ಇದು ಉಪಚುನಾವಣೆ ದಸರಾ! ಮೈಸೂರು ಹೋಟೆಲುಗಳು ಹೌಸ್ ಫುಲ್
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಏಪ್ರಿಲ್ 9ರಂದು ಇದ್ದು, ವಿವಿಧ ಪಕ್ಷಗಳ ಮುಖಂಡರು, ಮಾಧ್ಯಮ ಪ್ರತಿನಿಧಿಗಳು ಹೋಟೆಲ್ ಗಳಲ್ಲಿ ಬೀಡು ಬಿಟ್ಟಿದ್ದಾರೆ. ಇದರಿಂದ ಪ್ರವಾಸಿಗರಿಗೆ ಹೋಟೆಲ್ ಗಳು ಸಿಗುವುದೇ ಕಷ್ಟವಾಗಿದೆ
ಮೈಸೂರು, ಮಾರ್ಚ್ 26 : ಏಪ್ರಿಲ್ 9ರಂದು ನಡೆಯುವ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಗೆ ದಿನಗಣನೆಯೇನೋ ಆರಂಭವಾಗಿದೆ. ಎರಡೂ ಕಡೆ ಚುನಾವಣೆ ಕಣ ರಂಗೇರಿದ್ದು, ಪಟ್ಟಣದ ಎಲ್ಲ ಹೋಟೇಲ್ ಗಳು ಹೌಸ್ ಫುಲ್ ಆಗಿವೆ.
ಉಭಯ ಪಕ್ಷದ ನಾಯಕರು, ಮುಖಂಡರು ಹೋಟೆಲ್ ರೂಮ್ ಗಳನ್ನು 15 ದಿನಗಳ ಮುನ್ನವೇ ಬುಕ್ ಮಾಡಿದ್ದು, ಒಂದೊಂದೇ ಪಕ್ಷದ ನಾಯಕರು ಕ್ಷೇತ್ರಕ್ಕೆ ಕಾಲಿರಿಸುತ್ತಿದ್ದಾರೆ. ಉಭಯ ತಾಲೂಕಿನ ಪಕ್ಕದಲ್ಲಿರುವ ರಾಷ್ಟ್ರೀಯ ಹೆದ್ದಾರಿ 212ರ ಪಕ್ಕದಲ್ಲಿರುವ ಎಲ್ಲ ಹೋಟೆಲ್ ಗಳು ಭರ್ತಿಯಾಗಿವೆ. ಊಟಿ ಮತ್ತು ಮೈಸೂರು ರಸ್ತೆ ನಡುವಿನ ಪ್ರವಾಸಿಗರನ್ನು ನೆಚ್ಚಿಕೊಂಡಿದ್ದ ಹೋಟೆಲ್ ಗಳಿಗೆ ಇದೀಗ ಚುನಾವಣೆಯ ಲಾಭ ದೊರೆಯುತ್ತಿದೆ.[ನಂಜನಗೂಡು ಗೆಲುವಿಗೆ ಬಿಜೆಪಿ-ಕಾಂಗ್ರೆಸ್ ನಿಂದ ಜಾತಿ ಲೆಕ್ಕಾಚಾರ]

ಘಟಾನುಘಟಿಗಳೇ ಇಲ್ಲಿ ಮೊಕ್ಕಾಂ
ಬಿಜೆಪಿ ನಾಯಕರಾದ ಅರವಿಂದ ಲಿಂಬಾವಳಿ, ರಾಜ್ಯ ಕಾರ್ಯದರ್ಶಿ ರವಿಕುಮಾರ್, ರೇಣುಕಾಚಾರ್ಯ, ಎಂಎಲ್ಸಿ ಅಶ್ವತ್ಥ ಸೇರಿದಂತೆ ವಿವಿಧ ನಾಯಕರು ಮತ್ತು ಕಾರ್ಯಕರ್ತರು ಇಲ್ಲಿನ ಮಿಸ್ಟಿ ರಾಕ್, ನಿಜಗುಣ ರೆಸಾರ್ಟ್, ಗುರುಪ್ರಸಾದ್ ಹಾಗೂ ಕೆಪಿಟಿ ರೆಸಾರ್ಟ್ ಗಳಲ್ಲಿ ಬೀಡುಬಿಟ್ಟಿದ್ದಾರೆ.
ಸದ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಕಲಾಪ ಮುಗಿದ ತಕ್ಷಣ ಕಾಂಗ್ರೆಸ್ ನಾಯಕರು ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಪಟ್ಟಣದ ಯಾತ್ರಿ ನಿವಾಸ್, ಖುಷಿ ಮತ್ತು ಪ್ರವಾಸೋದ್ಯಮ ಇಲಾಖೆಯ ಜಂಗಲ್ ರೆಸಾರ್ಟ್ ನಲ್ಲಿ ತಂಗಿದ್ದಾರೆ.[ಗುಂಡ್ಲುಪೇಟೆ: ಪೊಲೀಸ್ ವಾಹನದಲ್ಲಿ ಕಾಂಗ್ರೆಸ್ ಹಣ ಹಂಚುತ್ತಿದೆ-BSY]

