• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜಂಬೂಸವಾರಿಯಲ್ಲಿ ಆನೆಗೆ ಅಂಬಾರಿ ಕಟ್ಟುವುದು ಸುಲಭದ ಕೆಲಸವಲ್ಲ...

|

ಮೈಸೂರು, ಅಕ್ಟೋಬರ್ 26: ಐತಿಹಾಸಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಆನೆಗಳ ಅಲಂಕಾರ ಮುಗಿದಿದ್ದು, ಹುಣಸೂರಿನ ಕಲಾವಿದ ನಾಗಲಿಂಗಪ್ಪ ನೇತೃತ್ವದ ಐವರ ತಂಡ ಅಲಂಕಾರ ಮಾಡಿದೆ.

ಇದಾದ ಬಳಿಕ ಆನೆಗಳಿಗೆ ಸಾಂಪ್ರದಾಯಿಕ ಅಲಂಕಾರ ಮಾಡಲಾಗುತ್ತದೆ. ಅದರಲ್ಲೂ ಅಂಬಾರಿ ಹೊರಲಿರುವ ಅಭಿಮನ್ಯುವಿಗೆ ಅಂಬಾರಿ ಕಟ್ಟುವುದು ಸುಲಭದ ಮಾತಲ್ಲ. ಇದು ನುರಿತ ಮಾವುತರು ಮತ್ತು ಅಧಿಕಾರಿಗಳು ನೆರವೇರಿಸುತ್ತಾರೆ. ಅಂಬಾರಿಯನ್ನು ಆನೆಯ ಬೆನ್ನು ಮೇಲೆ ಕಟ್ಟುವ ಮುನ್ನ ಬೆನ್ನು ಮೇಲೆ ಮೆತ್ತನೆಯ ನಮ್ದಾ ಮತ್ತು ಗಾದಿ ಛಾಪನ್ನಿಟ್ಟ ಬಳಿಕವಷ್ಟೆ ಅಂಬಾರಿ ಕಟ್ಟಲಾಗುತ್ತದೆ.

ಮೈಸೂರು ದಸರಾ: ವಿಜಯದಶಮಿ ದಿನದಂದು ಅರಮನೆ ಆವರಣದಲ್ಲಿ ಸರಳ ಜಂಬೂಸವಾರಿ

ಜಂಬೂಸವಾರಿ ವೇಳೆ ಸರ್ವ ಅಲಂಕಾರಗಳಿಂದ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜಪಡೆಗಳ ಜಂಬೂಸವಾರಿ, ನಮ್ಮ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಆದರೆ ಗಜಪಡೆಗೆ ಅಲಂಕಾರಕ್ಕೆ ಬೇಕಾದ ವಸ್ತುಗಳನ್ನು ಸಿದ್ಧತೆ ಮಾಡುವುದರ ಹಿಂದೆ ಶ್ರಮ ಜೀವಿಗಳ ದೊಡ್ಡ ದಂಡೇ ಇದೆ.

ಅಲಂಕಾರ ಮಾಡುವುದರ ಹಿಂದಿದೆ ಪರಿಣಿತರ ದಂಡು

ಅಲಂಕಾರ ಮಾಡುವುದರ ಹಿಂದಿದೆ ಪರಿಣಿತರ ದಂಡು

ಈ ಬಾರಿ ದಸರಾ ಸರಳವಾದರೂ ಜಂಬೂ ಸವಾರಿಯಲ್ಲಿ ಅಭಿಮನ್ಯು ಚಿನ್ನದ ಅಂಬಾರಿ ಹೊತ್ತು ಅರಮನೆ ಆವರಣದಲ್ಲಿಯೇ ಸುಮಾರು ನಾಲ್ಕು ನೂರು ಮೀಟರ್ ದೂರ ಸಾಗಲಿದ್ದಾನೆ. ಆತ ಅಂಬಾರಿ ಹೊರಲು ಅನುಕೂಲವಾಗುವಂತೆ ಬೆನ್ನ ಮೇಲೆ ಹೊದಿಸಲಾಗುವ ಹೊದಿಕೆಯಾದ ಗಾದಿ, ನಮ್ದಾ, ಛಾಪು ಎಲ್ಲವೂ ಸಿದ್ಧಗೊಂಡಿದೆ. ಇವುಗಳ ಬಗ್ಗೆಯೂ ನಾವು ಹೇಳಬೇಕಾಗುತ್ತದೆ. ಇದನ್ನು ಹೊಲಿಯುವುದು ಸುಲಭದ ಕೆಲಸವಲ್ಲ. ಅಷ್ಟೇ ಅಲ್ಲ ಇದನ್ನು ಎಲ್ಲರಿಂದಲೂ ತಯಾರು ಮಾಡಲು ಸಾಧ್ಯವಿಲ್ಲ. ಇದನ್ನು ನುರಿತವರೇ ಮಾಡುತ್ತಾರೆ.

