• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನ ಹಳೆಕೆರೆಯಲ್ಲಿ ಮೊಳಗುತ್ತಿದೆ ದೇಶಪ್ರೇಮದ ಕಹಳೆ..!

|

ಮೈಸೂರು, ಜನವರಿ 18: ಆ ಕೆರೆ ಕೂಡ ಎಲ್ಲ ಕೆರೆಗಳಂತೆಯೇ ಇತ್ತು. ಅದನ್ನು ಸ್ಥಳೀಯರು ಹಳೇ ಕೆರೆ ಎಂದು ಕರೆಯುತ್ತಿದ್ದರು. ಜನ ಜಾನುವಾರುಗಳಿಗೆ ನೀರು ಕುಡಿಸಲು, ಬಟ್ಟೆ ಒಗೆಯಲು, ಕೃಷಿ ಚಟುವಟಿಕೆಗೆ ಬಳಸಲಾಗುತ್ತಿತ್ತು. ಆದರೀಗ ಅವತ್ತಿನ ಹಳೆಕೆರೆ ಸಂಪೂರ್ಣ ಬದಲಾಗಿ ಹೊಸೆಕೆರೆಯಾಗಿ ಪರಿವರ್ತಿತಗೊಂಡಿದೆ. ಜತೆಗೆ ಕೆರೆ ದಡದಲ್ಲೊಂದು ಪ್ರವಾಸಿ ತಾಣವೂ ಸದ್ದಿಲ್ಲದೆ ಸೃಷ್ಟಿಯಾಗಿದ್ದು, ದೇಶ ಪ್ರೇಮದ ಕಹಳೆ ಮೊಳಗುತ್ತಿದೆ.

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಸರ್ಕಲ್ ಬಳಿಯ ಮೈಸೂರು-ಬಂಟ್ವಾಳ ಹೆದ್ದಾರಿಯ ಸಮೀಪದಲ್ಲಿರುವ ಹಳೆ ಕೆರೆ ಇವತ್ತು ಹತ್ತು ಹಲವು ಹೊಸತನಗಳೊಂದಿಗೆ ಕಂಗೊಳಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಮಳೆ ಬಾರದೆ ಕೆರೆ ಒಣಗಿತ್ತು. ಆದರೆ ಇತ್ತೀಚೆಗೆ ಕೆರೆ ತುಂಬಿದೆ.

ಕೆರೆಯಲ್ಲೊಂದು ವಾಟರ್ ಪಾರ್ಕ್ ನಿರ್ಮಾಣ

ಕೆರೆಯಲ್ಲೊಂದು ವಾಟರ್ ಪಾರ್ಕ್ ನಿರ್ಮಾಣ

ಸರ್ಕಾರದ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಯಶಸ್ವಿಯಾಗಿ ನಡೆದಿದ್ದರಿಂದ ಬಹುತೇಕ ಕೆರೆಗಳು ತುಂಬಿ ತುಳುಕುತ್ತಿದೆ. ಅದರಂತೆ ಕುಂದನಹಳ್ಳಿಯ ಹಳೆ ಕೆರೆಯೂ ನೀರು ತುಂಬಿ ಅಲೆಯಾಡುತ್ತಾ ಕಣ್ಮನ ಸೆಳೆಯುತ್ತಿದೆ. ಕೆರೆಯಲ್ಲಿ ದೋಣಿ ವಿಹಾರ, ತೆಪ್ಪ ಸವಾರಿ, ವಾಟರ್ ರೋಲರ್ ಇಷ್ಟೇ ಅಲ್ಲದೆ ಕೆರೆ ನಡುವೆ ಆಟವಾಡಲು ಆಟಿಕೆಗಳನ್ನು ಸಾಹಸ ಮಾಡಲು ಸಾಧನಾ ಸಲಕರಣೆಗಳನ್ನಿಡಲಾಗಿದೆ. ಪಕ್ಕದಲ್ಲಿಯೇ ಪ್ರವಾಸಿಗರಿಗೆ ಉಳಿದುಕೊಳ್ಳಲು ಕಾಟೇಜ್ ಇದೆ. ಈ ಸ್ಥಳಕ್ಕೆ ಕೂರ್ಗ್ ವಾಟರ್ ಪಾರ್ಕ್ ಎಂದು ನಾಮಕರಣ ಮಾಡಲಾಗಿದೆ.

