ರಸ್ತೆಯಲ್ಲಿ ಹುರುಳಿ ಒಕ್ಕಣೆಗೆ ಇತಿಶ್ರೀ ಹಾಡದಿದ್ದರೆ ಸಂಕಷ್ಟ ತಪ್ಪಿದಲ್ಲ!
ಮೈಸೂರು, ಜನವರಿ 11: ಹುರುಳಿಯನ್ನು ಒಕ್ಕಣೆಗಾಗಿ ವಾಹನಗಳು ಸಂಚರಿಸುವ ರಸ್ತೆಗಳಿಗೆ ಹಾಕದಂತೆ ನಿರ್ಬಂಧ ಹೇರಿದ್ದರೂ ರೈತರು ಪ್ರತಿವರ್ಷ ಈ ಸಮಯದಲ್ಲಿ ಒಕ್ಕಣೆಗಾಗಿ ರಸ್ತೆಗೆ ಹಾಕುವುದರಿಂದ ಅದರ ಮೇಲೆ ವಾಹನಗಳು ತೆರಳುವಾಗ ಹಲವು ಅನಾಹುತಗಳು ಸಂಭವಿಸುತ್ತಿವೆ. ಈಗಾಗಲೇ ಹುರುಳಿ ಬಳ್ಳಿಗಳು ವಾಹನಗಳ ಚಕ್ರಕ್ಕೆ ಸಿಲುಕಿ ಸಂಭವಿಸಿದ ಅವಘಡದಲ್ಲಿ ವಾಹನವೇ ಸುಟ್ಟು ಭಸ್ಮವಾದ ಘಟನೆ ಅಲ್ಲೊಂದು ಇಲ್ಲೊಂದು ನಡೆಯುತ್ತಲೇ ಇರುತ್ತದೆ.
ಪ್ರತಿವರ್ಷವೂ ಈ ಸಮಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರೂ ರೈತರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಸಮಸ್ಯೆಗಳು ಎದುರಾಗುತ್ತಲೇ ಇದೆ. ವಾಹನ ಸವಾರರ ಮಾತುಗಳನ್ನು ರೈತರು ಕೇಳದ ಕಾರಣದಿಂದಾಗಿ ಒಕ್ಕಣೆ ಮೇಲೆಯೇ ವಾಹನಗಳನ್ನು ಚಾಲಿಸಿಕೊಂಡು ಹೋಗುವುದು ಚಾಲಕರಿಗೆ ಅನಿವಾರ್ಯವಾಗಿದ್ದು, ಈ ವೇಳೆ ನಿರೀಕ್ಷೆ ಮಾಡದ ಅನಾಹುತಗಳು ಸಂಭವಿಸುತ್ತಿವೆ. ಈ ಸಮಯದಲ್ಲಿ ರೈತರ ಮನವೊಲಿಸಿ ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ವಿಫಲವಾಗುತ್ತಿರುವುದರಿಂದ ಇದು ಮುಂದುವರೆಯುತ್ತಲೇ ಇದೆ.

ಸಾಮಾನ್ಯವಾಗಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಇದು ನಡೆಯುತ್ತಿದ್ದು, ಪ್ರತಿವರ್ಷವೂ ಅಗ್ನಿ ಅವಘಡ ಸಂಭವಿಸುತ್ತಿವೆ. ಈ ವೇಳೆ ಪೊಲೀಸರು ಕ್ರಮ ಕೈಗೊಳ್ಳುತ್ತಾರೆಯಾದರೂ ಮತ್ತೆ ಮರೆತು ಬಿಡುತ್ತಾರೆ. ಅದರ ಬದಲಿಗೆ ಹುರುಳಿ ಕೊಯ್ಲುಗೆ ಮುನ್ನವೇ ಗ್ರಾಮೀಣ ಪ್ರದೇಶಗಳಿಗೆ ತೆರಳಿ ರೈತರಿಗೆ ಈ ಬಗ್ಗೆ ಅರಿವು ಮೂಡಿಸಿ ಅವರು ರಸ್ತೆಗೆ ಒಕ್ಕಣೆಗೆ ಹಾಕದಂತೆ ನೋಡಿಕೊಂಡರೆ ಅನಾಹುತ ನಡೆಯುವುದನ್ನು ತಪ್ಪಿಸಬಹುದಾಗಿದೆ.
