Chamundi Hill: ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಅಗತ್ಯವಿಲ್ಲ: ಸಂಸದ ಪ್ರತಾಪ್ ಸಿಂಹ ಹೀಗೆ ಹೇಳಿದ್ದೇಕೆ?
ಮೈಸೂರು, ಡಿಸೆಂಬರ್, 29: ಇನ್ನು ತುಂಬಾ ದಿನಗಳಿಂದ ಮೈಸೂರು ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಬೇಕು ಎನ್ನುವ ಕೂಗುಗಳು ಎದ್ದಿದ್ದವು, ಮತ್ತೊಂದೆಡೆ ಇದಕ್ಕೆ ವಿರೋಧಗಳು ಕೂಡ ವ್ಯಕ್ತವಾಗಿದ್ದವು. ಇತ್ತೀಚೆಗಷ್ಟೇ ಚಾಮುಂಡಿ ಬೆಟ್ಟಕ್ಕೆ ರೋಪ್‌ವೇ ನಿರ್ಮಾಣ ಮಾಡಲು ನಾವು ಸಿದ್ಧರಿದ್ದೇವೆ. ಆದರೆ ಪರಿಸರವಾದಿಗಳು ಸೇರಿದಂತೆ ಯಾರೂ ಅಡ್ಡಿಪಡಿಸಬಾರರು ಅಂತಾ ಸಿಎಂ ಸಿದ್ದರಾಮಯ್ಯ ಕೇಳಿಕೊಂಡಿದ್ದರು. ಆದರೆ ಇದೀಗ ಇದಕ್ಕೆ ಸಂಸದ ಪ್ರತಾಪ್ ಸಿಂಹ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣದ ಅಗತ್ಯವಿಲ್ಲ. ನಂದಿ ಬೆಟ್ಟಕ್ಕೆ ಬೇಕಾದರೆ ರೋಪ್ ವೇ ನಿರ್ಮಾಣ ಮಾಡಿಕೊಳ್ಳಲಿ. ಈ ಹಿಂದೆಯೇ ಶಾಸಕ ಜಿ.ಟಿ.ದೇವೆಗೌಡ ಹಾಗೂ ನಾವೆಲ್ಲರೂ ಸೇರಿ ಸಭೆ ನಡೆಸಿ ಇದರ ಬಗ್ಗೆ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ಮಾಡಲು ನಮ್ಮ ವಿರೋಧ ಇದೆ. ಚಾಮುಂಡಿ ಬೆಟ್ಟ ಪ್ರೇಕ್ಷಣೀಯ ಸ್ಥಳವಲ್ಲ, ಅದು ಧಾರ್ಮಿಕ ತಾಣವಾಗಿದೆ. ಚಾಮುಂಡಿ ಬೆಟ್ಟಕ್ಕೆ ಭಕ್ತಿ ಭಾವದಿಂದ ಹೋಗಬೇಕು. ಚಾಮುಂಡಿ ಬೆಟ್ಟ ರೋಪ್ ವೇನಲ್ಲಿ ಹೋಗಿ ನೋಡುವಂತಹ ಸ್ಥಳವಲ್ಲ. ಆದ್ದರಿಂದ ರೋಪ್ ವೇ ಅನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಆಗಲಿದೆ. ಅಂದು ಮೈಸೂರು-ಕೊಡಗು ಜಿಲ್ಲೆಯ ಎಲ್ಲಾ ದೇಗುಲಗಳಲ್ಲೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ ಎಂದರು. ಮತ್ತೊಂದೆಡೆ ಬೆಂಗಳೂರು- ಮೈಸೂರು ಹೇವೇ ನಿರ್ಮಾಣ ಕ್ರೆಡಿಟ್ ವಾರ್‌ಗಳು ನಡೆಯುತ್ತಲೇ ಇವೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಅವರು, ಹೆದ್ದಾರಿ ಮಾಡಿಸಿದ್ದು ನಾನೇ. ನಿರ್ಮಾಣಕ್ಕೆ 8,500 ಕೋಟಿ ರೂಪಾಯಿ ವೆಚ್ಚ ಆಗಿದೆ. ಇದಕ್ಕೆ ರಾಜ್ಯ ಸರ್ಕಾರ ಎಂಟೂವರೆ ರೂಪಾಯಿ ಕೂಡ ನೀಡಿಲ್ಲ. ಹೈವೇ ನಿರ್ಮಿಸಿದ್ದು ಕೇಂದ್ರ ಸರ್ಕಾರ. ಹೈವೇ ಉದ್ಘಾಟನೆ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಬೇಕಾದರೆ ಹೈವೇಯಲ್ಲಿ ಓಡಾಡುವವರನ್ನು ಕೇಳಿದರೂ, ರಸ್ತೆಯನ್ನು ಯಾರು ಮಾಡಿಸಿದ್ದಾರೆ ಅಂತಾ ಹೇಳುತ್ತಾರೆ ಎಂದರು.
ಹಾಗೆಯೇ ಮೈಸೂರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತದೆ. ಇದಕ್ಕಾಗಿ ಹುಯಿಲಾಳು ಬಳಿ 26 ಹೆಕ್ಟೇರ್ ಜಾಗ ಗುರುತಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಅನುಮೋದನೆ ನೀಡಿದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಅವರು ತಿಳಿಸಿದ್ದಾರೆ.












Click it and Unblock the Notifications