ಬೆಳ್ಳಕ್ಕಿಗಳೀಗ ಕೊಡಗಿನ ಅತಿಥಿಬೆಳ್ಳಕ್ಕಿಗಳೀಗ ಕೊಡಗಿನ ಅತಿಥಿ

ಕೊಡಗಿನ ನಿವಾಸಿಯ ಕನಸಿನ ಕೂಸು

ಕೊಡಗಿನ ನಿವಾಸಿಯ ಕನಸಿನ ಕೂಸು

ಇವತ್ತು ಹಳೆಕೆರೆಯಲ್ಲಿ ನಿರ್ಮಾಣವಾಗಿರುವ ಕೂರ್ಗ್ ವಾಟರ್ ಪಾರ್ಕ್ ಕೊಡಗಿನ ನಿವಾಸಿ ಲಕ್ಷ್ಮಿನಾರಾಯಣ್ ಅವರ ಕನಸಿನ ಕೂಸು. ಮೈಸೂರಿನ ಕಡೆಗೆ ಬರುತ್ತಿದ್ದಾಗ ಖಾಲಿ ಕೆರೆ ಕಾಣಿಸಿದಾಗ ಅವರಿಗೆ ವಾಟರ್ ಪಾರ್ಕ್ ಮಾಡುವ ಕನಸು ಚಿಗುರೊಡೆದಿತ್ತು. ಮೊದಲಿಗೆ ಕೆರೆಯಲ್ಲಿ ಬೋಟಿಂಗ್ ಆರಂಭಿಸಿದರು. ಇದು ನಿಧಾನವಾಗಿ ಪ್ರವಾಸಿಗರನ್ನು ಸೆಳೆಯಲು ಆರಂಭಿಸಿತು. ಬಳಿಕ ಕಾಟೇಜ್ ಸೇರಿದಂತೆ ಗಾರ್ಡನ್, ವಾಚ್ ಟವರ್ ನಿರ್ಮಿಸಲಾಯಿತು. ಕೊಡಗಿಗೆ ತೆರಳುವ ಮೈಸೂರು-ಬಂಟ್ವಾಳ ಹೆದ್ದಾರಿಯ ಬದಿಯಲ್ಲಿರುವ ಕಾರಣ ಕೊಡಗಿನ ಕಡೆಗೆ ತೆರಳುವ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಆರಂಭಿಸಿದರು. ದಿನದಿಂದ ದಿನಕ್ಕೆ ಇದು ಪ್ರವಾಸಿಗರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.

ಮೈನವಿರೇಳಿಸುವ ಕಾರ್ಗಿಲ್ ಸಮರದ ಪ್ರತಿಮೆ

ಮೈನವಿರೇಳಿಸುವ ಕಾರ್ಗಿಲ್ ಸಮರದ ಪ್ರತಿಮೆ

ಕೂರ್ಗ್ ವಾಟರ್ ಪಾರ್ಕ್ ಗೆ ತೆರಳಿದರೆ ಮೋಜು-ಮಸ್ತಿ ಜತೆಗೆ ಸಾಹಸ ಕ್ರೀಡೆಗಳಿಗೆ ಅವಕಾಶವಿರುವುದರಿಂದ ಪ್ರವಾಸಿಗರಿಗೆ ಈ ತಾಣ ಅಚ್ಚುಮೆಚ್ಚಾಗುತ್ತದೆ. ಬೃಹತ್ ಕೆರೆ ಅದರಾಚೆಗಿನ ಹೊಲ ಗದ್ದೆಗಳು, ದೂರದ ಬೆಟ್ಟಗುಡ್ಡಗಳನ್ನೊಳಗೊಂಡ ನಿಸರ್ಗ ಸೌಂದರ್ಯ ಕಣ್ಣಿಗೆ ರಾಚುತ್ತದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಮೋಜು ಮಸ್ತಿ, ಸಾಹಸ ಕ್ರೀಡೆ ಜತೆಗೆ ದೇಶ ಪ್ರೇಮ ಮೂಡಿಸುವ ಕಾರ್ಯವನ್ನು ಕೂಡ ಮಾಡಲಾಗಿದೆ. ಕಾರ್ಗಿಲ್ ಸಮರದಲ್ಲಿ ಜಯ ಸಾಧಿಸಿದ ನಮ್ಮ ಯೋಧರು ತ್ರಿವರ್ಣ ಧ್ವಜ ನೆಟ್ಟು ವಿಜಯೋತ್ಸವ ಆಚರಿಸಿದ ಆ ಮೈನವಿರೇಳಿಸುವ ದೃಶ್ಯದ ಪ್ರತಿಮೆಯನ್ನು ಅಳವಡಿಸಲಾಗಿದೆ.