ಇನ್ನು ಮುಖ್ಯಮಂತ್ರಿ ತವರೂರು ಮೈಸೂರು. ಸಿದ್ಧರಾಮಯ್ಯ ಅವರು ಇಲ್ಲಿಯೇ ವಾಸ್ತವ್ಯ ಹೂಡುವುದರಿಂದ ಇಲ್ಲಿ ಅವರನ್ನು ಭೇಟಿಯಾಗಲು ಬರುವವರ ಸಂಖ್ಯೆಯೂ ಏರಿಕೆಯಾಗಲಿದೆ.

ಅಧಿಕಾರಿಗಳ ಬಿಡಾರ
ಚುನಾವಣಾ ಅಧಿಕಾರಿಗಳು, ಪೊಲೀಸರಿಗೂ ಪಟ್ಟಣದಲ್ಲೇ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ಚುನಾವಣೆ ಆಯೋಗ 23 ವಾಹನಗಳ ಮೂಲಕ ಕ್ಷೇತ್ರದಲ್ಲಿ ಗಸ್ತು ತಿರುಗುತ್ತಿದೆ. ಚುನಾವಣಾ ವೀಕ್ಷಕರಾದ ಇಂದ್ರ ವಿಕ್ರಂ ಸಿಂಗ್, ಶುಭೇಂದ್ರ, ಜಾಕೋಬ್ ಜಾಬ್ ಕೂಡ ಬಿಡಾರ ಹೂಡಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿಯ ಮುಖಂಡರು, ಕಾರ್ಯಕರ್ತರು ಪಟ್ಟಣಕ್ಕೆ ಬಂದಿರುವುದರಿಂದ ಹೋಟೆಲ್ ಗಳಿಗೆ ಭರ್ಜರಿ ವ್ಯಾಪಾರವಾ ಆಗುವುದರಲ್ಲಿ ಅನುಮಾನವೇ ಇಲ್ಲ. ಆ ಕಾರಣಕ್ಕೆ ಮೈಸೂರು -ಊಟಿ ನಡುವೆ ಪ್ರವಾಸ ಮಾಡುತ್ತಿದ್ದ ಪ್ರವಾಸಿಗರು ಚುನಾವಣೆ ಮುಗಿಯುವವರೆಗೂ ಬೇರೆ ಊರುಗಳಲ್ಲಿ ವಾಸ್ತವ್ಯ ಮಾಡುವುದು ಒಳಿತು.
ಮಾಧ್ಯಮ ಪ್ರತಿನಿಧಿಗಳು ಕೂಡ ಟೆಂಟ್
ಉಪಚುನಾವಣೆಯ ವರದಿಗಾಗಿ ಆಗಮಿಸಿರುವ ಟಿವಿ ಹಾಗೂ ಮುದ್ರಣ ಮಾಧ್ಯಮದ ಪ್ರತಿನಿಧಿಗಳು ಇಲ್ಲೇ ಟೆಂಟ್ ಹಾಕಿದ್ದಾರೆ. ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಬೆಂಗಳೂರಿನಿಂದ ವಿಶೇಷ ಪ್ರತಿನಿಧಿಗಳನ್ನೇ ಕಳುಹಿಸಿದ್ದಾರೆ. ಕಾಂಗ್ರೆಸ್ ನಾಯಕರು ಸಕ್ರಿಯ ಪ್ರಚಾರಕ್ಕೆ ಇಳಿದ ಮೇಲೆ ಇನ್ನೂ ಹೆಚ್ಚಿನ ವರದಿಗಾರರು, ಕ್ಯಾಮೆರಾಮೆನ್ ಗಳು ಬರುತ್ತಾರೆ.[ಗುಂಡ್ಲುಪೇಟೆ ಉಪಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದ ಬಿಜೆಪಿ]
ಒಟ್ಟಾರೆ ಉಪಚುನಾವಣೆ ಮತದಾನದ ದಿನ ಏಪ್ರಿಲ್ 9 ಹಾಗೂ ಏಪ್ರಿಲ್ 13ರ ಮತ ಎಣಿಕೆಯವರೆಗೂ ಉಭಯ ತಾಲೂಕುಗಳ ಹೋಟೆಲ್ ಗಳು, ಲಾಡ್ಜ್ ಗಳು ಬುಕ್ ಆಗಿವೆ. ಈ ಚುನಾವಣೆ ಯಾರಿಗೆ ಲಾಭವೋ ಯಾರಿಗೆ ನಷ್ಟವೋ ಗೊತ್ತಿಲ್ಲ. ಆದರೆ ವ್ಯಾಪಾರಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದೆ.












Click it and Unblock the Notifications