ಮೈಸೂರಿನಲ್ಲಿ ಫೀಲ್ಡ್ ಗಿಳಿಯಲಿದೆ ಚಾಮುಂಡಿ ಪಡೆ: ಈ ಮಹಿಳಾ ತಂಡದ ಕೆಲಸವೇನು?
ಮೈಸೂರು, ಜನವರಿ 08: ಹೊಸ ವರ್ಷದಂದು ಮೈಸೂರು ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಮಹಿಳೆ ಮಕ್ಕಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಮೂಲಕ ವರ್ಷಾಚರಣೆ ಯಶಸ್ವಿಯಾಗಿ ನಡೆಯಲು ಸಹಕಾರಿಯಾಗಿದ್ದ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಇನ್ಮುಂದೆ ನಗರದಲ್ಲಿ ಗಸ್ತು ತಿರುಗುವ ಮೂಲಕ ಪುಂಡರನ್ನು ಮಟ್ಟ ಹಾಕಲು ಸಜ್ಜಾಗಿದೆ.
ನಗರದಲ್ಲಿ ಚಾಮುಂಡಿ ಮಹಿಳಾ ಸುರಕ್ಷಾ ಪಡೆಯ ಅಗತ್ಯತೆಯಿತ್ತು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮಾತುಕತೆಗಳು ನಡೆಯುತ್ತಿದ್ದವು, ಶಾಲಾ ಕಾಲೇಜು ಸುತ್ತಮುತ್ತ, ಪಾರ್ಕ್ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ನಿಂತು ದಾರಿಯಲ್ಲಿ ಹೋಗಿ ಬರುವ ಮಹಿಳೆಯರು, ಯುವತಿಯರು, ಶಾಲಾ, ಕಾಲೇಜು ವಿದ್ಯಾರ್ಥಿನಿಯರನ್ನು ರೇಗಿಸುವುದು, ಅಶ್ಲೀಲವಾಗಿ ವರ್ತಿಸುವುದು ಹೀಗೆ ಪುಂಡರು ಆಟಾಟೋಪ ನಡೆಸುತ್ತಿದ್ದರು.

ಈ ಬಗ್ಗೆ ಹಲವು ಬಾರಿ ಕುಂದುಕೊರತೆ ಸಭೆಗಳಲ್ಲೂ ದೂರುಗಳು ಕೇಳಿ ಬಂದಿದ್ದವು, ಇನ್ನು ಮುಂದೆ ಮೈಸೂರು ನಗರದಲ್ಲಿ ಪುಂಡರ ಹಾವಳಿಗೆ ಬ್ರೇಕ್ ಬೀಳಲಿದ್ದು, ಪುಂಡರನ್ನು ಮಟ್ಟಹಾಕಲೆಂದೇ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಫೀಲ್ಡ್‌ಗೆ ಇಳಿಯಲಿದೆ. ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳಾ ಪಡೆಯ ಗಸ್ತು ವಾಹನಕ್ಕೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಚಾಲನೆ ನೀಡಿದ್ದಾರೆ.
ಮಹಿಳೆಯರ ರಕ್ಷಣೆಗೆ ಪ್ರತ್ಯೇಕ ಪಡೆ
ಇದೇ ವೇಳೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಬರುತ್ತಿರುವ ಹಿನ್ನಲೆಯಲ್ಲಿ ಮೈಸೂರು ನಗರ ಪೊಲೀಸರಿಂದ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ಸಾರ್ವಜನಿಕ ಸ್ಥಳ, ಶಾಲಾ, ಕಾಲೇಜುಗಳಲ್ಲಿ ಹೆಣ್ಣು ಮಕ್ಕಳನ್ನು ರೇಗಿಸಿ, ಕಿರುಕುಳ ನೀಡುವ ಪುಂಡರನ್ನು ಮಟ್ಟ ಹಾಕಲು ಸಿದ್ಧವಾಗಿರುವ ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಕುರಿತಂತೆ ಅರಿವು ಮೂಡಿಸಲಾಯಿತು.
