ನಾನು ಹಿಜಾಬ್ ಬಗ್ಗೆ ಮಾತನಾಡಿಲ್ಲ: ಸಿದ್ದರಾಮಯ್ಯ
ಮೈಸೂರು, ಮಾರ್ಚ್ 27; "ನಾನು ಹಿಜಾಬ್ ಕುರಿತು ಪ್ರಶ್ನೆ ಮಾಡಲಿಲ್ಲ. ಹಿಜಾಬ್ ಬೇರೆ, ದುಪಟ್ಟ ಬೇರೆ, ಬುರ್ಖಾ ಬೇರೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಸ್ವಾಮೀಜಿಗಳು ತಲೆ ಮೇಲೆ ಕಾವಿ ಹಾಕಿಕೊಳ್ಳುವುದನ್ನು ಪ್ರಶ್ನೆ ಮಾಡಿದ್ದಾರೆ ಎನ್ನುವ ಸಿದ್ದರಾಮಯ್ಯರ ಹೇಳಿಕೆ ವಿವಾದವಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸಿಡಿಮಿಡಿಗೊಳ್ಳುತ್ತಲೇ ಅವರು ಪ್ರತಿಕ್ರಿಯೆ ನೀಡಿದರು. "ನನ್ನ ಹೇಳಿಕೆಯನ್ನು ತಿರುಚಲಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಸ್ವಾಮೀಜಿಗಳ ಬಗ್ಗೆ ನಾನು ಎಂದಿಗೂ ಅಗೌರವದಿಂದ ಮಾತನಾಡುವುದಿಲ್ಲ. ಹಿಜಾಬ್ ಕುರಿತು ನ್ಯಾಯಾಲಯ ತೀರ್ಪು ನೀಡಿದೆ. ನ್ಯಾಯಾಲಯದ ಬಗ್ಗೆ ಗೌರವ ಇದೆ. ಆದರೆ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಅವರಿಗೆ ದುಪ್ಪಟ್ಟ ಹಾಕಿಕೊಂಡು ಬರಲು ಅವಕಾಶ ನೀಡಿ ಎಂದು ಸರಕಾರಕ್ಕೆ ಸಲಹೆ ನೀಡಿದ್ದೇನೆ" ಎಂದರು.

"ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರು ಬೇರೆ ಕೇಂದ್ರಗಳಿಗೆ ಪರೀಕ್ಷೆ ಬರೆಯಲು ಬಂದಾಗ ಅಲ್ಲಿ ಅವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಸರಕಾರಕ್ಕೆ ಸಲಹೆ ನೀಡಿದೆ" ಎಂದು ಹೇಳಿದರು.
"ಸ್ವಾಮೀಜಿಗಳ ಬಗ್ಗೆ ನನಗೆ ಅಪಾರ ಗೌರವವಿದೆ. ಮೊದಲಿನಿಂದಲೂ ಅವರ ಬಗ್ಗೆ ಉತ್ತಮ ಸಂಬಂಧವಿದೆ. ಸಾಕಷ್ಟು ಬಾರಿ ಮಠಗಳಿಗೂ ಹೋಗಿ ಸ್ವಾಮೀಜಿಗಳನ್ನು ಗೌರವದಿಂದ ಮಾತನಾಡಿಸಿದ್ದೇನೆ. ಅವರಿಗೆ ಅಗೌರವ ಮಾಡುವ ಪ್ರಶ್ನೆಯೇ ಇಲ್ಲ. ಮುಂದೆಯೂ ಅವರಿಗೆ ಅಗೌರವ ತೋರುವುದಿಲ್ಲ" ಎಂದು ಸ್ಪಷ್ಟನೆ ನೀಡಿದರು.
ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದಾಗ "ನೀನು ಆರ್‌ಎಸ್‌ಎಸ್‌ನವನು ಇದ್ದಂಗಿದ್ದಿಯಲ್ಲ. ನೀನೇ ವಿವಾದ ಮಾಡಿರುವುದಾ?" ಎಂದು ಪ್ರಶ್ನಿಸಿದರು.
ಮತ್ತೊಮ್ಮೆ "ಅರ್ಥ ಆಗುತ್ತಾ, ಇಲ್ವಾ?" ಎಂದು ಗದರಿದರು. "ನೀನು ಯಾವ ಪಕ್ಷದವನು? ನಾನು ಹೇಳಿರುವುದನ್ನು ತೋರಿಸುವಾಗಿದ್ದರೆ ತೋರಿಸು, ಇಲ್ಲದಿದ್ದರೆ ಸುಮ್ಮನಿರು" ಎಂದು ಕಿಡಿಕಾರಿದರು.












Click it and Unblock the Notifications