ಮೈಸೂರು ವಿವಿಯಲ್ಲಿ ಡಿವಿಜಿ ಮತ್ತು ಬಿ.ಜಿ.ಎಲ್ ಸ್ವಾಮಿ ಗ್ಯಾಲರಿ ಲೋಕಾರ್ಪಣೆ
ಮೈಸೂರು, ಮಾರ್ಚ್ 17: "ಕನ್ನಡ ಅಧ್ಯಯನ ಕೇಂದ್ರದಲ್ಲಿ 34 ಸಾಹಿತಿಗಳಿಗೆ ಸಂಬಂಧಿಸಿದ ದಾಖಲೆಗಳು ದೊರೆಯಲಿದ್ದು, ಅವುಗಳ ಸಂರಕ್ಷಣೆಗಾಗಿ ಮಾನಸ ಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ದುರಸ್ತಿ ಕಾರ್ಯ ಮಾಡಿಸಲಾಗುತ್ತಿದೆ'' ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜೆ.ಹೇಮಂತ್ ಕುಮಾರ್ ಹೇಳಿದರು.
ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಡಿವಿಜಿ ಬಳಗ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ, "ಡಿವಿಜಿ ಮತ್ತು ಬಿ.ಜಿ.ಎಲ್.ಸ್ವಾಮಿ ಗ್ಯಾಲರಿ ಲೋಕಾರ್ಪಣೆ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ""ಒಂದು ಸಂಸ್ಕೃತಿ ಬಾಳಿ, ಬೆಳಗಬೇಕಾದರೆ ಆ ಸಂಸ್ಕೃತಿಯ ಪ್ರಾತಃಸ್ಮರಣೀಯರನ್ನು ಜನಸಮುದಾಯದ ನೆನಪಿನಿಂದ ಜಾರದಂತೆ ಮಾಡಬೇಕಾದುದು ಪ್ರತಿಯೊಬ್ಬರ ಕರ್ತವ್ಯ. ಮಹಾನ್ ಚಿಂತಕರ ಹೊಟ್ಟೆಯಲ್ಲಿ ಮಹಾಮೇಧಾವಿಗಳು ಹುಟ್ಟುವುದು ಅಪರೂಪವಲ್ಲ. ಆದರೆ, ಇದು ಬಹಳ ಸಹಜ ಎಂದು ತೋರಬಹುದಾದರೂ, ಪ್ರತಿಯೊಂದು ತಲೆಮಾರಿನವರೂ ಹೊಸದಾಗಿ ವಿದ್ಯೆ ಪಡೆದುಕೊಂಡು ಸಾಧನೆ ಮಾಡಬೇಕಾಗುತ್ತದೆ'' ಎಂದರು.

ಕುವೆಂಪು ಹಾಗೂ ತೇಜಸ್ವಿ ಎತ್ತರಕ್ಕೆ ಬೆಳೆದರು
ಈ ವಿಷಯವಾಗಿ ನಮಗೆ ಎದ್ದು ಕಾಣುವವರು ಕುವೆಂಪು ಹಾಗೂ ತೇಜಸ್ವಿಯವರು. ತೇಜಸ್ವಿಯವರು ತಮ್ಮ ಸ್ವಂತ ಪರಿಶ್ರಮದಿಂದ ತಮ್ಮದೇ ಹಾದಿಯನ್ನು ಕಂಡುಕೊಂಡು ದೊಡ್ಡ ಲೇಖಕರಾದರು. ಅವರು ಬದುಕಿದ್ದರೆ, ತಜ್ಞರು ಹೇಳುವಂತೆ ಕನ್ನಡಕ್ಕೆ ಇನ್ನೊಂದು ಜ್ಞಾನಪೀಠ ಪ್ರಶಸ್ತಿ ದಕ್ಕಿಸುತ್ತಿದ್ದರು. ಇದು ಕನ್ನಡಿಗರಿಗೆ ಆದ ನಷ್ಟ ಎಂದು ಸ್ಮರಿಸಿದರು.
ಮೈಸೂರು ವಿವಿಯಲ್ಲಿ ಪಿಎಚ್ಡಿ ಪಡೆದ ಸಿಕ್ಕಿಂ ಬುಡಕಟ್ಟು ಸಮುದಾಯದ ಯುವತಿ
ಡಾ.ಬಿ.ಜಿ.ಎಲ್.ಸ್ವಾಮಿಯವರೂ ಡಿವಿಜಿಯವರ ಶಕ್ತಿಯ ಚೈತನ್ಯದ ಪ್ರತೀಕ. ನಮ್ಮ ವಿವಿಯಲ್ಲಿ ಅವರು ಸಂದರ್ಶಕ ಪ್ರಾಧ್ಯಾಪಕರಾಗಿದ್ದಾಗ ಸರಳವಾಗಿ, ಸಾಮಾನ್ಯ ವ್ಯಕ್ತಿಯಂತೆ ಬೆರೆತು ಬದುಕಿದರು. ತಾನು ಒಬ್ಬ ವಿಶ್ವ ಪ್ರಸಿದ್ಧ ವಿಜ್ಞಾನಿ ಎಂಬ ಅಹಮಿಕೆ ಅವರಿಗೆ ಕೊಂಚವೂ ಇರಲಿಲ್ಲ ಎಂದು ನೆನೆದರು.

ಮುಂದಿನ ತಲೆಮಾರಿನವರಿಗೆ ಬಹಳ ಉಪಕಾರ
ಸಾಹಿತಿಯಾದ ತೇಜಸ್ವಿಯವರು ವಿಜ್ಞಾನದ ವಿಷಯಗಳಿಗೆ ಮಾರುಹೋದಂತೆ, ವಿಜ್ಞಾನಿಯಾದ ಬಿ.ಜಿ.ಎಲ್ ಸ್ವಾಮಿಯವರು ಸಾಹಿತ್ಯಕ್ಕೆ ಮಾರುಹೋಗಿದ್ದರು. ಇಡೀ ಕರ್ನಾಟಕದಲ್ಲಿ ಮನೆ ಮಾತಾಗಿದ್ದ ಅಪರೂಪದ ಚಿಂತಕರಾಗಿದ್ದಾರೆ. ಇವರ ನೆನಪನ್ನು ಚಿರಸ್ಥಾಯಿಗೊಳಿಸುವುದರಿಂದ ಮುಂದಿನ ತಲೆಮಾರಿನವರಿಗೆ ಬಹಳ ಉಪಕಾರವಾಗುವುದು ಎಂದು ಹೇಳಿದರು. ಡಿವಿಜಿಯವರ ಬಗ್ಗೆ ಹೇಳಲೇಬೇಕಾಗಿಲ್ಲ. ಪ್ರತಿದಿನವೂ ಕರ್ನಾಟಕದಾದ್ಯಂತ ಅವರ ಸ್ಮರಣೆ ನಡೆಯುತ್ತಿದೆ. ವಿದ್ವಾಂಸರು, ಸಂಶೋಧಕರು, ಪ್ರವಚನಕಾರರು, ಅವರ ಮಂಕುತಿಮ್ಮನ ಕಗ್ಗದಿಂದ ಆಯ್ದ ಸಂದೇಶಗಳನ್ನು ಭಿತ್ತರಿಸುತ್ತಿದ್ದಾರೆ. ಡಿವಿಜಿಯವರ ಕಗ್ಗ ಕನ್ನಡಿಗರ ಪಾಲಿಗೆ ಕಾಮಧೇನು, ಕಲ್ಪವೃಕ್ಷವಾಗಿದೆ. ಕರ್ನಾಟಕದಲ್ಲಿ ಸರ್ವಜ್ಞನ ವಚನಗಳಂತೆ, ಮಂಕುತಿಮ್ಮನ ಕಗ್ಗ ನಮ್ಮ ಜೀವನಕ್ಕೆ ಆಧಾರವಾಗಿದೆ ಎಂದು ವಿವರಿಸಿದರು.

ಡಿವಿಜಿ, ಬಿಜಿಎಲ್ ಸ್ವಾಮಿ ಗ್ಯಾಲರಿ ವಿಶೇಷತೆ
ಹಲವು ವಿಶೇಷಗಳಿಂದ ಕೂಡಿರುವ ಮಾನಸ ಗಂಗೋತ್ರಿ ಜಯಲಕ್ಷ್ಮೀ ವಿಲಾಸ ವಸ್ತು ಸಂಗ್ರಹಾಲಯಕ್ಕೆ ಮತ್ತೊಂದು ವಿಶೇಷ ಸೇರ್ಪಡೆಯಾಯಿತು. ಹಿರಿಯ ಸಾಹಿತಿ ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ ಗ್ಯಾಲರಿ ಆರಂಭವಾಗಿದೆ. ಇಲ್ಲಿ ಸಾಹಿತಿಗಳು ಬಳಸಿದ ವಸ್ತುಗಳು, ಅವರ ಕೈ ಬರಹ ಪ್ರತಿಗಳು, ಸಾಹಿತ್ಯ, ಅವರಿಗೆ ಬಂದ ಪ್ರಶಸ್ತಿ ಇತ್ಯಾದಿಗಳನ್ನು ಇಡಲಾಗಿದೆ. ಇಲ್ಲಿ ಕುವೆಂಪು ಸೇರಿದಂತೆ ಅನೇಕ ಸಾಹಿತಿಗಳ ಗ್ಯಾಲರಿ ಇರುವಂತೆ ಡಿವಿಜಿ ಮತ್ತು ಬಿಜಿಎಲ್ ಗ್ಯಾಲರಿಯನ್ನು ಹೊಸದಾಗಿ ಆರಂಭಿಸಲಾಗಿದೆ.
ಮಂಕುತಿಮ್ಮನ ಕಗ್ಗ ಮತ್ತು ಪಕೋಡಪ್ರಿಯ ಗುಂಡಪ್ಪ
ಡಿವಿಜಿ ಅವರ ಅಪರೂಪದ ಛಾಯಾಚಿತ್ರಗಳು
ಕುವೆಂಪು ಗ್ಯಾಲರಿ ಸಮೀಪದಲ್ಲಿರುವ ಡಿವಿಜಿ ಮತ್ತು ಬಿಜಿಎಲ್ ಸ್ವಾಮಿ ಗ್ಯಾಲರಿಯಲ್ಲಿ ಡಿವಿಜಿ ಅವರ ಅಪರೂಪದ ಛಾಯಾಚಿತ್ರಗಳು, ಡಿವಿಜಿ ಮತ್ತು ಬಿಜಿಎಲ್ ಸ್ವಾಮಿಯವರು ಒಟ್ಟಿಗಿರುವ ಭಾವಚಿತ್ರಗಳು, ಬಿಎಂಶ್ರೀ, ಟಿ.ಎಸ್.ವೆಂಕಣ್ಣ ಮತ್ತು ಕುವೆಂಪು ಸೇರಿದಂತೆ ಡಿವಿಜಿ ಕಾಲಘಟ್ಟದಲ್ಲಿ ಸಾಹಿತ್ಯಗಳು ತಮ್ಮ ಸ್ವಹಸ್ತ ಅಕ್ಷರದಲ್ಲಿ ನೀಡಿರುವ ಪುಸ್ತಕಗಳು, ಡಿವಿಜಿ ಅವರ ಕೈ ಬರಹ, ಅಂತೆಯೇ ಬಿ.ಜಿ.ಎಲ್ ಸ್ವಾಮಿ ಅವರ ಸಮಗ್ರ ವಸ್ತುಗಳನ್ನು ಪ್ರದರ್ಶಿಸಲಾಗಿದೆ.
ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎನ್.ಎಸ್.ತಾರಾನಾಥ, ಪ್ರೊ.ಸಿ.ಆರ್.ನಾಗೇಂದ್ರನ್, ಬಿ.ಜಿ.ಎಲ್.ಸ್ವಾಮಿಯವರ ಬಂಧು ಗೀತಾ ನಾರಾಯಣ ಅಯ್ಯರ್, ಡಿವಿಜಿ ಬಳಗ ಪ್ರತಿಷ್ಠಾನ ಅಧ್ಯಕ್ಷ ಎಚ್.ರಾಜಕುಮಾರ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೆಶಕ ಪ್ರೊ.ಎಂ.ಬಿ.ಮಂಜುನಾಥ್, ಮೈಸೂರು ವಿವಿ ಪ್ರಸಾರಾಂಗ ನಿರ್ದೇಶಕ ಪ್ರೊ.ಎನ್.ಎಂ.ತಳವಾರ ಇತರರು ಉಪಸ್ಥಿತರಿದ್ದರು.