ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಫೆ.20ರಂದು ಬೃಹತ್ ಪ್ರತಿಭಟನೆ
ಮೈಸೂರು, ಫೆಬ್ರವರಿ 18: ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕರ ಮುಂದೆ ಬಿಚ್ಚಿಡುವ ಸಲುವಾಗಿ ಎಲ್ಲಾ ಮಂಡಲ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ಮೈಸೂರಿನಲ್ಲಿ ಫೆ.20ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ ಹಾಗೂ ಹಗರಣಗಳ ಸರಮಾಲೆಯನ್ನೇ ನೀಡಿದೆ. ಕಾಂಗ್ರೆಸ್ ಭ್ರಷ್ಟಾಚಾರ, ಅನಾಚಾರಗಳನ್ನು ಜನರ ಮುಂದಿಡುವ ಸಲುವಾಗಿ ಬಿಜೆಪಿ ರಾಜ್ಯವ್ಯಾಪಿ ಹೋರಾಟ ಹಮ್ಮಿಕೊಂಡಿದ್ದು, ಅದರ ಅಂಗವಾಗಿ 20ರಂದು ನಗರ ಹಾಗೂ ಜಿಲ್ಲಾ ಬಿಜೆಪಿ ತಂಡಗಳ ವತಿಯಿಂದ ಬೃಹತ್ ಪ್ರತಿಭಟನೆ ಆಯೋಜಿಸಲಾಗಿದೆ. ಸುಮಾರು 1500ರಿಂದ 2000 ಮಂದಿ ಭಾಗವಹಿಸಲಿದ್ದು, ಬಳಿಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುತ್ವದ ಆಧಾರದ ಮೇಲೆ ಕೆಲಸ ಮಾಡುವವರನ್ನು ಹತ್ಯೆ ಮಾಡಲಾಗುತ್ತಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ಭ್ರಷ್ಟಾಚಾರ, ಹಗರಣಗಳ ಮುಕ್ತ, ಪಾರದರ್ಶಕ ಆಡಳಿತ ನೀಡುತ್ತೇವೆ ಎಂದು ಆಶ್ವಾಸನೆ ನೀಡಿ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಇಂದು ಸ್ವಜನಪಕ್ಷಪಾತ, ಪಾರದರ್ಶಕ ರಹಿತ ಆಡಳಿತ ನೀಡುತ್ತಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದರು.
ಸಂಪುಟದ ತುಂಬೆಲ್ಲಾ ಭ್ರಷ್ಟರೆ ತುಂಬಿಕೊಂಡಿದ್ದಾರೆ. ಮೈಸೂರು ಭಾಗದ ಮುಖ್ಯಮಂತ್ರಿಯಾಗಿ ಈ ಭಾಗಕ್ಕೆ ಯಾವ ಅಭಿವೃದ್ಧಿ ಯೋಜನೆಗಳನ್ನು ನೀಡಿದ್ದೀರಿ ಜನರ ಮುಂದಿಡಿ. ಭ್ರಷ್ಟಾಚಾರ ಹಾಗೂ ಸಾವಿರಾರು ಕೋಟಿ ಹಗರಣಗಳನ್ನು ಬಯಲಿಗೆಳೆಯಲು ನ್ಯಾಯಾಂಗ ಆಯೋಗ ರಚಿಸಿ ಎಂದು ಒತ್ತಾಯಿಸಿದರು.












Click it and Unblock the Notifications