ಬರಗಾಲದಲ್ಲೂ ಜಲಾಶಯದ ನೀರು ಪೋಲು: ತಾರಕದಿಂದ ನೀರು ಹರಿದರೂ ರೈತರಿಗೆ ತಲುಪುತ್ತಿಲ್ಲ..ಏಕೆ ಗೊತ್ತಾ?
ಮೈಸೂರು, ನವೆಂಬರ್ 22 : ರೈತರ ಹೆಸರಿನಲ್ಲಿ ಅಧಿಕಾರ ಪಡೆಯುವ ರಾಜಕೀಯ ಪಕ್ಷಗಳು ಬಳಿಕ ರೈತರನ್ನು ಮರೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದೀಗ ಆಗಿರುವುದು ಕೂಡ ಅದೇ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಬರಗಾಲ ನಿರ್ವಹಣೆ ಸವಾಲ್ ಆಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ರೈತರಿಗೆ ಬದುಕು ಕಟ್ಟಿಕೊಡಬೇಕಾದ ಅಧಿಕಾರಿಗಳು ಜಲಾಶಯದಿಂದ ಕಾಟಾಚಾರಕ್ಕೆ ನೀರು ಹರಿಸಿ ಪೋಲು ಮಾಡುತ್ತಿರುವುದು ಎದ್ದು ಕಾಣಿಸುತ್ತಿದೆ.
ಬರದಿಂದಾಗಿ ಕೃಷಿ ಮಾಡುವುದು ರೈತರಿಗೆ ಸವಾಲ್ ಆಗಿ ಪರಿಣಮಿಸಿದೆ. ಇಂತಹ ಸಂದರ್ಭಗಳಲ್ಲಿ ಇರುವ ನೀರನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಬೇಕಾದ ಅಗತ್ಯತೆ ಇದೆ. ಜಲಾಶಯಗಳಿಂದ ನೀರು ಪೋಲು ಆಗದಂತೆ ನಾಲೆಗಳ ಮೂಲಕ ಜಮೀನಿಗೆ ಹರಿಸಬೇಕಾಗುತ್ತದೆ. ಆದರೆ ಸರ್ಕಾರಗಳು ಮಳೆಗಾಲ ಮುನ್ನವೇ ಜಲಾಶಯ ಮತ್ತು ನದಿಯಿಂದ ರೈತರ ಜಮೀನಿಗೆ ಸಂಪರ್ಕ ಕಲ್ಪಿಸುವ ನಾಲೆಗಳ ದುರಸ್ತಿ ಕಾರ್ಯವನ್ನು ಮಾಡದೆ ಗಾಢ ನಿದ್ದೆಗೆ ಜಾರಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಪರದಾಡಬೇಕಾಗಿದೆ.

ಚುನಾವಣೆ ಮತ್ತು ಅಧಿಕಾರದ ಹಂಚಿಕೆಯ ಗೊಂದಲದಲ್ಲಿ ಕಳೆದು ಹೋಗುವ ಸರ್ಕಾರಗಳು ತಳಮಟ್ಟದಲ್ಲಿ ರೈತರಿಗೆ ಅನುಕೂಲವಾಗುವಂತಹ ಮೂಲಸೌಕರ್ಯ ಹಾಗೂ ಮೂಲ ಅಭಿವೃದ್ಧಿ ಕಾರ್ಯದತ್ತ ಗಮನಹರಿಸುವುದೇ ಇಲ್ಲ. ಮಳೆಗಾಲ ಮುನ್ನವೇ, ಕೆರೆಗಳು ಮತ್ತು ನಾಲೆಗಳಲ್ಲಿ ಸಂಗ್ರಹವಾಗಿರುವ ಹೂಳುಗಳನ್ನು ಎತ್ತಿ, ನಾಲೆಗಳನ್ನು ದುರಸ್ತಿ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಹೀಗೆ ಮಾಡುವುದರಿಂದ ಮಳೆಗಾಲದಲ್ಲಿ ನೀರು ಪೋಲಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಆದರೆ ಇದುವರೆ ನಮ್ಮನಾಳಿದವರಿಗೆ ಆ ಬಗ್ಗೆ ಪ್ರಜ್ಞೆಯೇ ಇಲ್ಲದಾಗಿದೆ.