ಈಗಾಗಲೇ ಸರ್ಕಾರ ಗ್ರಾಮೀಣ ಪ್ರದೇಶದ ಹಲವು ಕಡೆಗಳಲ್ಲಿ ಒಕ್ಕಣೆಗೆ ಅನುಕೂಲವಾಗುವಂತೆ ಕಣಗಳನ್ನು ನಿರ್ಮಿಸಿಕೊಟ್ಟಿದ್ದರೂ ಇನ್ನೊಂದೆಡೆ ರೈತರಿಗೆ ಸ್ವಂತ ಕಣ ಇದ್ದರೂ ಹೆಚ್ಚಿನ ರೈತರು ನೇರವಾಗಿ ಹುರುಳಿಯನ್ನು ತಂದು ರಸ್ತೆಗೆ ಹಾಕುತ್ತಿರುವುದು ಬೇಸರದ ಸಂಗತಿಯಾಗಿದೆ.

ವಾಹನಗಳ ಚಾಲಕರ ಕಷ್ಟ ಕೇಳೋರಿಲ್ಲ
ಇಲ್ಲಿ ರೈತರು ತಮ್ಮ ಒಕ್ಕಣೆಯನ್ನು ಸುಲಭ ಮಾಡಿಕೊಳ್ಳಲು ರಸ್ತೆಗೆ ಹಾಕುತ್ತಿದ್ದು ವಾಹನಗಳು ಹಾದು ಹೋದಾಗ ಕಾಳುಗಳು ಉದುರುತ್ತವೆ. ಆ ನಂತರ ಬಳ್ಳಿಗಳನ್ನು ತೆಗೆದು ಕಾಳುಗಳನ್ನು ತೆಗೆದು ಸ್ವಚ್ಛಗೊಳಿಸಿ ಚೀಲಗಳಲ್ಲಿ ತುಂಬಿಸಿ ಮನೆಗೆ ಕೊಂಡೊಯ್ಯಲು ಸುಲಭವಾಗುತ್ತದೆ. ಹೀಗೆ ಮಾಡುವುದರಿಂದ ರೈತರಿಗೆ ಅನುಕೂಲವಾಗುತ್ತದೆ ಆದರೆ ಅದರ ಮೇಲೆ ತೆರಳುವ ವಾಹನಗಳ ಚಾಲಕರ ಕಷ್ಟ ಮಾತ್ರ ಕೇಳೋರಿಲ್ಲ. ಈಗಾಗಲೇ ದ್ವಿಚಕ್ರ ವಾಹನ ಸವಾರರ ಚಕ್ರಗಳಿಗೆ ಬಳ್ಳಿ ಸಿಕ್ಕಿಕೊಂಡು ಬಿದ್ದು ಕೈಕಾಲು ಮುರಿದುಕೊಂಡರೆ, ಇತರೆ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಉರಿದು ಹೋಗಿವೆ. ಇಷ್ಟೆಲ್ಲ ಆದರೂ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ.