ಆನೆಗೆ ನೋವಾಗದಂತೆ ತಡೆಯುವ ಉಡುಗೆ

ಆನೆಗೆ ನೋವಾಗದಂತೆ ತಡೆಯುವ ಉಡುಗೆ

ಆನೆಯ ಬೆನ್ನಿನ ಮೇಲೆ ಅದಕ್ಕೆ ಚುಚ್ಚದಂತೆ, ನೋವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಾದಿ, ನಮ್ದಾ, ಛಾಪುನ್ನು ಬಳಸಲಾಗುತ್ತಿದ್ದು, ಈ ವಿಶೇಷ ತೊಡುಗೆಯನ್ನು ದಬ್ಬಣ ಸೂಜಿಯಿಂದ ಹೊಲಿದು ತಯಾರು ಮಾಡಲಾಗುತ್ತದೆ. ಆನೆಗೆ ನೋವಾಗದಂತೆ ಮೆತ್ತನೆ ಹೊದಿಕೆಯನ್ನು ಅದರ ಬೆನ್ನಿನ ಅಳತೆಗೆ ತಕ್ಕಂತೆ ಅಳೆದು ತಯಾರು ಮಾಡುವುದು ಒಂದು ಜಾಣ್ಮೆಯ ಕೆಲಸ. ಆನೆಗಳ ಬೆನ್ನ ಮೇಲೆ ಗಾದಿಯನ್ನಿಟ್ಟು ಕಟ್ಟಿ ಅದರ ಮೇಲೆ ಹೊದಿಕೆಯಾದ ನಮ್ದಾ ಹಾಕಲಾಗುತ್ತದೆ. ಇದರಿಂದ ಆನೆಗಳು ಸುಂದರವಾಗಿ ಕಾಣುತ್ತವೆ. ಗಾದಿಯು ಸುಮಾರು ಆರು ಅಡಿ ಉದ್ದ ಮತ್ತು ಐದು ಅಡಿ ಅಗಲವಿದ್ದು, ದಪ್ಪ ಸುಮಾರು ಒಂದೂವರೆ ಅಡಿಯಿರುತ್ತದೆ.

ಕೆರೆಗಳ ಬದುಗಳಲ್ಲಿರುವ ಹುಲ್ಲು ಬಳಕೆ

ಕೆರೆಗಳ ಬದುಗಳಲ್ಲಿರುವ ಹುಲ್ಲು ಬಳಕೆ

ಗಾದಿಯನ್ನು ಬೆನ್ನು ಮೇಲೆ ಕಟ್ಟಿ ಅದರ ಮೇಲೆ ಅಂಬಾರಿಯನ್ನು ಇಡಲಾಗುತ್ತದೆ. ಗಾದಿಯು ಅಂಬಾರಿ ಬೆನ್ನಿಗೆ ಒತ್ತುವುದನ್ನು ತಡೆಯುವುದಲ್ಲದೆ, ಬೆನ್ನ ಮೇಲೆ ಸಮರ್ಪಕವಾಗಿ ನಿಲ್ಲಲು ಸಹಾಯ ಮಾಡುತ್ತದೆ. ಗಾದಿಗೆ ಉಪಯೋಗಿಸುವ ಒಡಕೆ ಹುಲ್ಲನ್ನು ಕೆರೆಯ ಬದುಗಳಿಂದ ತರಲಾಗುತ್ತದೆ. ಕೆರೆಯ ಬದುಗಳಲ್ಲಿ ಒಡಕೆ ಹುಲ್ಲು ಕಬ್ಬಿನಂತೆ ದಷ್ಠಪುಷ್ಠವಾಗಿ ಬೆಳೆದಿರುತ್ತದೆ. ಈ ಹುಲ್ಲನ್ನು ತಂದು ಒಣಗಿಸಿ ಇದರೊಂದಿಗೆ ಭತ್ತದ ಹುಲ್ಲನ್ನು ಸೇರಿಸಿ ಗೋಣಿ ಚೀಲದಿಂದ ಹೊಲಿದು ಗಾದಿಯನ್ನು ತಯಾರಿಸಲಾಗುತ್ತದೆ.

