ಆಯುಕ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಮೈಸೂರು ಮೇಯರ್ ತಸ್ನೀಂ
ಮೈಸೂರು, ಮೇ 02: ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರ ನಡೆ ನನಗೆ ಅಸಮಾಧಾನ ತಂದಿದೆ ಎಂದು ಪಾಲಿಕೆಯ ಮೇಯರ್ ತಸ್ನೀಂ ಗಂಭೀರ ಆರೋಪ ಮಾಡಿದ್ದಾರೆ.
Recommended Video
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿ, "ಆಯುಕ್ತರು ಮೇಯರ್ ಸ್ಥಾನಕ್ಕೂ ಬೆಲೆ ಕೊಡುತ್ತಿಲ್ಲ. ಸದಸ್ಯರ ಸ್ಥಾನಕ್ಕೂ ಬೆಲೆ ಕೊಡುತ್ತಿಲ್ಲ. ಈ ಬಗ್ಗೆ ನಾನು ಸಚಿವರ ಗಮನಕ್ಕೆ ತರುತ್ತೇನೆ. ಕೊರೊನಾ ನಿಯಂತ್ರಣದ ಕಾರ್ಯಕ್ರಮದಲ್ಲಿ ನಗರ ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಪಾಲಿಕೆ ಆಯುಕ್ತರು, ಅಧಿಕಾರಿಗಳು ತಮಗಿಷ್ಟ ಬಂದಂತೆ ಕೆಲಸ ಮಾಡುತ್ತಿದ್ದಾರೆ. ದಾನಿಗಳು ಎಷ್ಟು ಕೊಟ್ಟರು? ಏನು ಕೊಟ್ಟರು? ಎನ್ನುವ ಮಾಹಿತಿಯೇ ಇಲ್ಲ" ಎಂದು ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
"ಮೊನ್ನೆ ಪಾಲಿಕೆಯ ಮೊಬೈಲ್ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮಕ್ಕೆ ನನಗೆ ಸರಿಯಾಗಿ ಆಹ್ವಾನವೇ ನೀಡಿಲ್ಲ. ಆ ಇಡೀ ಕಾರ್ಯಕ್ರಮದ ಬಗ್ಗೆ ಒಂದೇ ಒಂದು ಮಾಹಿತಿಯೂ ಇಲ್ಲ. ಪಾಲಿಕೆ ಸದಸ್ಯರಿಗಷ್ಟೆ ಗ್ರೌಂಡ್ ರಿಯಾಲಿಟಿ ಗೊತ್ತಿರುತ್ತದೆ. ಆದರೆ ಇವರು ಪಾಲಿಕೆ ಸದಸ್ಯರನ್ನೇ ಪರಿಗಣನೆಗೆ ತೆಗೆದುಕೊಂಡಿಲ್ಲ. ಇದು ನನಗೆ ತೀವ್ರ ಅಸಮಾಧಾನ ತಂದಿದೆ" ಎಂದು ಬೇಸರ ವ್ಯಕ್ತಪಡಿಸಿದರು.

"ಈ ಬಗ್ಗೆ ನಾನು ಸಚಿವರಿಗೆ ದೂರು ನೀಡುತ್ತೇನೆ. ಪಾಲಿಕೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಮುಂದೆ ಈ ವಿಚಾರವಾಗಿ ಸತ್ಯಾಗ್ರಹ ಮಾಡಲು ಸಿದ್ಧಳಿದ್ದೇನೆ. ತಸ್ನೀಂಗೆ ಗೌರವ ಬೇಡ, ಮೇಯರ್ ಹುದ್ದೆಗೆ ಗೌರವ ನೀಡಲಿ" ಎಂದರು.












Click it and Unblock the Notifications