ವಾಹನಗಳು ಬೆಂಕಿಗೆ ಆಹುತಿಯಾಗುವುದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆಯುವುದು ಮಾಮೂಲಿಯಾಗಿದೆ. ಇದರ ನಡುವೆ ರಸ್ತೆ ತುಂಬೆಲ್ಲ ಹುರುಳಿ ಬಳ್ಳಿಯನ್ನು ಹರಡುವುದರಿಂದ ಅದರ ಮೇಲೆ ಚಾಲಿಸಿಕೊಂಡು ಹೋಗಲು ಹೆದರಿ ಕೆಲವರು ರಸ್ತೆ ಬದಿಯಲ್ಲಿ ಸರ್ಕಸ್ ಮಾಡಿಕೊಂಡು ಮುಂದೆ ಸಾಗುವುದು ಕಂಡು ಬರುತ್ತದೆ. ಈ ವೇಳೆ ನಿಯಂತ್ರಣ ತಪ್ಪಿ ಬಿದ್ದು ಕೈಕಾಲುಗಳಿಗೆ ಗಾಯ ಮಾಡಿಕೊಂಡ ನಿದರ್ಶನಗಳು ಇಲ್ಲದಿಲ್ಲ. ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ತಿಳಿ ಹೇಳಿದರೂ ಯಾರೂ ಅದಕ್ಕೆ ಸೊಪ್ಪು ಹಾಕದೆ ತಮ್ಮ ಕಾಯಕವನ್ನು ಮುಂದುವರೆಸುತ್ತಾರೆಯಲ್ಲದೆ, ವಾಹನ ಸವಾರರ ಮೇಲೆಯೇ ಜಗಳಕ್ಕೆ ನಿಲ್ಲುತ್ತಾರೆ ಎಂಬ ಆರೋಪಗಳು ಇಲ್ಲದಿಲ್ಲ.
ರಸ್ತೆಯಲ್ಲಿ ಒಕ್ಕಣೆಗೆ ತಡೆಯೊಡ್ಡುತ್ತಾರಾ?
ರಸ್ತೆಯಲ್ಲಿ ಒಕ್ಕಣೆ ಮಾಡುವುದನ್ನು ತಡೆಯಬೇಕಾದರೆ ಆಯಾಯ ಗ್ರಾಮ ಪಂಚಾಯಿತಿ ಸೂಕ್ತ ಕಣದ ವ್ಯವಸ್ಥೆ ಮಾಡಬೇಕು. ಅಲ್ಲದೆ ರಸ್ತೆಯಲ್ಲಿ ಒಕ್ಕಣೆ ಮಾಡುವವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ ಅದ್ಯಾವುದೂ ಮಾಡದ ಕಾರಣ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ಜಿಲ್ಲಾಡಳಿತವೂ ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕಿದೆ. ಪೊಲೀಸರು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವಂತೆ ಹುರುಳಿ ಒಕ್ಕಣೆ ಮಾಡುವವರಿಗೆ ಎಚ್ಚರಿಕೆ ನೀಡಿ, ವಾಹನಗಳು ಓಡಾಡಲು ಅವಕಾಶ ಮಾಡಿ ಕೊಡಬೇಕು.
ಇದೆಲ್ಲದರ ನಡುವೆ ಗ್ರಾಮಪಂಚಾಯಿತಿಗಳು ರೈತರಿಗೆ ಒಕ್ಕಣೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಗ್ರಾಮಗಳಲ್ಲಿ ಸಾರ್ವಜನಿಕ ಕಣಗಳ ನಿರ್ಮಾಣ ಮಾಡಿಕೊಡುವುದು ಅಥವಾ ಕಣ ನಿರ್ಮಾಣಕ್ಕೆ ಸಹಾಯಧನ ಒದಗಿಸುವುದು, ಜತೆಗೆ ರಸ್ತೆಯಲ್ಲಿ ಒಕ್ಕಣೆ ಮಾಡುವುದರಿಂದ ಆಗುವ ಅನಾಹುತಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ ಅವರು ಕಣಗಳಲ್ಲಿ ಒಕ್ಕಣೆ ಮಾಡುವಂತೆ ಪ್ರೇರೇಪಿಸಬೇಕಾಗಿದೆ. ಇಲ್ಲದೆ ಹೋದರೆ ಪ್ರತಿವರ್ಷವೂ ಅನಾಹುತ ನಡೆಯುವುದು ತಪ್ಪುವುದಿಲ್ಲ.












Click it and Unblock the Notifications