ಮಕ್ಕಳಿಂದ ದೂರು; ಮದ್ಯದಂಗಡಿ ಬಂದ್ ಮಾಡಿಸಿದ ಯಡಿಯೂರಪ್ಪ!
ಮೈಸೂರು, ಜನವರಿ 29: ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆಯಂತೆ ಮೈಸೂರು ನಗರದಲ್ಲಿನ ಮದ್ಯದಂಗಡಿಯನ್ನು ಮುಚ್ಚಲಾಗಿದೆ. ಶಾಲಾ ಮಕ್ಕಳು ಮಖ್ಯಮಂತ್ರಿಗಳಿಗೆ ಮದ್ಯದಂಗಡಿ ಕುರಿತು ದೂರನ್ನು ನೀಡಿದ್ದರು.
ಮೈಸೂರಿನ ವಿಶ್ವೇಶ್ವರನಗರದ ಅಕ್ಕ ಮಹಾದೇವಿ ರಸ್ತೆಯಲ್ಲಿದ್ದ ಮದ್ಯದಂಗಡಿಯನ್ನು ಮುಚ್ಚಲಾಗಿದೆ. ಇತ್ತೀಚೆಗೆ ಅಕ್ಕಮಹಾದೇವಿ ರಸ್ತೆಯಲ್ಲಿ ಜೆ. ಪಿ. ನಗರ ಶರಣ ವೇದಿಕೆ ವತಿಯಿಂದ ನಿರ್ಮಿಸಿರುವ 12 ಅಡಿ ಎತ್ತರದ ಅಕ್ಕಮಹಾದೇವಿ ಪ್ರತಿಮೆ ಅನಾವರಣಗೊಳಿಸಲು ಮುಖ್ಯಮಂತ್ರಿಗಳು ಆಗಮಿಸಿದ್ದರು.
ಬಿ. ಎಸ್. ಯಡಿಯೂರಪ್ಪ ಆಗಮಿಸಿದ್ದ ಸಂದರ್ಭದಲ್ಲಿ ಮಹರ್ಷಿ ಪಬ್ಲಿಕ್ ಶಾಲೆಯ ಮಕ್ಕಳು ನೂತನವಾಗಿ ತೆರೆಯಲಾದ ಮದ್ಯದ ಅಂಗಡಿಯನ್ನು ಮುಚ್ಚಿಸಬೇಕು. ನೀಡಿರುವ ಲೈಸನ್ಸ್ ಸಹ ರದ್ದುಗೊಳಿಸಬೇಕು ಎಂದು ಮನವಿ ಪತ್ರವನ್ನು ಸಲ್ಲಿಸಿದ್ದರು.

ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಯಡಿಯೂರಪ್ಪ ಕೂಡಲೇ ಮದ್ಯದ ಅಂಗಡಿ ಮುಚ್ಚಬೇಕು. ಮಾಲೀಕರಿಗೆ ಬೇರೆ ಕಡೆ ಸ್ಥಳದಲ್ಲಿ ತೆರೆಯಲು ಅವಕಾಶ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಆದೇಶ ನೀಡಿದ್ದರು.
ಮೈಸೂರು ಜಿಲ್ಲಾಡಳಿತದ ಸೂಚನೆ ಮೇರೆಗೆ ಕೆಲವು ತಿಂಗಳಿನಿಂದ ಕಾರ್ಯ ನಿರ್ವಹಿಸುತ್ತಿದ್ದ ಧ್ರುವತಾರೆ ಸ್ಪಿರಿಟ್ ಅಂಗಡಿಯನ್ನು ಮುಚ್ಚಿಸಲಾಗಿದೆ. ಮಹರ್ಷಿ ಪಬ್ಲಿಕ್ ಶಾಲೆಯ ಮಕ್ಕಳು ಬಸ್ ಹತ್ತುವ, ಇಳಿಯುವ ನಿಲ್ದಾಣದ ಸಮೀಪದಲ್ಲೇ ಇರುವ ವಾಣಿಜ್ಯ ಮಳಿಗೆಯಲ್ಲಿ ಮದ್ಯದಂಗಡಿ ತೆರೆದಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿತ್ತು.
ಅಂಗಡಿ ಸಮೀಪದಲ್ಲೇ ಡಿಎವಿ ಪಬ್ಲಿಕ್ ಶಾಲೆ, ಹಿಂದೂಸ್ಥಾನ್ ಪ್ರಥಮ ದರ್ಜೆ ಕಾಲೇಜು, ಎಸ್‌ವಿಎಂ ಪಿಯುಸಿ ಕಾಲೇಜು ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಜಾಕಿ ಬಟ್ಟೆ ಕಾರ್ಖಾನೆಯ 2500ಕ್ಕೂ ಹೆಚ್ಚು ಕಾರ್ಮಿಕ ಮಹಿಳೆಯರೂ ಓಡಾಡುತ್ತಿದ್ದರು.
ಈಗ ಮುಖ್ಯಮಂತ್ರಿಗಳ ಸೂಚನೆಯಂತೆ ಅಂಗಡಿ ಮುಚ್ಚಿದ್ದರಿಂದಾಗಿ ಕುಡುಕರ ಕಿರಿಕಿರಿ ತಪ್ಪಿತೆಂದು ಎಲ್ಲರು ನಿಟ್ಟುಸಿರು ಬಿಟ್ಟಿದ್ದಾರೆ. ಮಕ್ಕಳ ಮನವಿಗೆ ಯಡಿಯೂರಪ್ಪ ಅವರು ಕೂಡಲೇ ಸ್ಪಂದಿಸಿದ್ದಕ್ಕಾಗಿ ಕೃತಜ್ಞತೆ ಹೇಳಿದ್ದಾರೆ.












Click it and Unblock the Notifications