"ಮೈಮುಲ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಾ.ರಾ ಮಹೇಶ್ ಅವರೇ ಪ್ರಯತ್ನಿಸಿದ್ದರು"
ಮೈಸೂರು, ಮೇ 16: ಮೈಮುಲ್ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಶಾಸಕ ಸಾ.ರಾ. ಆರೋಪದ ವಿಚಾರವಾಗಿ ಶಾಸಕ ಜಿ. ಟಿ. ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
"ಮೈಮುಲ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಾ.ರಾ ಮಹೇಶ್ ಅವರೇ ಪ್ರಯತ್ನಿಸಿದ್ದರು. ಹುದ್ದೆಗಳ ನೇಮಕಾತಿ ವೇಳೆ ಜನಪ್ರತಿನಿಧಿಗಳ ಮೇಲೆ ಒತ್ತಡಗಳು ಬರುವುದು ಸರ್ವೇ ಸಾಮಾನ್ಯ. ಆದರೂ ನ್ಯಾಯಸಮ್ಮತವಾಗಿ ಹುದ್ದೆಗಳ ನೇಮಕಾತಿ ಮಾಡಬೇಕು" ಎಂದು ಜಿಟಿಡಿ ಪ್ರತಿಕ್ರಿಯಿಸಿದ್ದಾರೆ.
"ಸಾ. ರಾ. ಮಹೇಶ್ ಮಾಡಿರುವ ಆರೋಪಗಳ ಬಗ್ಗೆಯಾಗಲೀ, ಆಡಿಯೋ ಸಂಭಾಷಣೆ ಬಗ್ಗೆಯಾಗಲೀ ನನಗೇನೂ ಗೊತ್ತಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸಹಕಾರ ಸಚಿವರ ಸೂಚನೆಯ ಮೇರೆಗೆ ಸಂದರ್ಶನವನ್ನು ಮುಂದೂಡಲಾಗಿದೆ ಎಂಬುದಷ್ಟೇ ನನಗೆ ಮಾಹಿತಿ ಇದೆ. ಮೈಮುಲ್ ನಲ್ಲಿ ಸಿಬ್ಬಂದಿ ಕೊರತೆಯಿರುವುದರಿಂದ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ" ಎಂದು ಹೇಳಿದರು.

ಎರಡು ದಿನಗಳ ಹಿಂದೆ, ಮೈಮುಲ್ ನ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ಶಾಸಕ ಸಾ.ರಾ.ಮಹೇಶ್ ತೀವ್ರ ವಾಗ್ದಾಳಿ ನಡೆಸಿದ್ದರು. ಅಕ್ರಮ ನೇಮಕಾತಿಯನ್ನು ಖಂಡಿಸಿ ಮೈಸೂರು ಹಾಲು ಒಕ್ಕೂಟದ ಮುಂದೆ ಮೇ 19ರಂದು ಪ್ರತಿಭಟನೆ ನಡೆಸಲಾಗುವುದು ಎಂದೂ ಎಚ್ಚರಿಸಿದ್ದರು.












Click it and Unblock the Notifications