MUDA Scam: ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಅಮಾನತು
ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಆಯುಕ್ತರ ವಿರುದ್ಧ ಅಕ್ರಮದ ಆರೋಪ ಕೇಳಿ ಬಂದಿತ್ತು. ವಿವಾದದ ನಡುವೆಯೂ ಸರ್ಕಾರ ಅವರನ್ನು ಹಾವೇರಿ ವಿವಿ ಕುಲಸಚಿವರನ್ನಾಗಿ ನೇಮಕ ಮಾಡಿತ್ತು, ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮುಡಾ ಮಾಜಿ ಆಯುಕ್ತರ ತಲೆದಂಡವಾಗಿದೆ. ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಮುಡಾ ಹಗರಣದಿಂದ ಸರಕಾರ ಮುಜುಗರಕ್ಕೆ ಸಿಲುಕಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಅಕ್ರಮವಾಗಿ ಸೈಟ್ ಹಂಚಿಕೆ ಮಾಡಿರುವ ಆರೋಪ ಕೇಳಿ ಬಂದಿತ್ತು. 50:50 ಅನುಪಾತದಲ್ಲಿ ಅಕ್ರಮ ಕಂಡು ಬಂದ ಹಿನ್ನೆಲೆಯಲ್ಲಿ ಹಿಂದಿನ ಆಯುಕ್ತ ದಿನೇಶ್ ಕುಮಾರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿತ್ತು.

ತನಿಖೆ ಪ್ರಗತಿಯಲ್ಲಿರುವ ನಡುವೆಯೇ ದಿನೇಶ್ ಕುಮಾರ್ ಅವರನ್ನು ಹಾವೇರಿ ವಿವಿ ಕುಲಸಚಿವನ್ನಾಗಿ ಸರ್ಕಾರ ನೇಮಿಸಿ ಕಳೆದ ಮೂರು ದಿನದ ಹಿಂದೆ ಆದೇಶ ಹೊರಡಿಸಿತ್ತು. ಸರ್ಕಾರದ ಆದೇಶದ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ ಲೋಕಾಯುಕ್ತಕ್ಕೆ ದಿನೇಶ್ ಕುಮಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ದೂರು ಸಲ್ಲಿಸಲಾಗಿತ್ತು.
ಈ ಎಲ್ಲಾ ಬೆಳವಣಿಗೆ ನಡುವೆ ಇಲಾಖೆಯ ವಿಚಾರಣೆಯನ್ನು ಕಾಯ್ದಿರಿಸಿ ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನ ಕಾರ್ಯದರ್ಶಿ ಉಮಾದೇವಿ ಅವರು ದಿನೇಶ್ ಕುಮಾರ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ದಿನೇಶ್ ಕುಮಾರ್ ಅವರು ಕರ್ತವ್ಯದ ಅವಧಿಯಲ್ಲಿ ಎಸಗಿರುವ ಗಂಭೀರ ಆರೋಪಗಳ ಸಂಬಂಧ ರಚಿಸಲಾಗಿದ್ದ ತಾಂತ್ರಿಕ ಸಮಿತಿ, ಪ್ರಾಧಿಕಾರಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆಯೊಂದಿಗೆ ಸರ್ಕಾರದ ಆದೇಶ, ಸುತ್ತೋಲೆಗೆ ವಿರುದ್ದವಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಸಿದ್ದಪಡಿಸಿ ಸಲ್ಲಿಸಲಾಗಿತ್ತು. ಬಿಡಿ ನಿವೇಶನಗಳ ಹಂಚಿಕೆ, ಹರಾಜಿಗಾಗಿ ಇರುವ ನಿವೇಶನಗಳ ಮಾಹಿತಿ ಇಲ್ಲದೇ ಇರುವುದು ಸೇರಿದಂತೆ ವರದಿಯಲ್ಲಿನ ಐದು ಅಂಶಗಳನ್ನು ಗಮನಿಸಿ ದಿನೇಶ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಹೇಳಲಾಗಿದೆ.












Click it and Unblock the Notifications