ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ: ಚುನಾವಣೆಗೂ ಮುನ್ನವೇ ಜಿ.ಟಿ.ದೇವೇಗೌಡರಿಗೆ ಗೆಲುವಿನ ವಿಶ್ವಾಸ..!
ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ.ಟಿ.ದೇವೇಗೌಡರಿಗೆ ಭಾರೀ ಪೈಪೋಟಿ ನೀಡುವ ಅಭ್ಯರ್ಥಿಗಳು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸ್ಪರ್ಧಿಸುವುದು ಸಂಶಯವಿರುವ ಕಾರಣ ಸುಲಭ ಗೆಲುವು ಆಗಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.
ಮೈಸೂರು, ಮಾರ್ಚ್8: 2018ರ ವಿಧಾನಸಭಾ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆ ಮತ್ತು ಸೋಲಿನ ಕಾರಣ ರಾಜ್ಯದ ಗಮನಸೆಳೆದಿದ್ದ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಎರಡು ಅವಧಿಯಿಂದಲೂ ಗೆಲುವಿನ ಸರದಾರರಾಗಿರುವ ಜೆಡಿಎಸ್‌ನ ಜಿ.ಟಿ.ದೇವೇಗೌಡರು ಚುನಾವಣೆ ಮುನ್ನವೇ ಗೆಲುವಿನ ವಿಶ್ವಾಸದಲ್ಲಿರುವುದು ಕಂಡು ಬಂದಿದೆ.
ಈ ಬಾರಿ ಕ್ಷೇತ್ರದಲ್ಲಿ ಶಾಸಕ ಜಿ.ಟಿ.ದೇವೇಗೌಡರಿಗೆ ಭಾರೀ ಪೈಪೋಟಿ ನೀಡುವ ಅಭ್ಯರ್ಥಿಗಳು ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸ್ಪರ್ಧಿಸುವುದು ಸಂಶಯವಿರುವ ಕಾರಣ ಸುಲಭ ಗೆಲುವು ಆಗಲಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಜಿ.ಟಿ.ದೇವೇಗೌಡರನ್ನು ಕಾಪಾಡಲಿದ್ದು, ಜೆಡಿಎಸ್ ಪ್ರಾಬಲ್ಯ ಈ ಕ್ಷೇತ್ರದಲ್ಲಿ ಹೆಚ್ಚಾಗಿರುವುದರಿಂದ ಗೆಲುವು ಕಷ್ಟವಾಗಲಾರದು ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಿದ್ದರಾಮಯ್ಯ ಅವರ ಸೋಲಿನ ಬಳಿಕ ಚಾಮುಂಡೇಶ್ವರಿ ಕ್ಷೇತ್ರ ರಾಜ್ಯದಲ್ಲಿ ಮುನ್ನಲೆಗೆ ಬಂದಿತ್ತು. ಒಬ್ಬ ಮುಖ್ಯಮಂತ್ರಿ ಸುಮಾರು ಮೂವತ್ತು ಸಾವಿರದಷ್ಟು ಮತಗಳಿಂದ ಸೋತಿದ್ದು ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಅಷ್ಟೇ ಅಲ್ಲದೆ ರಾಜಕೀಯವಾಗಿ ಸಿದ್ದರಾಮಯ್ಯ ಅವರಿಗೆ ಭವಿಷ್ಯ ನೀಡಿದ ಕ್ಷೇತ್ರದಲ್ಲಿ ಹೀನಾಯ ಸೋಲು ಕಂಡಿದ್ದು ಅವರ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯುವಂತೆ ಮಾಡಿತ್ತು. ಹೀಗಾಗಿ ಎಲ್ಲರ ದೃಷ್ಠಿ ಚಾಮುಂಡೇಶ್ವರಿ ಕ್ಷೇತ್ರದತ್ತಲೇ ಬೀರಿತ್ತು.

