ಈ ಬಾರಿ ಜಂಬೂ ಸವಾರಿಗೆ ವೈಮಾನಿಕ ಭದ್ರತೆ
ಮೈಸೂರು, ಅ.2 : ವಿಶ್ವಪ್ರಸಿದ್ಧ ನಾಡಹಬ್ಬ ದಸರಾದ ಜಂಬೂ ಸವಾರಿ ಮೇಲೆ ಇದೇ ಮೊದಲ ಬಾರಿಗೆ ಮಾನವರಹಿತ ವೈಮಾನಿಕ ವಾಹನ ಹದ್ದಿನ ಕಣ್ಣಿಡಲಿದೆ. ಮೆರವಣಿಗೆಯ ಪ್ರತಿಕ್ಷಣದ ಚಿತ್ರವನ್ನು ಸೆರೆ ಹಿಡಿದು ಅರಮನೆಯಲ್ಲಿರುವ ಕಂಟ್ರೋಲ್ ರೂಂಗೆ ರವಾನಿಸಲಿದೆ.
ಮಂಗಳವಾರ ಮೈಸೂರಿನಲ್ಲಿ ದಸರಾ ಬಂದೋಬಸ್ತ್ ಕುರಿತು ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ, ಈ ಕುರಿತು ವಿವರ ನೀಡಿದರು. ಶಿವಸೇನೆ ಮುಖ್ಯಸ್ಥರಾಗಿದ್ದ ಬಾಳಾ ಠಾಕ್ರೆ ಅಂತಿಮ ಯಾತ್ರೆ ಸಂದರ್ಭ ಎರಡು ಮಾನವರಹಿತ ವೈಮಾನಿಕ ವಾಹನ (ಯುಎವಿ) ಬಳಸಲಾಗಿತ್ತು.

ಈಗ ಅರಮನೆಯಿಂದ ಬನ್ನಿಮಂಟಪವರೆಗೆ ಸಾಗುವ ಜಂಬೂ ಸವಾರಿ ಮೆರವಣಿಗೆ ಉದ್ದಕ್ಕೂ 300 ಮೀಟರ್ ಎತ್ತರದಲ್ಲಿ ಈ ವಿಮಾನ ಹಾರಾಟ ನಡೆಸಲಿದ್ದು, ಪ್ರತಿಕ್ಷಣದ ಚಿತ್ರವನ್ನು ಕಂಟ್ರೋಲ್ ರೂಂಗೆ ರವಾನಿಸಲಿದೆ ಎಂದರು. ಆನೆಗಳಿಗೆ ತೊಂದರೆ ಆಗಬಹುದು ಎಂದು ಜಂಬೂ ಸವಾರಿ ವೇಳೆ ಸಾರಂಗ್ ಹೆಲಿಕಾಪ್ಟರ್ ಬಳಸಬೇಕೆಂಬ ಆಲೋಚನೆ ಕೈ ಬಿಡಲಾಗಿದೆ ಎಂದರು.
ಪೊಲೀಸ್ ಭದ್ರತೆ : ಬಾಂಬ್ ಪತ್ತೆ, ನಿಷ್ಕ್ರಿಯ ದಳ ಹಾಗೂ ವಿಧ್ವಂಸಕ ಕೃತ್ಯ ತಪಾಸಣಾ ತಂಡಗಳು ಜಂಬೂ ಸವಾರಿ ಬಂದೋಬಸ್ತ್ ಗೆ ನೆರವಾಗಲಿವೆ. ಆಂತರಿಕ ಭದ್ರತಾ ವಿಭಾಗದ ಕಮಾಂಡೋ ಪಡೆಗಳನ್ನು ಜಂಬೂ ಸವಾರಿ ಹಾಗೂ ಬನ್ನಿಮಂಟಪದ ಪಂಜಿನ ಕವಾಯಿತು ಕಾರ್ಯಕ್ರಮಕ್ಕೆ ನಿಯೋಜಿಸಲಾಗುವುದು ಎಂದು ಸಲೀಂ ಹೇಳಿದರು.
ಸ್ಥಳೀಯ ಸಿಸಿಬಿ ಪೊಲೀಸರೊಂದಿಗೆ ಕೇರಳ ಹಾಗೂ ತಮಿಳುನಾಡು ರಾಜ್ಯಗಳ ಪೊಲೀಸರು ಕೆಲಸ ಮಾಡಲಿದ್ದಾರೆ. ಅಪರಿಚಿತ ವ್ಯಕ್ತಿಗಳು ಮಾರಾಟಗಾರರ ಸೋಗಿನಲ್ಲಿ ಬರುವ ಸಾಧ್ಯತೆಗಳಿದ್ದು, ಅಂಥವರ ಬೆರಳಚ್ಚು, ಫೋಟೋ ಸಂಗ್ರಹಿಸುವುದಾಗಿ ಅವರು ತಿಳಿಸಿದರು.
6 ಸಾವಿರಕ್ಕೂ ಹೆಚ್ಚು ಪೊಲೀಸರು : ದಸರಾ ಬಂದೋಬಸ್ತ್ ಅ.5ರಿಂದ 14 ರವರೆಗೆ 6,227 ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯದ ಇತರೆ ಜಿಲ್ಲೆಗಳಿಂದ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳು ಆಗಮಿಸಲಿದ್ದಾರೆ ಎಂದರು.
ಸಂಚಾರಿ ವ್ಯವಸ್ಥೆ ನಿಯಂತ್ರಣಕ್ಕಾಗಿ ಬೆಂಗಳೂರಿಂದ 461ಕ್ಕೂ ಹೆಚ್ಚು ಸಂಚಾರಿ ಪೊಲೀಸರು ಆಗಮಿಸಲಿದ್ದಾರೆ. ಎನ್‌ಸಿಸಿ, ಹೋಂಗಾರ್ಡ್ ಹಾಗೂ ಸೆಕ್ಯೂರಿಟಿ ಗಾರ್ಡ್‌ಗಳು ಪೊಲೀಸರಿಗೆ ಸಹಕಾರ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ವಿಜಯದಶಮಿ ದಿನದಂದು ಜಂಬೂ ಸವಾರಿ ಸಾಗುವ ವೇಳೆ ಅವಧಿ ಮುನ್ನ ರಸ್ತೆ ಬಂದ್ ಮಾಡುವುದಿಲ್ಲ. ಸವಾರಿ ಸಾಗುತ್ತಿದ್ದಂತೆ ಇತ್ತ ಒಂದೊಂದಾಗಿ ರಸ್ತೆಗಳನ್ನು ಸಂಚಾರಕ್ಕೆ ತೆರವುಗೊಳಿಸಲಾಗುವುದು ಎಂದು ಹೇಳಿದರು.












Click it and Unblock the Notifications