ಮೈಸೂರಲ್ಲಿ ಭಾರೀ ಮಳೆಗೆ ಆಸ್ತಿಪಾಸ್ತಿ, ಪ್ರಾಣ ಹಾನಿ
ಮೈಸೂರು, ಜೂನ್ 03 : ಮಳೆ ಬರಲಿಲ್ಲ ಎಂದು ಮುಗಿಲತ್ತ ದೃಷ್ಟಿನೆಟ್ಟು ಕೂತಿದ್ದ ರೈತರಿಗೆ ದಿಢೀರ್ ಸುರಿದ ಭಾರೀ ಮಳೆ, ಒಂದೆಡೆ ಸಂತಸ ತಂದರೆ ಮತ್ತೊಂದೆಡೆ ಲಕ್ಷಾಂತರ ರೂ. ನಷ್ಟ ಮಾಡಿದೆ.
ಎಚ್.ಡಿ.ಕೋಟೆ ತಾಲೂಕಿನ ಸರಗೂರು ಸಮೀಪದ ಕಂದಲಿಕೆ ಹೋಬಳಿ ವ್ಯಾಪ್ತಿಯ ತೆಲಗುಮಸಹಳ್ಳಿ, ಕಾಟವಾಳು, ಪುರದಸೆಡ್ಡು, ಬಂಕವಾಡಿ, ಮೊಳಿಯೂರು, ಬಿ.ಮಟಕರೆ, ಹೆಗ್ಗನೂರು ಗ್ರಾಮಗಳ ಸುತ್ತ ಮತ್ತ ಭಾರಿ ಮಳೆ ಸುರಿದಿದ್ದು ಕೆರೆ ಕಟ್ಟೆಗಳು ಒಡೆದು ಹೋಗಿವೆ. [ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ]

ತೆಲಗುಮಸಹಳ್ಳಿ ಗ್ರಾಮದ ಸೇತುವೆ ಮೇಲೆ ಹಾಕಲಾಗಿದ್ದ ಹೊಸ ರಸ್ತೆಯ ಡಾಂಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ, ಸೇತುವೆ ಮೇಲಿನ ತಡೆಗೋಡೆಯೂ ನೆಲಸಮವಾಗಿದೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸಾಗರೆ ವ್ಯಾಪ್ತಿಯಲ್ಲಿ ಮಳೆಗಾಳಿಗೆ ಬಾಳೆತೋಟಗಳು ನೆಲಕಚ್ಚಿವೆ. [ಜೂನ್ ಮೊದಲ ದಿನವೇ ಬೆಂಗಳೂರಲ್ಲಿ ಭಾರೀ ಮಳೆ]

ನಂಜನಗೂಡು ತಾಲೂಕಿನ ಮರಳೂರು ಗ್ರಾಮದಲ್ಲಿ ಮಳೆಯೊಂದಿಗೆ ಸಿಡಿಲು ಬಡಿದ ಪರಿಣಾಮ ಸಿದ್ರಾಮು (32) ಎಂಬಾತ ಜತೆಗಿದ್ದ ಹಸು ಮತ್ತು ಮೇಕೆಯೊಂದಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಕ್ಷಣ ತಹಸಿಲ್ಧಾರ್ ಎಚ್.ರಾಮಪ್ಪ, ಗ್ರಾಮಾಂತರ ಪಿಎಸ್‌ಐ ಪುನೀತ್, ಮುಖಂಡ ಜವರಾಯಿ, ಹಸಿರು ಸೇನೆ ತಾಲೂಕು ಅಧ್ಯಕ್ಷ ವಿದ್ಯಾಸಾಗರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೈಸೂರು ಜಿಲ್ಲೆಯ ಕೆಲವೆಡೆ ಮಳೆ ಬಾರದೆ ರೈತರು ಕಂಗಾಲಾಗಿದ್ದರೆ, ಮತ್ತೊಂದೆಡೆ ಭಾರೀ ಮಳೆ ಸುರಿಯುವುದರೊಂದಿಗೆ ಆಸ್ತಿ, ಪಾಸ್ತಿ, ಪ್ರಾಣ ಹಾನಿಯಾಗಿದೆ. ಇನ್ನೂ ಕೆಲ ದಿನ ಇದೇ ರೀತಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications