ಮಳೆಗೆ ಧುಮ್ಮಿಕ್ಕಿದ ಗಾಣಾಳು ಜಲಧಾರೆ ಎಂಥಾ ಚಂದ!
ಮೈಸೂರು, ನವೆಂಬರ್, 07: ಮಲೆನಾಡಿನಲ್ಲಿ ಮಳೆಗಾಲದಲ್ಲಿ ಜಲಪಾತಗಳು ಧುಮ್ಮಿಕ್ಕುತ್ತವೆ. ಇದೀಗ ಮಳೆ ಕಡಿಮೆಯಾಗಿರುವುದರಿಂದ ಅವುಗಳ ಭೋರ್ಗರೆತವೂ ಇಳಿಮುಖವಾಗಿದೆ. ಆದರೆ ಮಂಡ್ಯದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಒಂದೆಡೆ ಪ್ರವಾಹ ಸೃಷ್ಟಿಸಿದರೆ, ಮತ್ತೊಂದೆಡೆ ಸೊರಗಿ ಹೋಗಿದ್ದ ಜಲಧಾರೆಗೆ ಜೀವ ತುಂಬಿದೆ.
ಮಂಡ್ಯ ಜಿಲ್ಲೆ ಮಳವಳ್ಳಿಯ ತೊರೆಕಾಡನಹಳ್ಳಿಯ ಶಿಂಷಾ ನದಿಯಲ್ಲಿ ಮೈದುಂಬಿ ಹರಿಯುತ್ತಿರುವ ನೀರು ಕಾವೇರಿ ನದಿಗೆ ಸೇರುವ ಮಾರ್ಗ ಮಧ್ಯೆ ಸಿಗುವ ಗಾಣಾಳು ಜಲಪಾತ(ಬೆಂಕಿ ಹಳ್ಳ) ಭೋರ್ಗರೆದು ಧುಮುಕುತ್ತಿದೆ. ಈ ಜಲಧಾರೆಯು ಮಳವಳ್ಳಿ ಸಮೀಪದ ಹಲಗೂರಿನಿಂದ 12 ಕಿ.ಮೀ., ಗಾಣಾಳು ಗ್ರಾಮದಿಂದ 6 ಕಿ.ಮೀ. ದೂರದಲ್ಲಿದೆ.[ಬರಡಾಗಿದ್ದ ಶಿಂಷಾ ನದಿಗೆ ಮತ್ತೆ ಜೀವಕಳೆ ತಂದ ಮಳೆ]

ಜಲಪಾತ ಪ್ರಿಯರಿಗೆ ಗಾಣಾಳು ಜಲಪಾತ ತನ್ನ ಸೊಬಗನ್ನು ಉಣಿಸಲು ಸಜ್ಜಾಗಿ ನಿಂತಂತಿದೆ. ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ ಮತ್ತು ಕೆರೆಗೋಡು ಸಮೀಪದ ಚಿಕ್ಕಕೆರೆ ಕೋಡಿ ಒಡೆದಿರುವುದೇ ಈ ಸೌಂದರ್ಯಕ್ಕೆ ಕಾರಣ.[ಮದ್ದೂರಿನಲ್ಲಿ ಪ್ರವಾಹ ನೋಡಲು ಮುಗಿಬಿದ್ದ ಜನ!]
ಶಿಂಷಾ ನದಿಯ ನೀರು ಕಾವೇರಿ ನದಿಗೆ ಸೇರುವ ಮಾರ್ಗ ಮಧ್ಯೆ ಸಿಗುವ ಗಾಣಾಳು ಜಲಪಾತ (ಬೆಂಕಿಹಳ್ಳ) ಭೋರ್ಗರೆತದ ನಯನ ಮನೋಹರ ದೃಶ್ಯವನ್ನು ನೋಡಲು ಸುತ್ತಮುತ್ತಲಿನ ಜನರಲ್ಲದೆ ದೂರದ ಪ್ರವಾಸಿಗರು ಬರುತ್ತಿದ್ದು, ಜಲಪಾತದ ಸೌಂದರ್ಯಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಇನ್ನು ಕೆರೆ-ಕಟ್ಟೆಯ ನೀರು ಶಿಂಷಾ ನದಿಗೆ ಸೇರುವುದರಿಂದ ನದಿಯು ಮೈತುಂಬಿ ಹರಿಯುತ್ತಿದ್ದು, ತೊರೆಕಾಡನಹಳ್ಳಿಯ ಸೇತುವೆ ಮಟ್ಟದಲ್ಲಿ ಹರಿಯುವ ಸುಂದರ ದೃಶ್ಯವನ್ನು ನೋಡಲು ಜನ ಮುಗಿ ಬೀಳುತ್ತಿದ್ದಾರೆ.












Click it and Unblock the Notifications