ಮೈಸೂರಿನಲ್ಲಿ ಭಾವೈಕ್ಯತೆಯ ಹಬ್ಬ: ಒಂದೇ ಸ್ಥಳದಲ್ಲಿ ಗಣೇಶೋತ್ಸವ, ಈದ್ ಮಿಲಾದ್ ಆಚರಣೆ
ಮೈಸೂರು, ಸೆಪ್ಟೆಂಬರ್ 16: ಮೈಸೂರು ನಗರದ ಸುಣ್ಣದ ಕೆರೆಯಲ್ಲಿರುವ ಶ್ರೀ ವಿನಾಯಕ ಯುವಕರ ಬಳಗ ವತಿಯಿಂದ ಗಣೇಶ ಪ್ರತಿಷ್ಠಾಪನೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದಾರೆ. ಈ ಭಾವೈಕ್ಯತೆಯ ಗಣೇಶೋತ್ಸವದಲ್ಲಿ ಈದ್ ಮಿಲಾದ್ ಕೂಡ ಆಚರಿಸಲಾಗಿದ್ದು, ಈದ್ ಮಿಲಾದ್ ಅಂಗವಾಗಿ ಮಕ್ಕಳಿಗೆ ಪುಸ್ತಕ ಹಾಗೂ ಹೋಳಿಗೆ ವಿತರಿಸಿ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗಿದೆ.
ಈ ವೇಳೆ ಕಾರ್ಯಕ್ರಮದಲ್ಲಿ ಹಾಜರಿದ್ದ ಕಾಂಗ್ರೆಸ್ ಮುಖಂಡ ಜಿ ಶ್ರೀನಾಥ್ ಬಾಬು ಮಾತನಾಡಿ, 'ನಮ್ಮ ದೇಶದಲ್ಲಿ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಣೆ ಮಾಡುತ್ತಿದ್ದು, ಪ್ರತಿ ವರ್ಷವೂ ಸಹ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಸಮೀಪ ಬಂದಿದ್ದರಿಂದ ಉಭಯ ಸಮಾಜದ ಬಾಂಧವರು ಈ ಹಬ್ಬಗಳನ್ನು ಬಹಳ ಶಾಂತಿಯುತವಾಗಿ ಆಚರಣೆ ಮಾಡಿ ಸೌಹಾರ್ದತೆಯಿಂದ ಬಾಳುವಂತೆ' ಕರೆ ನೀಡಿದರು.

ಶ್ರೀ ವಿನಾಯಕರ ಯುವಕರ ಬಳಗದ ಅಧ್ಯಕ್ಷ ಮಂಜುನಾಥ್ ಮಾತನಾಡಿ, 'ಇತಿಹಾಸದಲ್ಲಿ ಎರಡು ಸಮುದಾಯಗಳ ಹಬ್ಬಗಳು ಬಂದರೆ ಸೌಹಾರ್ದತೆಯಿಂದ ಆಚರಣೆ ಮಾಡುವ ಪದ್ಧತಿ ನಮ್ಮ ನಾಡಿನಲ್ಲಿದೆ. ಆದರೆ ಕೆಲವು ಕಿಡಿಗೇಡಿಗಳಿಂದ ಎರಡು ಸಮಾಜದಲ್ಲಿ ಶಾಂತಿಯನ್ನು ಕದಡುವ ಯತ್ನಗಳು ನಡೆಯುತ್ತಿದೆ.
ಆದ್ದರಿಂದ ಎರಡು ಸಮುದಾಯದ ಮುಖಂಡರು ಈ ಬಗ್ಗೆ ಲಕ್ಷ್ಯ ವಹಿಸಿ ಹಬ್ಬಗಳನ್ನು ಆಚರಣೆ ಮಾಡಲು ಮುಂದಾಗಬೇಕು. ಈ ದಿನ ಈ ಯುವಕರು ಒಟ್ಟಾಗಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಬಹಳ ಸಂತಸದ ವಿಚಾರ. ಇದೇ ರೀತಿ ಸೌಹಾರ್ದತೆ ಆಚರಣೆ ಪ್ರತಿ ಜಿಲ್ಲೆಯಲ್ಲಿ ಆದರೆ ಬಹಳ ಉತ್ತಮ ಬೆಳವಣಿಗೆಯನ್ನು ರಾಜ್ಯದಲ್ಲಿ ಕಾಣಲು ಸಾಧ್ಯವಿದೆ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಅಧ್ಯಕ್ಷ ಆರಿಫ್ ಪಾಷಾ ಮಾತನಾಡಿ, 'ಹಿಂದೂ, ಮುಸಲ್ಮಾನ ಸಮುದಾಯಗಳು ಸೇರಿದಂತೆ ಎಲ್ಲಾ ಜನಾಂಗದ ಜನರು ಸೌಹಾರ್ದತೆಯಿಂದ ಬದುಕುತ್ತಿದೆ. ಈದ್ ಮಿಲಾದ್ ಹಾಗೂ ಮೊಹರಂನಲ್ಲಿ ಹಿಂದೂಗಳು ಪಾಲ್ಗೊಂಡು ಸೌಹಾರ್ದ ಸಾರುವ ಕೆಲಸಗಳು ಪ್ರತಿ ಜಿಲ್ಲೆಯಲ್ಲೂ ಆಗಬೇಕು ಇಂತಹ ಕಾರ್ಯಕ್ರಮಗಳಿಂದ ಸೌಹಾರ್ದತೆ ಹೆಚ್ಚೆಚ್ಚು ಮೂಡುವ ಮೂಲಕ ಬಾಂಧವ್ಯ ಗಟ್ಟಿಯಾಗುತ್ತದೆ' ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಜಿ ಶ್ರೀನಾಥ್ ಬಾಬು, ಕೆಪಿಸಿಸಿ ಸದಸ್ಯರಾದ ನಜರ್ ಬಾದ್ ನಟರಾಜ್, ಶ್ರೀ ವಿನಾಯಕ ಗೆಳೆಯರ ಬಳಗದ ಅಧ್ಯಕ್ಷರಾದ ಮಂಜುನಾಥ್, ಕಿಶೋರ್ ಕುಮಾರ್, ಜಿ ರಾಘವೇಂದ್ರ, ಬ್ಯಾಂಕ್ ಸಿದ್ದರಾಜು, ಸಿದ್ದರಾಮಯ್ಯ ಬ್ರಿಗೇಡ್ ಅಧ್ಯಕ್ಷರಾದ ಹಿನಕಲ್ ಉದಯ್, ಕಿರಣ್, ಚಕ್ರಪಾಣಿ, ಮುಸಲ್ಮಾನ್ ಸಮುದಾಯದ ಮುಖಂಡರುಗಳಾದ ಕಾಂಗ್ರೆಸ್ ಚಾಮುಂಡೇಶ್ವರಿ ಕ್ಷೇತ್ರದ ಅಲ್ಪಸಂಖ್ಯಾತ ಅಧ್ಯಕ್ಷ ಆರಿಫ್ ಪಾಷಾ, ಗುಲ್ಚನ್ ಪಾಷಾ, ಇರ್ಫಾನ್, ಸೈಯಾದ್, ಇಮ್ರಾನ್ ಪಾಷಾ, ಮಹಮ್ಮದ್, ಶಫಿ ಉಲ್ಲಾ ಖಾನ್, ಹಾಗೂ ಸ್ಥಳೀಯ ಮಕ್ಕಳು ಹಾಜರಿದ್ದರು.












Click it and Unblock the Notifications