ತಟಸ್ಥವಾಗಿ ಉಳಿದಿದ್ದ ಜಿ.ಟಿ.ದೇವೇಗೌಡರು
ಕಳೆದ ಚುನಾವಣೆಯ ಗೆಲುವಿನ ಬಳಿಕ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳೇ ಬೇರೆ. ಒಬ್ಬ ಮುಖ್ಯಮಂತ್ರಿಯನ್ನು ಸೋಲಿಸಿದ ಶಾಸಕ ಜಿ.ಟಿ.ದೇವೇಗೌಡರ ಸುತ್ತಲೂ ಮಾಧ್ಯಮಗಳು ಸೇರಿದಂತೆ ಜನ ಕುತೂಹಲದಿಂದ ನೋಡಲು ಆರಂಭಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಜಿ.ಟಿ.ದೇವೇಗೌಡರು ಸಹಕಾರ ಖಾತೆಯ ಬಗ್ಗೆ ಉತ್ಸುಕರಾಗಿದ್ದರು. ಆದರೆ ಅವರಿಗೆ ಉನ್ನತ ಶಿಕ್ಷಣ ಖಾತೆಯನ್ನು ಕೊಡಲಾಗಿತ್ತು. ಈ ಖಾತೆಯನ್ನು ನಿರ್ವಹಿಸುವಷ್ಟು ಶಕ್ತಿ ನನ್ನಲ್ಲಿಲ್ಲ ಎಂದು ಪರಿಪರಿಯಾಗಿ ಬೇಡಿಕೊಂಡರೂ ಅದೇ ಖಾತೆ ನೀಡಲಾಗಿತ್ತು. ಆದರೂ ಅದನ್ನು ನಿಭಾಯಿಸಿದ್ದರು.
ಅಷ್ಟರಲ್ಲೇ ಜಿ.ಟಿ.ದೇವೇಗೌಡರು ಮತ್ತು ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರ ನಡುವೆ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದವು. ಸಮಿಶ್ರ ಸರ್ಕಾರ ಅಸ್ತಿತ್ವ ಕಳೆದುಕೊಂಡ ನಂತರವಂತೂ ಅವರ ನಡುವೆ ಕಂದಕವೇ ಏರ್ಪಟ್ಟಿತು. ಜಿ.ಟಿ.ದೇವೇಗೌಡರು ಪಕ್ಷದಿಂದ ದೂರವಿರಲು ಆರಂಭಿಸಿದರು. ಒಂದು ಹಂತದಲ್ಲಿ ಅವರು ಸಂಪೂರ್ಣವಾಗಿ ತಟಸ್ಥರಾಗಿ ಉಳಿದು ಬಿಟ್ಟರು. ಯಾವಾಗ ಪಕ್ಷದ ಚಟುವಟಿಕೆಯಿಂದ ದೂರವುಳಿದರೋ ಅವರ ಸುತ್ತಲೂ ರಾಜಕೀಯ ಲೆಕ್ಕಾಚಾರಗಳು, ಅಂತೆಕಂತೆಗಳ ಸುದ್ದಿಗಳು ಹರಿದಾಡಲು ಆರಂಭವಾದವು.

ಪುತ್ರನ ರಾಜಕೀಯ ಭವಿಷ್ಯದ ಬಗ್ಗೆ ಜಿ.ಟಿ.ದೇವೇಗೌಡರ ಚಿಂತನೆ
ಒಮ್ಮೆ ಬಿಜೆಪಿಗೆ ಮತ್ತೊಮ್ಮೆ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳುತ್ತಾರೆಂಬ ಸುದ್ದಿಗಳು ಹರಿದಾಡುತ್ತಲೇ ಇದ್ದವು. ಆದರೆ ಯಾವುದಕ್ಕೂ ಸ್ಪಷ್ಟವಾದ ಉತ್ತರ ನೀಡದ ಜಿ.ಟಿ.ದೇವೇಗೌಡರು ತಮ್ಮ ಪಾಡಿಗೆ ಕ್ಷೇತ್ರದ ಕೆಲಸ ಮಾಡಿಕೊಂಡು ಬಂದಿದ್ದರು. ಇತ್ತೀಚೆಗಿನ ವರ್ಷಗಳಲ್ಲಿ ಅವರು ತಮಗಿಂತ ಹೆಚ್ಚಾಗಿ ತಮ್ಮ ಪುತ್ರ ಜಿ.ಡಿ.ಹರೀಶ್ ಗೌಡರ ರಾಜಕೀಯ ಭವಿಷ್ಯದ ಬಗ್ಗೆ ಹೆಚ್ಚು ಗಮನಹರಿಸಲು ಆರಂಭಿಸಿದರು. ತಮ್ಮ ಪುತ್ರನಿಗೆ ಟಿಕೆಟ್ ಪಡೆಯಲು ತಂತ್ರ ಆರಂಭಿಸಿದ್ದರು.