ನೀರು ಹರಿದರೂ ರೈತರಿಗೆ ತಲುಪುತ್ತಿಲ್ಲ
ರೈತರಿಗೆ ಮೂಲವಾಗಿ ಬೇಕಾಗುವ ಸೌಕರ್ಯಗಳನ್ನು ಒದಗಿಸದೆ ಹೋದರೆ ಬರಗಾಲದ ಪರಸ್ಥಿತಿ ಎದುರಾದರೆ ಎಷ್ಟೊಂದು ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ಇದೀಗ ಅರಿವಾಗುತ್ತಿದೆ. ಕಳೆದ ಐದು ವರ್ಷಗಳ ಕಾಲ ಸಾಕಷ್ಟು ಮಳೆ ಸುರಿದಿತ್ತು. ಹೀಗಾಗಿ ನೀರಿನ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈ ಬಾರಿ ಮಳೆ ಕೈಕೊಟ್ಟಿದೆ. ನಿನ್ನೆ ಮೊನ್ನೆಯ ತನಕವೂ ಕೆಲವೆಡೆ ಮಳೆ ಸುರಿದರೂ ಅದರಿಂದ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಮಳೆ ಬಾರದ ಕಾರಣದಿಂದ ಬರದ ಪರಿಸ್ಥಿತಿ ಎದುರಾಗಿದೆ.

ಮೈಸೂರು ಭಾಗದಲ್ಲಿ ಮಳೆ ಉತ್ತಮವಾಗಿ ಸುರಿದಿಲ್ಲ. ಹೀಗಾಗಿ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನಲ್ಲಿರುವ ಕಬಿನಿ ಸೇರಿದಂತೆ ತಾರಕ, ನುಗು, ಹೆಬ್ಬಳ್ಳ ಮೊದಲಾದ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಈ ನಾಲ್ಕು ಜಲಾಶಯಗಳನ್ನು ರೈತರ ಹಿತದೃಷ್ಟಿಯಿಂದಲೇ ನಿರ್ಮಿಸಲಾಗಿದೆ. ಜತೆಗೆ ಜಲಾಶಯಗಳಿಂದ ರೈತರ ಜಮೀನಿಗೆ ನೀರು ಹರಿಸಲು ನಾಲೆಗಳನ್ನು ನಿರ್ಮಿಸಲಾಗಿದೆ. ಆದರೆ ಈ ನಾಲೆಗಳನ್ನು ಕಾಲ ಕಾಲಕ್ಕೆ ದುರಸ್ತಿ ಪಡಿಸದ ಕಾರಣದಿಂದ ಜಲಾಶಯದಿಂದ ನೀರು ಹರಿಸಿದರೂ ಅದು ಪೋಲಾಗುತ್ತಿದೆ.
