ಎಲ್ಲೂ ಹೋಗಲ್ಲ, ಬಿಜೆಪಿ ಬಿಟ್ಟು ನಾನು ಎಲ್ಲೂ ಹೋಗಲ್ಲ: ರಾಮ್ ದಾಸ್
ಮೈಸೂರು, ಫೆಬ್ರವರಿ 3 : ಬಿಜೆಪಿ ನನಗೆ ತಾಯಿ ಇದ್ದ ಹಾಗೆ. ತಾಯಿಯನ್ನು ಬಿಟ್ಟು ಮಗು ಬೇರೊಬ್ಬರ ಹಿಂದೆ ಹೋಗುವುದೇ ನೀವೇ ಹೇಳಿ? ಹೀಗೆ ಪ್ರಶ್ನೆಗೊಂದು ಪ್ರಶ್ನೆ ಕೇಳಿದವರು ಮಾಜಿ ಸಚಿವ ರಾಮ್ ದಾಸ್.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮ್ ದಾಸ್, ಬಿಜೆಪಿಯನ್ನು ಬಿಡುವ ಬಗ್ಗೆ ಹರಿದಾಡುತ್ತಿರುವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದರು. ಇತ್ತೀಚೆಗೆ ನಾನು ಬಿಜೆಪಿ ಬಿಡ್ತೀನಿ ಎಂಬ ವದಂತಿ ಹಬ್ಬಿತ್ತು. ಬಿಜೆಪಿ ನನ್ನ ತಾಯಿ ಇದ್ದ ಹಾಗೆ. ಬಿಜೆಪಿಯನ್ನು ಬಿಟ್ಟು ನಾನು ಹೊಗಲಾರೆ ಎಂದು ತಿಳಿಸಿದ್ದಾರೆ.
1993ರಲ್ಲಿ ನನ್ನ ತಂದೆ ಬಿಜೆಪಿಗೆ ತಂದು ಸೇರಿಸಿದರು. ಪ್ರತಿ ಬಾರಿ ಚುನಾವಣೆ ವೇಳೆಯಲ್ಲಿ ಈ ರೀತಿಯ ಮಾತುಗಳು ಕೇಳಿಬರುವುದು ಸಾಮಾನ್ಯ. ನಾನು ಒಬ್ಬ ಸಮಾಜ ಸೇವಕ. ಯಾವುದೋ ಕಾರಣಗಳಿಂದ ನನ್ನ ಸಮಾಕಾಲೀನರು ಪಕ್ಷ ಬಿಟ್ಟು ಹೋಗಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ನನ್ನ ಕೊನೆಯ ಉಸಿರು ಇರುವವರೆಗೂ ನಾನು ಬಿಜೆಪಿಯಲ್ಲಿಯೇ ಇರುತ್ತೇನೆ ಎಂದರು.

1994 ರ ಚುನಾವಣೆ ವೇಳೆಯಲ್ಲಿಯೂ ನಾನು ಟಿಕೇಟ್ ಕೇಳಿರಲಿಲ್ಲ. ಈಗಲೂ ನನಗೆ ಟಿಕೆಟ್ ಮೇಲೆ ಆಸೆ ಇಲ್ಲ. ಪಕ್ಷದ ನಿಲುವಿಗೆ ನಾನು ಬದ್ಧನಾಗಿ ಇರುತ್ತೇನೆ ಎಂದರು.
ಬಜೆಟ್ ಬಗ್ಗೆ ಶ್ಲಾಘನೆ
ಕೇಂದ್ರ ಸರಕಾರದ ಬಜೆಟ್ 125 ಕೋಟಿ ಜನರ ನಿರೀಕ್ಷೆಯಂತೆ ಮೂಡಿದೆ. ರೈತ, ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ, ಉದ್ಯೋಗ ಎಲ್ಲವೂ ಒಳಗೊಂಡಿದೆ. ಯುಪಿಎ ಸರಕಾರ 2013-14ರಲ್ಲಿ ಸಾಲ ಮಾಡಿ ತುಪ್ಪ ತಿನ್ನುವ ಬಜೆಟ್ ಮಾಡಿತ್ತು. ಒಂದು ರುಪಾಯಿ ವೆಚ್ಚದಲ್ಲಿ ಇಪ್ಪತ್ತೆಂಟು ಪೈಸೆ ಸಾಲಗಾರನಾಗಿತ್ತು. 2018-19ರ ಬಜೆಟ್ ನಲ್ಲಿ ಒಂದು ರುಪಾಯಿ ವೆಚ್ಚದಲ್ಲಿ ಹತ್ತೊಂಬತ್ತು ಪೈಸೆ ಮಾತ್ರ ಸಾಲ ಹೊಂದಿದೆ ಎಂದರು.
ತೆರಿಗೆ ರಹಿತ ಬಜೆಟ್ ಆಗಿದ್ದು, ಮೊದಲ ಬಾರಿಗೆ ತೆರಿಗೆ ಹಾಕುವ ಅವಕಾಶಗಳನ್ನು ರಾಜ್ಯ ಸರಕಾರರಗಳಿಗೆ ಬಿಡಲಾಗಿದೆ. ಸಿಂಗಾಪುರ್ ನಲ್ಲಿ ಜಿಎಸ್ ಟಿಯನ್ನು ಸುಧಾರಿಕೊಳ್ಳಲು 3 ವರ್ಷ ಬೇಕಾಯಿತು. ಆದರೆ ಭಾರತವು ಕೇವಲ ಒಂದು ವರ್ಷದಲ್ಲಿ ಬೆಳವಣಿಗೆ ಕಂಡಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪೆಟ್ರೋಲಿಯಂ ಪದಾರ್ಥಗಳ ಮೇಲೆ ಶೇಕಡಾ ಎರಡರಷ್ಟು ಅಬಕಾರಿ ಸುಂಕ ತೆರಿಗೆ ಕಡಿಮೆಯಾಗಿದ್ದು, ಇದರ ನಿಜವಾದ ಲಾಭ ಜನಸಾಮಾನ್ಯರಿಗೆ ಸಿಗಬೇಕಾದರೆ ಆಯಾ ರಾಜ್ಯಗಳು ಹಾಕುವ ಸುಂಕ ಕಡಿಮೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಬಜೆಟ್ ನಲ್ಲಿ ಸುಂಕವನ್ನು ಶೇಕಡಾ 10ರಷ್ಟು ಕಡಿಮೆ ಮಾಡಲಿ ಎಂದರು.












Click it and Unblock the Notifications