ಡಿಸೆಂಬರ್ 24ರಿಂದ ಮೈಸೂರು ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ, ಕಾರ್ಯಕ್ರಮದ ವಿವರ ಇಲ್ಲಿದೆ
ಮೈಸೂರು, ಡಿಸೆಂಬರ್, 13: ದಸರಾ ಮಹೋತ್ಸವ ಹಾಗೂ ಬಹುರೂಪಿ ರಂಗೋತ್ಸವದ ನಂತರ ಇದೀಗ ಅರಮನೆ ನಗರದಲ್ಲಿ ಮಾಗಿ ಉತ್ಸವ ನಡೆಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಅಲ್ಲದೆ, ವರ್ಷಾಂತ್ಯದಲ್ಲಿ ಅರಮನೆ ಆವರಣದಲ್ಲಿ ಡಿಸೆಂಬರ್ 24ರಿಂದ ಜನವರಿ 2ರವರೆಗೆ ಫಲಪುಷ್ಪ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಹಾಗೂ ಗೊಂಬೆ ಪ್ರದರ್ಶನ ಏರ್ಪಡಿಸಿದೆ.
ಮಹಾಮಾರಿ ಕೊರೊನಾ ಕಾರಣದಿಂದ ಕಳೆದ ಎರಡು ವರ್ಷದಿಂದ ಮೈಸೂರಿನಲ್ಲಿ ಯಾವುದೇ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿರಲಿಲ್ಲ. ಆದರೆ, ಈ ವರ್ಷ ಕೊರೊನಾ ಕ್ಷೀಣಿಸಿರುವುದರಿಂದ ದಸರಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು. ಆದರೆ, ಬಹುರೂಪಿಗೆ ಮಳೆ ಕಾಟ ಇರುವುದರಿಂದ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸಿದೆ. ಈ ನಡುವೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಮಾಗಿ ಉತ್ಸವ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.
''ಮಾಗಿ ಉತ್ಸವ ನಡೆಸಲು 50 ಲಕ್ಷ ರೂಪಾಯಿ ಅನುದಾನ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೆ ಪತ್ರ ಬರೆಯಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಗಮನಕ್ಕೂ ತರಲಾಗಿದೆ. ಜನಪ್ರತಿನಿಧಿಗಳ ಮೂಲಕವೂ ಯತ್ನಿಸಲಾಗುತ್ತಿದೆ. ಅನುದಾನ ದೊರೆತರೆ ಡಿಸೆಂಬರ್ ಕೊನೆಯ ವಾರ ಮಾಗಿ ಉತ್ಸವ ನಡೆಸಲಾಗುವುದು,'' ಎಂದು ಡಿಸಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಫಲಪುಷ್ಪ ಪ್ರದರ್ಶನ, ಸಮಯದ ವಿವರ
ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಅರಮನೆಗೆ ಭೇಟಿ ನೀಡಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವಿದ್ಯುತ್ ದೀಪಾಲಂಕಾರ, ಪೊಲೀಸ್ ಬ್ಯಾಂಡ್, ಶಬ್ಧರಹಿತ ಪಟಾಕಿ ಸಿಡಿಸುವುದೂ ಸೇರಿದಂತೆ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಸಂಜೆ 7ರಿಂದ 9ರವರೆಗೆ ಅರಮನೆಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿರುತ್ತದೆ.

ಪ್ರದರ್ಶನಕ್ಕೆ ಇಡಲಾಗುವ ಹೂವಿನ ಗಿಡಗಳ ವಿವರ
ಸುಮಾರು 25,000 ಬಗೆಯ ಅಲಂಕಾರಿಕ ಹೂವಿನ ಗಿಡಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. (ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸ್ವಿಲೋಷಿಯ, ನಸ್ಪರ್‌ಸಿಯಂ, ಆಂಟಿರೈನಂ, ಬೋನ್ಸಾತ್ ಗಿಡಗಳು ಸೇರಿದಂತೆ 32 ಜಾತಿಯ ಹೂವಿನ ಗಿಡ) ಹಾಗೂ ಅಂದಾಜು 4 ಲಕ್ಷ ವಿವಿಧ ಹೂವುಗಳಾದ ಗುಲಾಬಿ, ಕ್ರೈಸಾಂಥಿಯಮ್, ಪಿಂಗ್ ಪಾಂಗ್, ಕಾರ್ನೆಷನ, ಆಸ್ಪ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಸೇರಿ ನಾನಾ ಬಗೆಯ ಅಲಂಕಾರಿಕ ಹೂಗಳಿಂದ ಅಲಂಕರಿಸಲಾಗುತ್ತದೆ. ಹೂಗಳಲ್ಲಿ ಅರಳಲಿರುವ ಕಾಶಿ ವಿಶ್ವನಾಥ ದೇವಾಸ್ಥಾನ ಮಾದರಿ ಈ ಬಾರಿ ಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆ ಆಗಲಿದೆ.

ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ
ಅರಮನೆ ಮಂಡಳಿ ವತಿಯಿಂದ ಹೊಸ ವರ್ಷಾಚರಣೆ ಪ್ರಯುಕ್ತ ಡಿಸೆಂಬರ್ 31ರಂದು ಪೊಲೀಸ್ ಬ್ಯಾಂಡ್ ಅನ್ನು ರಾತ್ರಿ 11ರಿಂದ 12ರವರೆಗೆ ಆಯೋಜಿಸಲಾಗಿದೆ. ರಾತ್ರಿ 12ರಿಂದ 12:15ರವರೆಗೆ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ಧ ರಹಿತ ಪಟಾಕಿ ಸಿಡಿಸುವ ಕಾರ್ಯಕ್ರಮವೂ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಛಾಯಾಚಿತ್ರ ಪ್ರದರ್ಶನವನ್ನು 'ದಸರಾ ಅಂದು-ಇಂದು' ಶೀರ್ಷಿಕೆಯಡಿ ಏರ್ಪಡಿಸಲಾಗುತ್ತಿದೆ. ದಸರಾ ವೈಭವಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗುತ್ತದೆ. ದಸರಾ ನವರಾತ್ರಿ ವೇಳೆ ವಿಶೇಷವಾಗಿ ಮನೆಯಲ್ಲಿ ಗೊಂಬೆ ಕೂರಿಸಿದ್ದ ಐವರಿಗೆ ಈ ಬಾರಿ ಅರಮನೆ ಆವರಣದಲ್ಲಿ ಗೊಂಬೆ ಜೋಡಿಸಲು ಅವಕಾಶ ಕಲ್ಪಿಸಲಾಗಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

ಅದ್ಧೂರಿಯಾಗಿ ನಡೆದ ಫಲಪುಷ್ಟ ಪ್ರದರ್ಶನ
ಇತ್ತೀಚೆಗಷ್ಟೇ ಏಷ್ಯಾದ ಅತಿದೊಡ್ಡ ಗಾಜಿನ ಮನೆಯಲ್ಲಿ ಫಲಪುಷ್ಟ ಪ್ರದರ್ಶನ ಅದ್ಧೂರಿಯಾಗಿ ನಡೆದಿತ್ತು. ನಾಲ್ಕು ದಿನಗಳ ಕಾಲ ಆಯೋಜಿಸಿದ್ದ ಫಲಪುಷ್ಪ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ನವೆಂಬರ್ 10ದಂದು ಅಧಿಕೃತವಾಗಿ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, ಜನರು ಈ ಸೊಬಗನ್ನು ವೀಕ್ಷಿಸಲು ತಂಡೋಪತಂಡವಾಗಿ ಆಗಮಿದ್ದರು. ಈ ಬಾರಿ ಗ್ಲಾಸ್ ಹೌಸ್‌ನ ಮತ್ತೊಂದು ಆಕರ್ಷಣೆ ಎಂದರೆ ಕಾರಂಜಿ. ಜೊತೆಗೆ ಗಾಜಿನ ಮನೆಯು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸಿದ್ದು, ಹೊಸ ಲೋಕವೇ ಸೃಷ್ಟಿ ಆದಂತಿತ್ತು.

ಕಂಗೊಳಿಸಿದ ಬೆಣ್ಣೆನಗರಿಯ ಗಾಜಿನ ಮನೆ
ಗಾಜಿನ ಮನೆಯಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನವು ಪ್ರತಿವರ್ಷವೂ ಜನರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತದೆ. ಕೊರೊನಾ ಮೊದಲನೇ ಹಾಗೂ ಎರಡನೇ ಅಲೆ ವೇಳೆ ಅಷ್ಟೇನೂ ಫಲಪುಷ್ಪ ಪ್ರದರ್ಶನ ಕಳೆಗಟ್ಟಿರಲಿಲ್ಲ. ಈ ವರ್ಷ ವೈಭವಯುತವಾಗಿ ಪುಷ್ಪ ಅಲಂಕಾರ ಮಾಡಿದ್ದು, ಪುನೀತ್ ರಾಜಕುಮಾರ್, ರಾಜಕುಮಾರ್, ಹರಿಹರದ ಹರಿಹರೇಶ್ವರ ದೇವಸ್ಥಾನದ ಮಾದರಿ ಸೇರಿದಂತೆ ಎಲ್ಲಾ ಕಲಾಕೃತಿಗಳು ಗಮನ ಸೆಳೆದಿವೆ. ಗಾಜಿನ ಮನೆಯು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದು, ಹೊಸಲೋಕವೇ ಸೃಷ್ಟಿ ಆದಂತಿತ್ತು. ಬೆಳಕಿನ ನಡುವೆ ಪ್ರಜ್ವಲಿಸುವ ರೀತಿಯಲ್ಲಿ ಕಾಣುವ ಕಲಾಕೃತಿಗಳನ್ನು ನೋಡುವುದೇ ಒಂದು ರೀತಿಯ ಹಬ್ಬವಾಗಿತ್ತು. ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಪುಷ್ಕರಣಿ, ವಸಂತ ಮಂಟಪ, ಹರಿಹರದ ಹರಿಹರೇಶ್ವರ ಮೂರ್ತಿ, ಸೆಲ್ಫಿ ಪ್ರಿಯರಿಗಾಗಿ ರೂಪಿಸಿರುವ ಐ ಲವ್ ದಾವಣಗೆರೆ ಹೂವಿನ ಕಲಾಕೃತಿ, ಪುನೀತ್ ರಾಜಕುಮಾರ್, ವರನಟ ಡಾ.ರಾಜ್‌ಕುಮಾರ್ ಅವರ ಯೋಗ ಭಂಗಿ, ಬೇಡರ ಕಣ್ಣಪ್ಪ, ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಬೊಂಬೆ ರಾತ್ರಿಯ ವೇಳೆಯನ್ನು ಬೆಳಕಿನಲ್ಲಿ ನೋಡುವುದೇ ಒಂದು ರೀತಿಯ ರೋಮಾಂಚನವಾಗಿತ್ತು.












Click it and Unblock the Notifications