ಕನಿಷ್ಟ 2 ವರ್ಷಗಳಾದರೂ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಬೇಕು-ಸಿಎಂ ಬೊಮ್ಮಾಯಿ
ಮೈಸೂರು, ನವೆಂಬರ್ 28 : ತಳಮಟ್ಟದ ದುಡಿಯುವ ವರ್ಗದವರ ಆರೋಗ್ಯ ಸರ್ಕಾರಕ್ಕೆ ಬಹಳ ಮುಖ್ಯ. ಮುಂದಿನ ದಿನಗಳಲ್ಲಿ ವಿಜ್ಞಾನಿ ಬಳಗದ ಸಂಶೋಧನೆಗಳಿಂದ ಅತ್ಯಂತ ಕಡಿಮೆ ದರದಲ್ಲಿ ಔಷದೋಪಚಾರಗಳು ದೊರಕುವಂತಾಗಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿ ನಿಲಯಗಳು, ಸ್ಕಿಲ್ ಲ್ಯಾಬ್ ಮತ್ತು ಇತರ ಸೌಲಭ್ಯಗಳನ್ನು ಹಾಗೂ ಕೆ.ಆರ್. ಆಸ್ಪತ್ರೆ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರ ಹಾಗೂ ಕೆ.ಆರ್. ಆಸ್ಪತ್ರೆಯೂ ಸೇರಿದಂತೆ ರಾಜ್ಯದ 41 ತಾಲ್ಲೂಕು ಆಸ್ಪತ್ರೆಗಳಲ್ಲಿ 10 ಹಾಸಿಗೆಗಳ ಟೆಲಿ-ಐಸಿಯು ಸೌಲಭ್ಯವನ್ನು ಸಿಎಂ ಬೊಮ್ಮಾಯಿ ಸೋಮವಾರ ಉದ್ಘಾಟಿಸಿದರು.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದ ತೀರ್ಪಿನ ನಂತರ ಚರ್ಚೆ: ಸಿಎಂ

ತಳಮಟ್ಟದ ದುಡಿಯುವ ವರ್ಗದವರಿಂದ ರಾಜ್ಯದ ಆರ್ಥಿಕತೆ ಬೆಳೆಯುತ್ತದೆ
ಬಳಿಕ ಮಾತನಾಡಿದ ಅವರು, ಕೆಲವು ಗ್ರಾಮಗಳಲ್ಲಿ ಜನರಿಗೆ ಚಿಕಿತ್ಸೆ ಸಮರ್ಪಕವಾಗಿ ದೊರೆಯುವುದಿಲ್ಲ. ಜನರಿಗೆ ಸರಿಯಾದ ಮಾಹಿತಿ ಇಲ್ಲದಿರುವುದು ಮತ್ತು ಚಿಕಿತ್ಸೆ ಹಣಕಾಸಿನ ಶಕ್ತಿ ಇಲ್ಲದಿರುವುದೂ ಇದಕ್ಕೆ ಕಾರಣವಾಗಿದೆ. ಆರೋಗ್ಯ ಕ್ಷೇತ್ರದ ವಿಜ್ಞಾನಿಗಳು ತಮ್ಮ ಸಂಶೋಧನೆಗಳು ಜನಸಾಮಾನ್ಯರ ಕೈಗೆ ತಲುಪುವಂತಿರಬೇಕು. ತಳಮಟ್ಟದ ದುಡಿಯುವ ವರ್ಗದವರಿಂದ ರಾಜ್ಯದ ಆರ್ಥಿಕತೆ ಬೆಳೆಯುತ್ತದೆ. ವೈದ್ಯಕೀಯ ಕಾಲೇಜುಗಳು ತಮಗೆ ಸಂಬಂಧಪಟ್ಟ ಯಾವುದೇ ಕ್ಷೇತ್ರದಲ್ಲಿ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಿಕೊಂಡು, ಸಂಶೋಧನೆಗಳ ಮೂಲಕ ಪರಿಹಾರಗಳನ್ನು ಹುಡುಕಬೇಕು. ವೈದ್ಯಕೀಯ ಕ್ಷೇತ್ರದ ಸಂಪೂರ್ಣ ಜ್ಞಾನವುಳ್ಳವರು ನೀವಾಗಿದ್ದು, ನಿಸ್ಸಹಾಯಕರಾಗಬೇಡಿ, ಜನರಿಗೆ ಸಹಾಯವನ್ನು ಮಾಡಬೇಕು. ಆಗ ಪರಿಹಾರಗಳಿಗೆ ಯಾವುದೇ ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಅವಲಂಬಿತವಾಗುವ ಅವಶ್ಯಕತೆಯಿರುವುದಿಲ್ಲ. ಇಂತಹ ಸಂಸ್ಥೆಗಳು ಉತ್ಪಾದಿಸುವ ಔಷಧಿಗಳು ಸಾಮಾನ್ಯ ಜನರ ಕೈಗೆ ಎಟುಕುವುದಿಲ್ಲ ಎಂದರು.

