ಜಂಬೂಸವಾರಿ ಮೆರವಣಿಗೆಯಲ್ಲಿ ಕೇವಲ ಎರಡು ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ
ಮೈಸೂರು, ಅಕ್ಟೋಬರ್ 26: ನಾಡಹಬ್ಬ ದಸರಾ ಉತ್ಸವದ ಜಂಬೂಸವಾರಿಗೆ ಕ್ಷಣಗಣನೆ ಆರಂಭಗೊಂಡಿದ್ದು, ಸೋಮವಾರ ಮೈಸೂರಿನ ಅಂಬಾವಿಲಾಸ ಅರಮನೆ ಅಂಗಳದಲ್ಲಿ ನಡೆಯಲಿರುವ ಜಂಬೂಸವಾರಿ ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳು ಪ್ರಮುಖ ಆಕರ್ಷಣೆಯಾಗಿವೆ.
ಕೊರೊನಾ ಭೀತಿಯ ಹಿನ್ನೆಲೆ ಈ ವರ್ಷ ಕೇವಲ ಎರಡು ಸ್ತಬ್ಧ ಚಿತ್ರಗಳಿಗೆ ಮಾತ್ರ ಸೀಮಿತಗೊಂಡಿದೆ. ಪ್ರತೀ ವರ್ಷವೂ ನಡೆಯುತ್ತಿದ್ದ ವೈಭವದ ದಸರಾದಲ್ಲಿ 30ಕ್ಕೂ ಅಧಿಕ ಸ್ತಬ್ಧ ಚಿತ್ರಗಳಿಗೆ ಅವಕಾಶ ನೀಡಲಾಗುತ್ತಿತ್ತು.
ಮೈಸೂರು ಜಿಲ್ಲಾ ಪಂಚಾಯತಿ ವತಿಯಿಂದ ಕೊರೊನಾ ಜಾಗೃತಿ ಮೂಡಿಸುವ ಸ್ತಬ್ಧಚಿತ್ರ ರೂಪುಗೊಂಡಿದೆ. ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಕೊರೊನಾ ಯೋಧರ ಸೇವೆ ಸ್ಮರಣೆಗಾಗಿ ಈ ಸ್ತಬ್ಧಚಿತ್ರವನ್ನು ರೂಪಿಸಲಾಗಿದೆ.

ಆನೆ ಬಂಡಿ ಸ್ತಬ್ಧಚಿತ್ರ ಮತ್ತೊಂದು ವಿಶೇಷವಾಗಿದ್ದು, ಅರಮನೆ ವಾದ್ಯಗೋಷ್ಠಿ ಕುರಿತಾದ ಚಿತ್ರವೇ ಆನೆ ಬಂಡಿ. ಈ ಎರಡು ಸ್ತಬ್ಧಚಿತ್ರಗಳು ಮಾತ್ರ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ.

ಸರಳ ದಸರಾ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆ ಆವರಣಕ್ಕೆ ಜಂಬೂಸವಾರಿ ಮೆರವಣಿಗೆ ಸೀಮಿತಗೊಂಡಿದ್ದು, 30-40 ನಿಮಿಷಗಳ ಅವಧಿಯಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ.











Click it and Unblock the Notifications