ಇತ್ತ ಜೆಡಿಎಸ್‌ನಿಂದ ನಾಯಕರು ವಲಸೆ ಹೋಗುತ್ತಿರುವುದು ಗೋಚರಿಸುತ್ತಿದ್ದಂತೆಯೇ ಒಕ್ಕಲಿಗರ ಪ್ರಭಾವಿ ನಾಯಕರಾಗಿರುವ ಜಿ.ಟಿ.ದೇವೇಗೌಡರು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋದರೆ ಪಕ್ಷಕ್ಕೆ ಉಳಿಗಾಲವಿಲ್ಲ ಎಂದರಿತ ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠರಾದ ದೇವೇಗೌಡರೇ ಅಖಾಡಕ್ಕಿಳಿದು ಜಿ.ಟಿ.ದೇವೇಗೌಡರು ಪಕ್ಷ ಬಿಟ್ಟು ಹೋಗದಂತೆ ಸಂಧಾನ ನಡೆಸಿದರು.

ದೇವೇ ಗೌಡರ ಮಾತಿನಿಂದ ಜಿಟಿಡಿ ಸಮಾಧಾನ
ಎಚ್.ಡಿ.ಕುಮಾರಸ್ವಾಮಿ ಮತ್ತು ಜಿ.ಟಿ.ದೇವೇಗೌಡರ ನಡುವಿನ ಮುನಿಸಿಗೆ ಮುಲಾಮು ಹಚ್ಚಿದರಲ್ಲದೆ, ಪುತ್ರ ಜಿ.ಡಿ.ಹರೀಶ್ ಗೌಡರಿಗೆ ಹುಣಸೂರು ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟರು. ಅದರ ಪರಿಣಾಮ ಜಿ.ಟಿ.ದೇವೇಗೌಡರು ಜೆಡಿಎಸ್ ನಲ್ಲಿ ಉಳಿಯುವಂತಾಯಿತು. ಸದ್ಯ ಮೂರನೇ ಬಾರಿಗೆ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳು ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಕಾಣಿಸುತ್ತಿಲ್ಲ. ಆದರೆ ಎರಡು ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದು ಅಧಿಕೃತ ಅಭ್ಯರ್ಥಿಗಳು ಯಾರು ಎಂಬುದು ಗೌಪ್ಯವಾಗಿ ಉಳಿದಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚುನಾವಣಾ ತಯಾರಿ ಹೇಗಿದೆ?
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಿ.ಪಂ ಮಾಜಿ ಅಧ್ಯಕ್ಷ ಕೆ.ಮರಿಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಜಿಪಂ ಮಾಜಿ ಸದಸ್ಯ ರಾಕೇಶ್ ಪಾಪಣ್ಣ ಮೊದಲಾದ ಆಕಾಂಕ್ಷಿಗಳಿದ್ದರೂ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆ ಎಂಬುದರ ಮೇಲೆ ಜಿದ್ದಾಜಿದ್ದಿ ಆರಂಭವಾಗಲಿದೆ.
ಇನ್ನು ಬಿಜೆಪಿ ಈ ಬಾರಿಯ ಚುನಾವಣೆಗಿಂತಲೂ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿದೆ ಎಂದು ಹೇಳಲಾಗಿದ್ದು, ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಾಸು ಅವರ ಪುತ್ರ ಕವೀಶ್ ಗೌಡರನ್ನು ಪಕ್ಷಕ್ಕೆ ಸೇಪರ್ಡೆಗೊಳಿಸಿರುವ ಬಿಜೆಪಿ ಅವರನ್ನೇ ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಕಾರಣವೂ ಇದೆ.
ಈಗಾಗಲೇ ರಾಜಕೀಯ ನಿವೃತ್ತಿಯ ಬಗ್ಗೆ ಮಾತನಾಡಿರುವ ಜಿ.ಟಿ.ದೇವೇಗೌಡರು ಮುಂದಿನ ಅವಧಿಗೆ ರಾಜಕೀಯದಿಂದ ದೂರ ಸರಿಯುವ ಸಾಧ್ಯತೆಯಿದೆ. ಅಷ್ಟರಲ್ಲೇ ಕ್ಷೇತ್ರದಲ್ಲಿ ಕವೀಶ್ ಗೌಡರನ್ನು ಒಕ್ಕಲಿಗ ನಾಯಕನನ್ನಾಗಿ ತಯಾರು ಮಾಡುವ ಲೆಕ್ಕಾಚಾರವಿದೆ. ಆದರೆ ಇದು ಎಷ್ಟು ಸತ್ಯ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿರುವ ಜಿ.ಟಿ.ದೇವೇಗೌಡರಿಗೆ ಪ್ರಬಲ ಪೈಪೋಟಿಯೇ ಇಲ್ಲ ಎನ್ನಬಹುದು. ಮುಂದೇನು ಎಂಬುದಕ್ಕೆ ಕಾಲವೇ ಉತ್ತರಿಸಬೇಕಾಗಿದೆ.












Click it and Unblock the Notifications