ಈ ವೇಳೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಮಾತನಾಡಿ 'ಮೈಸೂರು ನಗರದಲ್ಲಿ ಮಹಿಳೆಯರ ರಕ್ಷಣೆಗೆ ಪ್ರತ್ಯೇಕವಾಗಿ ಪಡೆ ಸ್ಥಾಪಿಸಲಾಗಿದೆ. ಈ ಪಡೆಯ ಸದಸ್ಯರು ವನಿತೆಯ ಮೇಲೆ ದೌರ್ಜನ್ಯ ತಡೆಯುವ, ಮಹಿಳೆಯರ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ. ಇಂದಿನಿಂದಲೇ ನಗರದೆಲ್ಲೆಡೆ ಗಸ್ತು ತಿರುಗಲಿದ್ದು, ಪುಂಡರ ಹಾವಳಿ ನಿಯಂತ್ರಿಸಿ ಮಹಿಳೆಯರಿಗೆ ರಕ್ಷಣೆಗೆ ನೀಡಲಿದ್ದಾರೆ' ಎಂದು ಹೇಳಿದರು.

ಚಾಮುಂಡಿ ಮಹಿಳಾ ಸುರಕ್ಷಾ ಪಡೆಯ ಕೆಲಸವೇನು?
ಜಾಥಾದ ವೇಳೆ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡು ನಗರದ ವಿವಿಧೆಡೆ ಜಾಗೃತಿ ಜಾಥಾ ನಡೆಸಿ ಹೆಣ್ಮಕ್ಕಳಲ್ಲಿ ಧೈರ್ಯ ತುಂಬಿದರು. ಡಿಸಿಪಿ ಎಸ್.ಜಾಹ್ನವಿ, ಸಿಎಆರ್ ಡಿಸಿಪಿ ಮಾರುತಿ, ಎಸಿಪಿಗಳಾದ ಶಾಂತಮಲ್ಲಪ್ಪ, ಗಜೇಂದ್ರ ಪ್ರಸಾದ್, ಪರಶುರಾಮಪ್ಪ, ಸಂದೇಶ್ ಕುಮಾರ್, ಚಂದ್ರಶೇಖರ್, ಸುರೇಶ್ ಸೇರಿದಂತೆ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
ಇನ್ನು ಚಾಮುಂಡಿ ಮಹಿಳಾ ಸುರಕ್ಷಾ ಪಡೆಯ ಬಗ್ಗೆ ಹೇಳಬೇಕೆಂದರೆ ಸಾರ್ವಜನಿಕ ಸ್ಥಳ ಸೇರಿದಂತೆ ಶಾಲಾ, ಕಾಲೇಜು ಮತ್ತು ಉದ್ಯೋಗ ಸ್ಥಳದಲ್ಲಿ ಏನಾದರೂ ತೊಂದರೆ ಕಿರುಕುಳ ಸಂಭವಿಸಿದರೆ ವನಿತೆಯ ರಕ್ಷಣೆಗೆ ಈ ಪಡೆ ಧಾವಿಸಲಿದೆ. ಕೇವಲ ಮಹಿಳೆಯರು ಮತ್ತು ಮಕ್ಕಳ ರಕ್ಷಣಾ ಕಾರ್ಯಕ್ಕೆ ಸಿಮೀತವಾಗಿರದೇ ರಾಗಿಂಗ್, ಲೈಂಗಿಕ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ ಸೇರಿದಂತೆ ನಾನಾ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಪಡೆಯ ಸದಸ್ಯರು ಮಾಡಲಿದ್ದಾರೆ.