ಪರಮವೀರಚಕ್ರ ಪಡೆದ ಯೋಧರ ಮಾಹಿತಿ

ಪರಮವೀರಚಕ್ರ ಪಡೆದ ಯೋಧರ ಮಾಹಿತಿ

ಕೊರೊನಾ ಲಾಕ್ ಡೌನ್ ಸಂದರ್ಭ ವಾಟರ್ ಪಾರ್ಕ್ ಬಂದ್ ಮಾಡಿದ ಅವರು ಸುಮ್ಮನೆ ಕುಳಿತು ಕೊಳ್ಳಲಿಲ್ಲ. ಬದಲಿಗೆ ಕೆರೆ ಬದಿಯ ಆವರಣದಲ್ಲಿ ದೇಶದ ರಕ್ಷಣೆಯಲ್ಲಿ ತೊಡಗಿಸಿಕೊಂಡ ಮತ್ತು ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಯೋಧರನ್ನು ಗೌರವಿಸುವ ಸಲುವಾಗಿ ಅವರನ್ನು ಸದಾ ಸ್ಮರಣೆ ಮಾಡಲು ಸ್ವಾತಂತ್ರ್ಯ ನಂತರ ನಡೆದ ಯುದ್ಧದಿಂದ ಆರಂಭವಾಗಿ ಕಾರ್ಗಿಲ್ ಸಮರದವರೆಗೆ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಯೋಧರಿಗೆ ಸರ್ಕಾರ ನೀಡಿದ ಪರಮವೀರ ಚಕ್ರ ಗೌರವದ ಮಾಹಿತಿಯನ್ನು ಯೋಧರ ಚಿತ್ರಸಮೇತ ಅಮೃತ ಶಿಲೆಯಲ್ಲಿ ನಿರ್ಮಿಸಿ ಜನಕ್ಕೆ ತಿಳಿಸುವ ಮಹಾತ್ಕಾರ್ಯವನ್ನು ಮಾಡಿರುವುದು ವಿಶೇಷವಾಗಿದೆ.

ಗಡಿಭಾಗದ ಮಣ್ಣಿಗೆ ನಿತ್ಯ ಪೂಜೆ

ಗಡಿಭಾಗದ ಮಣ್ಣಿಗೆ ನಿತ್ಯ ಪೂಜೆ

ಇನ್ನು ಇಲ್ಲಿ ಮತ್ತೊಂದು ವಿಶೇಷತೆಯನ್ನು ಕೂಡ ಕಾಣಬಹುದಾಗಿದೆ. ಅದೇನೆಂದರೆ ಭಾರತದ ವಿವಿಧೆಡೆಯ ಗಡಿಭಾಗದ ಮಣ್ಣನ್ನು ತಂದು ಇಲ್ಲಿ ನಿರ್ಮಿಸಲಾಗಿರುವ "ಅಮರ್ ಜವಾನ್ ಹುತಾತ್ಮ ಸ್ಮಾರಕ'ದ ಬಳಿಯಿಟ್ಟು ಪೂಜಿಸಲಾಗುತ್ತಿದೆ. ಈ ಮಣ್ಣನ್ನು ಮಾಲೀಕರಾದ ಲಕ್ಷ್ಮಿನಾರಾಯಣರವರು 2013ರಲ್ಲಿ ಸರಹದ್ ಕೊ ಪ್ರಣಾಮ್ ಎಂಬ ಕಾರ್ಯಕ್ರಮದಡಿ ಭಾರತ ದೇಶದ ಗಡಿ ಭಾಗಗಳಿಗೆ ಭೇಟಿ ನೀಡಿದ ವೇಳೆ ತಂದಿರುವುದು ಗಮನಾರ್ಹವಾಗಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಮೈಸೂರಿನಿಂದ ಕೊಡಗಿನ ಕಡೆಗೆ ತೆರಳುವಾಗ ಅಥವಾ ಕೊಡಗಿನಿಂದ ಮೈಸೂರಿನ ಕಡೆಗೆ ಆಗಮಿಸುವಾಗ ಹೆದ್ದಾರಿ ಬದಿಯಲ್ಲಿಯೇ ಕೂರ್ಗ್ ಪಾರ್ಕ್ ನೋಡಲು ಸಿಗುತ್ತದೆ. ಬಹಳಷ್ಟು ಮಂದಿಗೆ ಇದೇನಪ್ಪಾ ಎಂಬ ಕುತೂಹಲವೂ ಮೂಡಿರುತ್ತದೆ. ಆ ಕುತೂಹಲ ತಣಿಯಬೇಕಾದರೆ ಇದರೊಳಗೆ ಒಮ್ಮೆ ಹೆಜ್ಜೆ ಹಾಕಲೇಬೇಕಾಗುತ್ತದೆ.

English summary
A water park is located in a lake near the Mysuru-Bantwal highway near Kundanahalli Circle in Piriyapatna taluk of Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X