'ಖರ್ಗೆಯವರನ್ನೇ ಸಿಎಂ ಮಾಡಲು ಬಿಡದ ಸಿದ್ದು, ಡಿಕೆಶಿಯನ್ನು ಬಿಟ್ಟಾರಾ'?
ಮೈಸೂರು, ಜುಲೈ 25: ಒಕ್ಕಲಿಗರ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಡಿದ ಮಾತು ಮತ್ತು ಕಾಂಗ್ರೆಸ್ಸಿನಲ್ಲಿ ಜೋರಾಗಿ ಬೀಸುತ್ತಿರುವ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಒಕ್ಕಲಿಗರ ಸಮಾವೇಶದಲ್ಲಿ ಸಮುದಾಯಕ್ಕೆ ಉತ್ತಮ ಅವಕಾಶವಿದೆ ಎನ್ನುವ ಮಾತನ್ನು ಡಿ.ಕೆ.ಶಿವಕುಮಾರ್ ಅವರು ಆಡಿದ್ದಾರೆ. ಆದರೆ, ಅವರು ಆಡಿದ ಮಾತನ್ನು ಬೇರೆ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ಸಿನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ವಿಚಾರದಲ್ಲಿ ದೊಡ್ಡ ದಂಡೇ ಇದೆ. ಹೊಸಹೊಸ ಹೆಸರುಗಳು ಕೇಳಿ ಬರುತ್ತಿವೆ. ಆದರೆ, ಮಾಜಿ ಮುಖ್ಯಮಂತ್ರಿಗಳು ಇನ್ನೊಬ್ಬರನ್ನು ಸಿಎಂ ಮಾಡಲು ಬಿಡುತ್ತಾರಾ ಎನ್ನುವುದಿಲ್ಲಿ ಪ್ರಶ್ನೆ"ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
"ಚುನಾವಣೆಗೆ ನಾವು ಕೂಡ ತಯಾರಿ ಮಾಡುತ್ತಿದ್ದೇವೆ. ಪಂಚರತ್ನ ಯೋಜನೆ ರಥಯಾತ್ರೆ ಸಿದ್ದತೆ ಮಾಡುತ್ತಿದ್ದೇವೆ. ಆ ಕಾರ್ಯಕ್ರಮವೇ ನಮ್ಮ ಜೀವಾಳ. ಈ ಕಾರ್ಯಕ್ರಮದ ಮೂಲಕ ಸ್ವತಂತ್ರ ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದು ಜನರ ಬಳಿ ಹೋಗುತ್ತೇನೆ, ಪ್ರತಿ ಮನೆಗೂ ತಲುಪಿಸುತ್ತೇನೆ" ಎಂದು ಕುಮಾರಸ್ವಾಮಿ ಹೇಳಿದರು.