ತಾರಕ ಜಲಾಶಯದ ನೀರು ಪೋಲು
ಮುಂಗಾರು ಮತ್ತು ಹಿಂಗಾರು ಮಳೆಯ ಕೊರತೆಯಿಂದ ಜಲಾಶಯ ಭರ್ತಿಯಾಗದಿದ್ದರೂ ಇದೀಗ ಸರ್ಕಾರ ಇರುವ ನೀರಿನಲ್ಲಿಯೇ ಒಂದಷ್ಟು ಭಾಗವನ್ನು ರೈತರಿಗೆ ಬಿಡುವ ಪ್ರಯತ್ನ ಮಾಡಿದೆ. ಅದರಂತೆ ಹೆಚ್.ಡಿ.ಕೋಟೆ ತಾಲೂಕಿನ ತಾರಕ ಜಲಾಶಯದಿಂದ ಎಡದಂಡೆ ನಾಲೆಗೆ ಹಂತ ಹಂತವಾಗಿ ನೀರು ಹರಿಸುತ್ತಿದೆ. ಆದರೆ ನೀರು ಹರಿದು ಹೋಗುವ ನಾಲೆಗಳಲ್ಲಿ ಹೂಳು ತುಂಬಿಕೊಂಡು ಗಿಡಗಂಟಿ ಆಳೆತ್ತರ ಬೆಳೆದು ನಿಂತಿರುವುದರಿಂದ ನಾಲೆಯಲ್ಲಿ ನೀರು ಸರಾಗವಾಗಿ ಹರಿಯದೆ ಅಚ್ಚುಕಟ್ಟು ಪ್ರದೇಶದ ರೈತರ ಗದ್ದೆಗಳಿಗೆ ಅದು ತಲುಪದಂತಾಗಿದೆ.

ನಾಲೆಗಳನ್ನು ದುರಸ್ತಿ ಪಡಿಸದ ಕಾರಣದಿಂದ ನೀರು ಹರಿಯುತ್ತಿಲ್ಲ. ಜೊತೆಗೆ ಕೆಲವೆಡೆ ನಾಲೆಯನ್ನೇ ಹಾಳುಗೆಡವಿರುವ ಘಟನೆಗಳು ನಡೆದಿವೆ. ಆದರೆ ಇದ್ಯಾವುದನ್ನು ಪರಿಗಣಿಸದೆ ನೀರು ಹರಿಸಿದರೆ ಅದು ರೈತರ ಜಮೀನಿಗೆ ತಲುಪುದಾದರೂ ಹೇಗೆ? ಇದರಿಂದ ನೀರು ಪೋಲಾಗುತ್ತಿದೆಯೇ ಹೊರತು ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಕಣ್ಮುಂದಿರುವ ಸತ್ಯವಾಗಿದೆ.
ಇನ್ನಾದರೂ ಸಂಬಂಧಿಸಿದವರು ಎಚ್ಚರಗೊಳ್ಳಲಿ
ದೇಶದ ಬೆನ್ನೆಲುಬಾಗಿರುವ ರೈತರು ಬೆಳೆದ ಬೆಳೆಗಳಿಗೆ ಜಲಾಶಯದಿಂದ ನಾಲೆಗಳ ಮೂಲಕ ಹಂತ ಹಂತವಾಗಿ ನೀರು ಪೂರೈಕೆ ಮಾಡಿ ಅಚ್ಚುಕಟ್ಟು ರೈತರ ಹಿತ ಕಾಪಾಡಬೇಕಾದ ತಾರಕ ಜಲಾಶಯದ ಅಧಿಕಾರಿಗಳು ನಾಲೆಗೆ ನೀರು ಹರಿಸುವ ಮೊದಲೇ ನಾಲೆಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆರವುಗೊಳಿಸಿ, ಹಾನಿಯಾಗಿರುವ ಭಾಗವನ್ನು ದುರಸ್ತಿಗೊಳಿಸಿ, ಹೂಳು ತೆಗೆದು ದುರಸ್ತಿ ಮಾಡಿ ಆ ನಂತರ ನೀರು ಹರಿಸಬೇಕಾಗುತ್ತದೆ. ಆದರೆ ಅದ್ಯಾವುದನ್ನು ಮಾಡದೆ ನೀರು ಹರಿಸಿದರೆ ನೀರು ಪೋಲಾಗುತ್ತದೆಯೇ ವಿನಃ ಯಾರಿಗೂ ಪ್ರಯೋಜನವಾಗುವುದಿಲ್ಲ. ಇನ್ನು ಮುಂದೆಯಾದರೂ ಈ ಬಗ್ಗೆ ಸಂಬಂಧಿಸಿದವರು ನಿಗಾವಹಿಸಬೇಕಾಗಿದೆ.












Click it and Unblock the Notifications