ಆನೆಗಳ ಬೆನ್ನ ಮೇಲೆ ಛಾಪುವಿನ ಅಲಂಕಾರ

ಆನೆಗಳ ಬೆನ್ನ ಮೇಲೆ ಛಾಪುವಿನ ಅಲಂಕಾರ

ಅದರಲ್ಲೂ ಆನೆಗಳ ಬೆನ್ನಿಗೆ ಇದೆಲ್ಲವನ್ನು ಕಟ್ಟುವುದು ಸುಲಭದ ಕೆಲಸವಲ್ಲ. ಅದಕ್ಕೆ ನೈಪುಣ್ಯತೆ ಬೇಕು. ಅದು ಗೊತ್ತಿರುವುದು ಮಾವುತರು, ಕಾವಾಡಿಗಳಿಗೆ ಮಾತ್ರ. ನಮ್ದಾ ಎಂದು ಕರೆಯುವ ಹೊದಿಕೆಯನ್ನು ಮೊದಲು ಆನೆಯ ಬೆನ್ನಿನ ಮೇಲೆ ಹೊದಿಸಲಾಗುತ್ತದೆ. ಈ ನಮ್ದಾವನ್ನು ಗೋಣಿಚೀಲ ಮತ್ತು ಬಿಳಿ ಕಾಟನ್ ಬಟ್ಟೆಯಿಂದ ಹೊಲೆದಿರುತ್ತಾರೆ. ಮೆತ್ತನೆಯ ಹೊದಿಕೆ ಮೇಲೆ 'ಗಾದಿ' ಎಂದು ಕರೆಯುವ ಚೌಕಾಕಾರದ ದೊಡ್ಡ ಹೊರೆಯನ್ನು ಹೊರಿಸಲಾಗುತ್ತದೆ. ಈ ಗಾದಿಯ ತೂಕ ಸುಮಾರು ಮುನ್ನೂರು ಕೆ.ಜಿ ತೂಕ ಇರುತ್ತದೆ. ಈ ದೊಡ್ಡ ಗೋಣಿಚೀಲದಲ್ಲಿ ತುಂಬಿರುವುದು ಕೆರೆಯಲ್ಲಿ ಬೆಳೆಯುವ ಜೊಂಡು ಹುಲ್ಲು. ಇದನ್ನು ಸುಮಾರು ಎಂಬತ್ತರಿಂದ ತೊಂಬತ್ತು ಅಡಿ ಉದ್ದದ ಹಗ್ಗದಿಂದ ಬಿಗಿಯಲಾಗುತ್ತದೆ. ಅದರ ಮೇಲೆ ಮತ್ತೊಂದು ಬಟ್ಟೆಯನ್ನು ಹೊದಿಸಲಾಗುತ್ತದೆ. ಅದಕ್ಕೆ ಇವರ ಭಾಷೆಯಲ್ಲಿ ಹೇಳುವುದು ಛಾಪು ಎಂದು. ಇದು ಸಹ ತೆಂಗಿನ ನಾರನ್ನು ತುಂಬಿ ಹತ್ತಿ ಬಟ್ಟೆಯಿಂದ ಹೊಲೆದದ್ದೇ ಆಗಿದೆ. ಈ ಮೂರನ್ನು ಸೇರಿಸಿ ಆನೆಯ ಹಿಂಭಾಗದಿಂದ 'ದುಮುಚಿ' ಎಂಬ ರಬ್ಬರ್ ಮತ್ತು ಆನೆಯ ಹೊಟ್ಟೆ ಭಾಗಕ್ಕೆ ಚೆಸ್ಟ್ ಲೆಗ್ ರಬ್ಬರ್ ಹಗ್ಗ ಬಿಗಿಯಲಾಗುತ್ತದೆ ಇದರ ಮೇಲೆ ಅಂಬಾರಿಯನ್ನು ಕಟ್ಟಲಾಗುತ್ತದೆ.

ಅಂಬಾರಿ ಕಟ್ಟುವುದಕ್ಕೆ ಪರಿಣಿತಿ ಬೇಕು

ಅಂಬಾರಿ ಕಟ್ಟುವುದಕ್ಕೆ ಪರಿಣಿತಿ ಬೇಕು

ಸಾಮಾನ್ಯವಾಗಿ ಅಂಬಾರಿಯನ್ನು ಕಟ್ಟಲು ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಕ್ರೇನ್ ಮೂಲಕ ಎತ್ತಿ ನಂತರ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನ ಇದಕ್ಕಾಗಿ ನಿರ್ಮಿಸಿರುವ ವೇದಿಕೆಯ ಮೇಲೆ ನಿಂತು ಅಂಬಾರಿನ್ನು ಬಿಗಿಯಾಗಿ ಕಟ್ಟುತ್ತಾರೆ. ಅಂಬಾರಿ, ಗಾದಿ, ನಮ್ದಾ, ಮಾವುತ ಎಲ್ಲವೂ ಸೇರಿದರೆ ಸುಮಾರು ಸಾವಿರ ಕೆ.ಜಿ ತೂಕವನ್ನು ಅಭಿಮನ್ಯು ಹೊತ್ತು ಮೆರವಣಿಗೆಯಲ್ಲಿ ಸಾಗಬೇಕಾಗಿದೆ. ಈ ಬಾರಿ ಸುಮಾರು ಮೂವತ್ತು ನಿಮಿಷದಷ್ಟು ಮಾತ್ರ ಜಂಬೂಸವಾರಿ ಮೆರವಣಿಗೆ ಸಾಗಲಿರುವುದರಿಂದ ಅಭಿಮನ್ಯುಗೆ ಹೆಚ್ಚಿನ ಶ್ರಮ ಇರುವುದಿಲ್ಲ. ಸದ್ಯ ಮೊದಲ ಬಾರಿಗೆ ಅಭಿಮನ್ಯು ಅಂಬಾರಿ ಹೊರುತ್ತಿದ್ದು, ಆ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಜನ ಕಾಯುತ್ತಿದ್ದಾರೆ.

English summary
The countdown to the historic Mysuru Dasara Jumboo Savari has begun. The elephants are decorated by a team of five headed by the artist Nagalingappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X