ಎರಡು ಪಾಳಿಯಲ್ಲಿ ಕಾರ್ಯ ನಿರ್ವಹಣೆ
ಈ ಪಡೆಯಲ್ಲಿ 40 ಮಂದಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದು, ಎರಡು ಪಾಳಿಯಲ್ಲಿ ನಗರದೆಲ್ಲೆಡೆ ಗಸ್ತು ತಿರುಗುವ ಮೂಲಕ ವನಿತೆಯರಿಗೆ ಈ ಪಡೆ ಕಾವಾಲಾಗಿದೆ. ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮತ್ತು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಪಡೆ ಕಾರ್ಯ ನಿರ್ವಹಿಸಲಿದೆ. ಪಡೆಯ ಗಸ್ತಿಗೆ ಎರಡು ವಾಹನಗಳನ್ನು ನೀಡಲಾಗಿದ್ದು, ಪ್ರತಿ ವಾಹನದಲ್ಲಿ ಒಬ್ಬರು ಮಹಿಳಾ ಎಎಸ್ಐ, ಮಹಿಳಾ ಮುಖ್ಯ ಪೇದೆ ಮತ್ತು ಪೇದೆಯೊಂದಿಗೆ ಚಾಲಕರಾಗಿ ಪುರುಷ ಪೇದೆ ಕಾರ್ಯ ನಿರ್ವಹಿಸಲಿದ್ದಾರೆ.

ಶಾಲಾ ಕಾಲೇಜು ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಬಾಲ್ಯ ವಿವಾಹ ನಿಷೇಧ, ಕೌಟುಂಬಿಕ ದೌರ್ಜನ್ಯ ಕಾಯಿದೆ ಬಗ್ಗೆ ಜಾಗೃತಿ ಮೂಡಿಸುವುದು. ಬಸ್ ನಿಲ್ದಾಣ, ರೈಲು ನಿಲ್ದಾಣ, ದೇವಸ್ಥಾನ, ಗಾರ್ಮೆಂಟ್ಸ್‌ಗಳ ಬಳಿ ಗಸ್ತು ತಿರುಗುವ ಮೂಲಕ ಮಹಿಳೆಯರಿಗೆ ಪುಂಡರಿಂದ ಆಗುವ ಕಿರುಕುಳ ತಪ್ಪಿಸುವುದು. ಮಹಿಳೆಯರು ಹೆಚ್ಚಾಗಿರುವ ಜನ ನಿಬಿಡ ಪ್ರದೇಶಗಳಲ್ಲಿ ಅನುಮಾನಾಸ್ಪದವಾಗಿ ಕಂಡು ಬರುವವರ ವಶಕ್ಕೆ ಪಡೆದು ಎಚ್ಚರಿಕೆ ನೀಡಲಿದೆ.
ಜಾಗೃತಿ ಮೂಡಿಸಲು ಮುಂದಾಗಲಿರುವ ಪಡೆ
ಹಾಸ್ಟೆಲ್ ಮತ್ತು ಪಿಜಿಗಳಲ್ಲಿ ವಾಸ್ತವ್ಯವಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ಕಾನೂನು ರಕ್ಷಣೆ ಮತ್ತು ನಾನಾ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು. ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಮತ್ತು ಸ್ವರಕ್ಷಣೆ ಕುರಿತು ತಿಳುವಳಿಕೆ ಮೂಡಿಸುವುದು. ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವುದು. ಶಾಲಾ-ಕಾಲೇಜು ಮತ್ತು ಮಹಿಳೆಯರು ಕರ್ತವ್ಯ ನಿರ್ವಹಿಸುವ ಸ್ಥಳಗಳಲ್ಲಿ ಪಡೆಯ ಅಧಿಕಾರಿಗಳು ಸಭೆ ನಡೆಸಿ, ಮುಂಜಾಗ್ರತೆ ವಹಿಸುವುದು. ಸಮಸ್ಯೆಯಾದರೆ ಮಾಹಿತಿ ನೀಡುವಂತೆ ತಿಳುವಳಿಕೆ ನೀಡುವುದು ಹೀಗೆ ಹತ್ತು ಹಲವು ಕಾರ್ಯಗಳನ್ನು ಚಾಮುಂಡಿ ಮಹಿಳಾ ಸುರಕ್ಷಾ ಪಡೆ ಮಾಡಲಿದೆ.












Click it and Unblock the Notifications