ಹುಣಸೂರು ಪ್ರತ್ಯೇಕ ಜಿಲ್ಲೆಗೆ ಆಗ್ರಹ
ಮೈಸೂರು, ಜನವರಿ, 24: ಡಿ.ದೇವರಾಜ ಅರಸು ಹುಟ್ಟೂರು ಪ್ರತ್ಯೇಕ ಜಿಲ್ಲೆಯಾದರೆ ಸಾಕಷ್ಟು ಅನುಕೂಲಗಳು ಆಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತಿಳಿಸಿದ್ದಾರೆ. ಹಾಗೆಯೇ ಇದೇ ವೇಳೆ ಅವರು ಹುಣಸೂರು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಿ ಎಂದು ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು ಜಿಲ್ಲಾಧಿಕಾರಿಗಳಿಗೆ ತುಂಬಾ ಒತ್ತಡ ಇದೆ. ಈಗಿರುವ ಎಲ್ಲಾ ತಾಲೂಕು ಕೇಂದ್ರಗಳಿಗೆ ಹೋಗಲು ಕಷ್ಟ ಆಗುತ್ತಿದೆ. ಆರು ತಿಂಗಳಾದರೂ ಒಂದು ತಾಲೂಕಿಗೆ ಹೋಗಲು ಆಗುತ್ತಿಲ್ಲ. ಇದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.

6 ತಾಲೂಕುಗಳಿಗೆ ನಾಲ್ಕು ಜನ ಶಾಸಕರಿದ್ದೇವೆ. ಎಲ್ಲಾ ಶಾಸಕರ ಜೊತೆ ಮಾತನಾಡಿದ್ದೇನೆ. ಸಿಎಂ ಜೊತೆಯೂ ಸಹ ಮಾತನಾಡುತ್ತೇನೆ. ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ರಾಜ್ಯದಲ್ಲೇ ಸಂಪತ್ಬಭರಿತ ತಾಲೂಕುಗಳು. ನೂರಾರು ಕೋಟಿ ತಂಬಾಕಿನಿಂದ ಆದಾಯ ಬರುವ ತಾಲೂಕುಗಳಿವೆ. ಆರು ತಾಲೂಕುಗಳನ್ನು ಸೇರಿಸಿ ಒಂದು ಜಿಲ್ಲೆಯಾಗಲಿ ಎಂದು ಆಶಿಸಿದರು.
ನಮ್ಮ ಜಿಲ್ಲೆಯವರೇ ಸಿಎಂ ಆಗಿದ್ದಾರೆ. ಹೀಗಾಗಿ ದೇವರಾಜ ಅರಸು ಅವರ ಹೆಸರು ಅಮರವಾಗಬೇಕು, ಹುಣಸೂರು ತಾಲೂಕು ಪ್ರತ್ಯೇಕ ಜಿಲ್ಲೆಯಾಗಬೇಕು. ಎಚ್ ಡಿ ಕೋಟೆ, ಪಿರಿಯಾಪಟ್ಟಣ ಹಾಗೂ ಹುಣಸೂರಿನಲ್ಲಿ ಅತಿ ಹೆಚ್ಚು ಬುಡಕಟ್ಟು ಜನಾಂಗದವರು ಇದ್ದಾರೆ. ಅವರ ಕಷ್ಟಗಳಿಗೆ ಜಿಲ್ಲಾಧಿಕಾರಿಗಳು ಸ್ಪಂದಿಸುತ್ತಿಲ್ಲ. ನಾನು ಈ ವಿಚಾರದಲ್ಲಿ ಹೋರಾಟ, ಸಂಘರ್ಷ ಮಾಡುವುದಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹುಣಸೂರು ವಿಭಾಗವನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ರಾಮನನ್ನು ಲೋಕಸಭಾ ಚುನಾವಣೆ ಚೀಪ್ ಕ್ಯಾಂಪೇನರ್ ಮಾಡಿಕೊಂಡಿದ್ದಾರೆ, ಇದು ಸರಿಯಲ್ಲ. ರಾಮ ಎಲ್ಲರ ಆಸ್ತಿ. ರಾಮಮಂದಿರ ಉದ್ಟಾಟನೆಯಾಗಿದೆ. ಜನರು ಬಹಳ ಸಂತೋಷವಾಗಿದ್ದಾರೆ. ರಾಮ ಭಾರತೀಯರ ಆರಾಧ್ಯದೈವ, ಭಾರತೀಯತ ಅಸ್ಮಿತೆ. ನೀವು ಕೆಲಸ ಮಾಡಿದ್ದೀರಾ ಶಭಾಷ್. ಮೋದಿ 500 ವರ್ಷಗಳ ಸಮಸ್ಯೆಯನ್ನು ಬಗೆಹರಿಸಿದ್ದಾರೆ. ಜನರ ಕಷ್ಟಗಳಿಗೆ ಮೋದಿ ಇವಾಗಲಾದರೂ ಸ್ಪಂದಿಸಬೇಕು ಎಂದರು.
ಚುನಾವಣೆಗೂ ಮುನ್ನ ಪ್ರತಿಯೊಬ್ಬರಿಗೆ 15 ಲಕ್ಷ ಕೊಡುತ್ತೇನೆ ಅಂದಿದ್ರಿ. ಆದಷ್ಟು ಬೇಗ ಹಣವನ್ನು ಹಾಕಿ. ಜನರು ಸಾಕಷ್ಟು ಕಷ್ಟದಲ್ಲಿದ್ದು, ಎಲ್ಲಾ ವಸ್ತುಗಳಿಗೆ ಜಿಎಸ್‌ಟಿ ಕಟ್ಟುತ್ತಿದ್ದಾರೆ. ಅತಿ ಹೆಚ್ಚು ಜಿಎಸ್‌ಟಿ ಕಟ್ಟುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ನೀರವ್ ಮೋದಿ ಅವರಿಂದ ದೇಶಕ್ಕೆ ಲಕ್ಷಾಂತರ ಕೋಟಿ ನಷ್ಟವಾಗಿದೆ. ಅವರನ್ನು ಬಂಧಿಸಿ ಕರೆತರುತ್ತೇನೆ ಅಂದಿದ್ದರು, ಅದು ಸಹ ಸಾಧ್ಯವಾಗಿಲ್ಲ ಎಂದು ಕುಟುಕಿದರು.











Click it and Unblock the Notifications