ಒಕ್ಕಲಿಗರ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಆಡಿದ ಮಾತು
"ಒಕ್ಕಲಿಗರ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಆಡಿದ ಮಾತನ್ನು ಕೇಳಿದ್ದೇನೆ. ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಳ್ಳಿ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಯಾವ ಅರ್ಥದಲ್ಲಿ ಅವರು ಈ ಮಾತನ್ನು ಆಡಿದ್ದಾರೆ ಎನ್ನುವುದಿಲ್ಲಿ ಮುಖ್ಯವಾಗುತ್ತದೆ. ಜೆಡಿಎಸ್ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಅವಕಾಶವಿದೆ, ನಮ್ಮ ಪಕ್ಷವನ್ನು ಬೆಂಬಲಿಸಿ ಎಂದು ಹೇಳಿದ್ದಾರೋ ಎನ್ನುವುದು ಗೊತ್ತಿಲ್ಲ"ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆಯವರಂತಹ ಹಳೆಯ ನಾಯಕರಿಗೆ ಅವಕಾಶ ತಪ್ಪಿಸಿದ್ದರು
"ಕಾಂಗ್ರೆಸ್ಸಿಗೆ ಒಂದು ವೇಳೆ ಮೆಜಾರಿಟಿ ಬಂದರೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ, ಆದರೆ, ಮುಖ್ಯಮಂತ್ರಿ ಆಗಬೇಕೆಂದು ಮಂಚೂಣಿಯಲ್ಲಿರುವ ನಾಯಕರು ಅಮೃತ ಮಹೋತ್ಸವ ಮಾಡಿಸಿಕೊಳ್ಳುತ್ತಿದ್ದಾರೆ. ಅವರು ಅಷ್ಟು ಸುಲಭವಾಗಿ ಬಿಟ್ಟು ಕೊಡುತ್ತಾರಾ? 2013ರ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರಂತಹ ಹಳೆಯ ನಾಯಕರಿಗೆ ಅವಕಾಶ ತಪ್ಪಿಸಿದ್ದರು. ಅವರು ತಮ್ಮ ಜೀವನವನ್ನೆಲ್ಲಾ ಕಾಂಗ್ರೆಸ್ ಪಕ್ಷಕ್ಕಾಗಿ ಮೀಸಲಿಟ್ಟವರು"ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪಾಪ ಡಿ.ಕೆ.ಶಿವಕುಮಾರ್ ಅವರಿಗೆ ಅಷ್ಟು ಸುಲಭವಲ್ಲ ಎಂದ ಕುಮಾರಸ್ವಾಮಿ
"ಮಲ್ಲಿಕಾರ್ಜುನ ಖರ್ಗೆಯವರು ಪಕ್ಷಕ್ಕಾಗಿ ದುಡಿಮೆ ಮಾಡಿದಂತವರು, ಅವರನ್ನೇ ದೂರ ತಳ್ಳಿದವರಿಗೆ, ಡಿ.ಕೆ.ಶಿವಕುಮಾರ್ ಸ್ಪರ್ಧೆಯಾಗುವುದಿಲ್ಲ. ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವವರು ಹಿಂದೆ ಜನತಾ ಪರಿವಾರದಲ್ಲಿ ಇದ್ದವರು. ನಮ್ಮಲ್ಲಿದ್ದಾಗಲೇ ಅವರ ನಡವಳಿಕೆ ಏನೆನ್ನುವುದನ್ನು ನಾನು ಗಮನಿಸಿದ್ದೇನೆ. ಡಿಕೆಶಿಗಿಂತ ಒಂದು ಹೆಜ್ಜೆ ಅವರು ಮುಂದೆ ಹೋಗಿಯಾಗಿದೆ. ಹಾಗಾಗಿ, ಪಾಪ ಡಿ.ಕೆ.ಶಿವಕುಮಾರ್ ಅವರಿಗೆ ಅಷ್ಟು ಸುಲಭವಲ್ಲ"ಎಂದು ಕುಮಾರಸ್ವಾಮಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
Recommended Video

ಒಕ್ಕಲಿಗ ಸಮಾಜ ಎಂದೂ ಸಹ ವ್ಯಾಮೋಹಕ್ಕೆ ಒಳಗಾಗಲಿಲ್ಲ
"ಎಲ್ಲಾ ಪಕ್ಷದಲ್ಲೂ ಅವರದ್ದೇ ಆದ ಜಾತಿ ಅಸ್ತ್ರ ಬಳಸುವುದು ಸಹಜ, ಇದಕ್ಕೆ ಮಹತ್ವ ಕೊಡಬೇಕಿಲ್ಲ. ಒಕ್ಕಲಿಗ ಸಮಾಜ ಎಂದೂ ಸಹ ವ್ಯಾಮೋಹಕ್ಕೆ ಒಳಗಾಗದೇ ಪ್ರಾಮಾಣಿಕರನ್ನು ಬೆಂಬಲಿಸುತ್ತದೆ. ಮೊದಲಿನಿಂದಲೂ ಹೀಗೆ ಮಾಡುತ್ತಾ ಬರಲಾಗಿದೆ, ಈಗಲೂ ನನಗೆ ನಂಬಿಕೆ ಇದೆ. ಜಾತಿ ಅಸ್ತ್ರ ಉಪಯೋಗ ಮಾಡಿದರು ಕೂಡ ಎಲ್ಲರನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಇದಕ್ಕೆ ಮಹತ್ವ ಕೊಡಬೇಕಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.











Click it and Unblock the Notifications