ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಮರ್ಯಾದಾ ಹತ್ಯೆ ಮಾಡಿದವರಿಂದಲೇ ಕೃತ್ಯ?
ನಂಜನಗೂಡು, ಸೆಪ್ಟೆಂಬರ್.20: ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಾಳೆ ಎಂಬ ಆಕ್ರೋಶದಲ್ಲಿ ಮಗಳನ್ನು ಕೊಲೆಗೈದ ಮನೆಯವರು ಇದೀಗ ಆಕೆಯ ಪ್ರಿಯಕರನ ಮೇಲೆಯೂ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಗಾಯಾಳು ಯುವಕ ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾನೆ.
ಮರ್ಯಾದ ಹತ್ಯೆಯಲ್ಲಿ ಹತ್ಯೆಯಾದ ಯುವತಿಯ ಪ್ರಿಯಕರನಿಗೆ ಯವತಿಯ ಕಡೆಯವರು ಮನಬಂದಂತೆ ಥಳಿಸಿ ಗಂಭೀರ ಗಾಯಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ. ಹೆಡಿಯಾಲ ಗ್ರಾಮದ ಸಮೀಪವಿರುವ ಪಾರ್ವತಿಪುರ ಗ್ರಾಮದ ಪುಟ್ಟರಾಜು ಎಂಬುವರ ಪುತ್ರ ಕೃಷ್ಣ ಎಂಬಾತನೇ ಹಲ್ಲೆಗೊಳಗಾದವನು.
ಘಟನೆಯ ವಿವರ
ಕೃಷ್ಣ, ಗುರು ಸಿದ್ದೇಗೌಡ ಎಂಬುವರ ಪುತ್ರಿ ಶೋಭಾ (19)ಳನ್ನು ಪ್ರೀತಿಸುತ್ತಿದ್ದನು. ಇದರಿಂದ ಆಕ್ರೋಶಗೊಂಡ ಯುವತಿಯ ಮನೆಯವರು ಆಕೆಯನ್ನು ಹತ್ಯೆಗೈದಿದ್ದರು. ಈ ಬಗ್ಗೆ ಪ್ರಿಯಕರ ಕೃಷ್ಣ ಹುಲ್ಲಹಳ್ಳಿ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪೊಲೀಸರು ತನಿಖೆ ನಡೆಸಿ, ನಾಪತ್ತೆಯಾಗಿದ್ದ ತಂದೆ ಗುರುಸಿದ್ದೇಗೌಡನನ್ನು ಬಂಧಿಸಿ ಜೈಲಿಗೆ ತಳ್ಳಲಾಗಿತ್ತು.

ಈತ ಕಳೆದ ಕೆಲವು ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾನೆ. ಈ ಪ್ರಕರಣದ ನಂತರ ಯುವತಿಯ ಕಡೆಯವರು ಕೃಷ್ಣನ ಮೇಲೆ ಹಲ್ಲೆ ನಡೆಸಲು ಸಮಯ ಕಾಯುತ್ತಲೇ ಇದ್ದರು.
ಈ ನಡುವೆ ಬುಧವಾರ ಬೆಳಗ್ಗೆ ಕೃಷ್ಣ ಟೀ ಕುಡಿಯಲು ಬೇಕರಿಯೊಂದಕ್ಕೆ ತೆರಳಿದ್ದು ಈ ಸಂದರ್ಭ ಮೂರ್ನಾಲ್ಕು ಜನರಿದ್ದ ತಂಡ ಏಕಾಏಕಿ ಆತನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ನಾಪತ್ತೆಯಾಗಿದೆ. ಹಲ್ಲೆಗೊಳಗಾದ ಕೃಷ್ಣನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ನಡುವೆ ವಿಷಯ ತಿಳಿದ ತಹಸೀಲ್ದಾರ್ ದಯಾನಂದ್, ವೃತ್ತನಿರೀಕ್ಷಕ ಶಿವಸ್ವಾಮಿ, ಪಿಎಸ್ ಐ ಆನಂದರವರು ಆಸ್ಪತ್ರೆಗೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications