಾಗಿದೆ. ಕಳ್ಳತನದಿಂದ ರಚನೆಯಾದ ಸರ್ಕಾರ ಅದು ಕಳ್ಳತನ ಹೊರ್ತಾಗಿ ಬೇರೇನು ಮಾಡುವುದಿಲ್ಲ. ಅವರಿಗೆ ಬೇರೆ ಏನೂ ಗೊತ್ತಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications