Mysuru Tourism: ರಣಬಿಸಿಲು, ಚುನಾವಣೆ ಎಫೆಕ್ಟ್; ಮೈಸೂರು ಪ್ರವಾಸೋದ್ಯಮಕ್ಕೆ ಹೊಡೆತ
ಅತಿಯಾದ ಬಿಸಿಲು ಹಾಗೂ ಲೋಕಸಭಾ ಚುನಾವಣಾ ಎಫೆಕ್ಟ್‌ನಿಂದ ಬೇಸಿಗೆ ರಜೆ ಕಳೆಯಲು ಪ್ರವಾಸಿಗರು ಮೈಸೂರಿನತ್ತ ಸುಳಿಯುತ್ತಿಲ್ಲ. ಪರಿಣಾಮ ಹೋಟೆಲ್, ರೆಸ್ಟೋರೆಂಟ್, ಹೋಂಸ್ಟೇಗಳು ಪ್ರವಾಸಿಗರಿಲ್ಲದೆ ಬಣಗುಡುತ್ತಿದೆ.
ಸಾಮಾನ್ಯವಾಗಿ ಏಪ್ರಿಲ್ ತಿಂಗಳು ಬಂದರೆ ಸಾಕಷ್ಟು ಪ್ರವಾಸಿಗರು ಮೈಸೂರಿನತ್ತ ಮುಖ ಮಾಡುತ್ತಿದ್ದರು. ಕುಟುಂಬ ಸಮೇತ ಆಗಮಿಸಿ ರಜೆಯ ಮಜಾವನ್ನು ಅನುಭವಿಸುತ್ತಿದ್ದರು. ಆದರೆ, ಈ ಬಾರಿ ತಾಪಮಾನ ಹೆಚ್ಚಳ ಆಗಿರುವುದರಿಂದ ಹಿರಿಯ ನಾಗರಿಕರು ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ.

38 ಡಿಗ್ರಿ ಸೆಲ್ಸಿಯಸ್‌ಗೆ ಉಷ್ಣಾಂಶ ತಲುಪಿರುವುದರಿಂದ ಶೇ. 40ರಷ್ಟು ಬುಕ್ಕಿಂಗ್ ಕುಸಿತವಾಗಿದೆ. ಸರಕಾರಿ ನೌಕರರು, ಅಧಿಕಾರಿಗಳು, ಉದ್ಯಮಿಗಳು ಈ ಬಾರಿ ಚುನಾವಣಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದರಿಂದ ಮೈಸೂರಿನಲ್ಲಿ ಪ್ರವಾಸಿಗರ ಕೊರತೆ ಕಂಡು ಬಂದಿದೆ.
ಹೋಟೆಲ್ ಉದ್ಯಮಕ್ಕೆ ಹೊಡೆತ
ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 60ರಷ್ಟು ಬುಕ್ಕಿಂಗ್ ಕಡಿಮೆ ಆಗಿದೆ. ಅಕ್ಕಪಕ್ಕ ಜಿಲ್ಲೆಯ ಪ್ರವಾಸಿಗರು ಬಿಟ್ಟರೆ ದೂರದಿಂದ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ತೀವ್ರ ಕುಸಿತ ಕಂಡಿದೆ. ಸಾಮಾನ್ಯವಾಗಿ ಏಪ್ರಿಲ್ 10ರ ನಂತರ ಎಲ್ಲ ಹೋಟೆಲ್‌ನ ರೂಂಗಳು ಶೇ. 95ರಷ್ಟು ಬುಕ್ಕಿಂಗ್ ಆಗುತ್ತಿದ್ದವು. ಆದರೆ, ಈ ಬಾರಿ ದೇಶಾದ್ಯಂತ ಚುನಾವಣೆ ನಡೆಯುತ್ತಿರುವುದರಿಂದ ಬುಕ್ಕಿಂಗ್ ಕುಸಿದಿದೆ, ಎನ್ನುತ್ತಾರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ.
ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ
ಲೋಕಸಭಾ ಚುನಾವಣೆ ಇರುವುದರಿಂದ ಪೊಲೀಸರು ಎಲ್ಲೆಡೆ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ವಿಧಾನಸಭಾ ಕ್ಷೇತ್ರಗಳ ಗಡಿಯಲ್ಲಿ ವಾಹನಗಳ ತಪಾಸಣೆ ನಡೆಯುತ್ತಿದೆ. ಇದರಿಂದ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಬೇಕೆಂಬ ಕಾರಣಕ್ಕೂ ಹಾಗೂ ಹೆಚ್ಚು ಹಣವನ್ನು ಪ್ರವಾಸಕ್ಕೆ ತೆಗೆದುಕೊಂಡು ಹೋಗಲು ಆಗುವುದಿಲ್ಲ ಎನ್ನುವ ಅಂಶವೂ ಪ್ರವಾಸಿಗರ ಸಂಖ್ಯೆ ಕುಸಿಯಲು ಕಾರಣವಾಗಿದೆ.
ಆದಾಯಕ್ಕೆ ಕತ್ತರಿ
ನಗರದ ಚಾಮರಾಜೇಂದ್ರ ಮೃಗಾಲಯಕ್ಕೆ ಈ ಬಾರಿ ಪ್ರವಾಸಿಗರ ಭೇಟಿ ಕಡಿಮೆಯಾಗಿರುವುದರಿಂದ ಆದಾಯ ಕುಗ್ಗಿದೆ. ಹೊಸ ಪ್ರಾಣಿ-ಪಕ್ಷಿಗಳನ್ನು ತಂದು ಗಮನ ಸೆಳೆಯುತ್ತಿರುವ ಮೃಗಾಲಯಕ್ಕೂ ಚುನಾವಣಾ ಎಫೆಕ್ಟ್ ತಟ್ಟಿದೆ. ಅರಮನೆಗೆ ಬೇಸಿಗೆ ರಜೆಯಲ್ಲಿ ಪ್ರತಿದಿನ 8 ರಿಂದ 10 ಸಾವಿರ ಪ್ರವಾಸಿಗರು ಬರುತ್ತಿದ್ದರು. ಆ ಸಂಖ್ಯೆ 3 ರಿಂದ 5 ಸಾವಿರಕ್ಕೆ ಕುಸಿದಿದೆ.
ಪ್ರತಿವರ್ಷ ಬೇಸಿಗೆ ಸಮಯದಲ್ಲಿ ಹೆಚ್ಚಿನ ಬುಕ್ಕಿಂಗ್ ಬರುತ್ತಿತ್ತು. ಆದರೆ, ಈ ವರ್ಷ ಚುನಾವಣೆ ಇರುವುದರಿಂದ ಎಲ್ಲೆಡೆ ಚೆಕ್‌ಪೋಸ್ಟ್ ತಪಾಸಣೆ ಇರುತ್ತದೆ. ಹೆಚ್ಚು ಹಣವನ್ನು ತೆಗೆದುಕೊಂಡು ಹೋಗಲು ಆಗುವುದಿಲ್ಲ ಎಂದು ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುತ್ತಿದ್ದಾರೆ, ಎನ್ನುತ್ತಾರೆ ಚಾಲಕ ಮಧು.












Click it and Unblock the Notifications