ಪ್ರತಿವರ್ಷ 5 ಸಾವಿರ ವೈದ್ಯರು ವೈದ್ಯಲೋಕಕ್ಕೆ ಬರುತ್ತಿದ್ದಾರೆ
ಮೈಸೂರು ವೈದ್ಯಕೀಯ ಕಾಲೇಜು ಸೇವೆಗೆ ಹೆಸರಾಗಿದೆ. 100 ವರ್ಷದ ಇತಿಹಾಸವಿರುವ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಆರ್ ಎಂಡ್ ಡಿ ಕೇಂದ್ರವನ್ನು ಸ್ಥಾಪಿಸಲು ಮುಂದಿನ ಬಜೆಟ್‌ನಲ್ಲಿ ಅನುದಾನವನ್ನು ನೀಡಲಾಗುವುದು. ಇದು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯವುಳ್ಳ ಆಸ್ಪತ್ರೆಯಾಗಬೇಕು ಎಂದರು.
ಪ್ರತಿವರ್ಷ 5 ಸಾವಿರ ವೈದ್ಯರು ವೈದ್ಯಲೋಕಕ್ಕೆ ಬರುತ್ತಿದ್ದಾರೆ. ಆದರೂ ವೈದ್ಯರ ಕೊರತೆ ಕಾಣುತ್ತದೆ. ಕನಿಷ್ಟ 2 ವರ್ಷಗಳಾದರೂ ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸಬೇಕು. ಅತ್ಯಂತ ಕ್ಲಿಷ್ಟಕರ ವೈದ್ಯಕೀಯ ಸವಾಲುಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾಣಬಹುದು.ಇದು ಯುವ ವೈದ್ಯರಿಗೆ ಅತ್ಯಂತ ಸಹಕಾರಿಯಾಗುತ್ತದೆ. ವೈದ್ಯರು ನೋವನ್ನು ಶಮನ ಮಾಡುವ ಉದಾತ್ತವಾದ ಸೇವೆಯನ್ನು ಸಲ್ಲಿಸುತ್ತಾರೆ. ಬಡವರ ಸೇವೆಯನ್ನೂ ಸಹ ಯುವ ವೈದ್ಯರು ಗಮನಹರಿಸಬೇಕು ಎಂದು ಹೇಳಿದರು.

ಒತ್ತಡವನ್ನು ತಡೆಯಲು ಆರೋಗ್ಯಕರ ದೇಹ ಹಾಗೂ ಮನಸ್ಸು ಅಗತ್ಯ
ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದೆ. ಸರ್ಕಾರ ಕಿವುಡರಿಗೆ ಶ್ರವಣ ಸಾಧನವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಇದಕ್ಕಾಗಿ 500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಡಯಾಲಿಸಿಸ್ ಅನ್ನು 60 ಸೈಕಲ್ಸ್‌ಗಳಿಗೆ ಹೆಚ್ಚಿಸಲಾಗಿದೆ. ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ರಾಜ್ಯದ ಎಲ್ಲ ನಗರಗಳಲ್ಲಿ ನಮ್ಮ ಕ್ಲಿನಿಕ್ ಅನ್ನು ಸ್ಥಾಪಿಸಲಾಗುತ್ತಿದೆ. ಮನುಷ್ಯ ಒತ್ತಡವನ್ನು ತಡೆಯಲು ಆರೋಗ್ಯಕರ ದೇಹ ಹಾಗೂ ಮನಸ್ಸು ಅಗತ್ಯ. ಕೋವಿಡ್ ಸಂದರ್ಭದಲ್ಲಿ ಸದೃಢ ಆರೋಗ್ಯವಿಲ್ಲದಿದ್ದವರೂ ತೊಂದರೆಯನ್ನು ಅನುಭವಿಸಿದರು. ದೇಹದ ಮೆಕ್ಯಾನಿಸಂ ಅನ್ನು ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಆರೋಗ್ಯ ಹದಗೆಡುವ ಸಾಧ್ಯತೆಯಿರುತ್ತದೆ ಎಂದು ಹೇಳಿದರು.

ಆರೋಗ್ಯ ಚಿಕಿತ್ಸೆಯ ದರಗಳು ಸಾಮಾನ್ಯ ಜನರ ಕೈಗೆ ಎಟುಕದಂತಾಗಿದೆ
ಇಂದಿನ ಆಧುನಿಕ ಚಿಕಿತ್ಸೆಯಲ್ಲಿ ಬಹಳಷ್ಟು ಬದಲಾವಣೆಯಾಗುತ್ತಿದೆ. ತಂತ್ರಜ್ಞಾನ ಮತ್ತು ಸಂಶೋಧನೆಗಳಿಂದ ವೈದ್ಯಕೀಯ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದ್ದು, ವೈದ್ಯರು ಹಾಗೂ ರೋಗಿಗಳ ಪಾಲಿಗೆ ಸಹಕಾರಿಯಾಗಿದೆ. ಆರೋಗ್ಯ ಚಿಕಿತ್ಸೆಯ ದರಗಳು ಸಾಮಾನ್ಯ ಜನರ ಕೈಗೆ ಎಟುಕದಂತಾಗಿದೆ. ವಿಜ್ಞಾನಿಗಳು, ಆಸ್ಪತ್ರೆಗಳು, ತಜ್ಞರು, ವಿಶ್ವವಿದ್ಯಾಲಯಗಳು ಜನರಿಗೆ ಸುಲಭ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಪ್ರಯತ್ನಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಮೈಸೂರಿನ ಶಾಸಕರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.