ಪಿಎಂ ಮೋದಿಗೆ ನಾಲಾಯಕ್ ಎಂದ ಖರ್ಗೆಯನ್ನು ಸೋಲಿಸಿ: ಮತದಾರರಿಗೆ ಬೊಮ್ಮಾಯಿ ಕರೆ
ಮೈಸೂರು, ಮೇ 01: ಸೋಲಿನ ಹತಾಶೆಯಿಂದ ಕಾಂಗ್ರೆಸ್ ಕೀಳು ಮಟ್ಟದ ಮಾತುಗಳನ್ನು ಆಡುತ್ತಿದೆ. ನರೇಂದ್ರ ಮೋದಿಯವರನ್ನು ನಾಲಾಯಕ್ ಎಂದವರಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗವಾಗಿ ಕರೆ ನೀಡಿದ್ದಾರೆ.
ಸೋಮವಾರ ಮೈಸೂರಿನ ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಶ್ರೀವತ್ಸ ಪರ ಪ್ರಚಾರ ನಡೆಸಿ ಮಾತನಾಡಿದ ಮುಖ್ಯಮಂತ್ರಿಗಳು ಪ್ರಧಾನಮಂತ್ರಿಗಳಿಗೆ ಪ್ರಿಯಾಂಕಾ ಖರ್ಗೆ ಅವರು ನಾಲಾಯಕ್ ಎಂದಿದ್ದಾರೆ. ಅವರನ್ನು ನೀವು ಕ್ಷಮಿಸುತ್ತಿರಾ?. ಮೋದಿ ವಿರುದ್ಧ ಕೆಟ್ಟಪದ ಆಡಿದವರಿಗೆ ತಕ್ಕ ಪಾಠ ಕಲಿಸಲು ಬಿಜೆಪಿಗೆ ಮತ ನೀಡಿ ಎಂದು ಅವರು ಮನವಿ ಮಾಡಿದರು.

ಮೈಸೂರು ಐತಿಹಾಸಿಕ, ಪಾರಂಪರಿಕ, ಜಗತ್ಪ್ರಸಿದ್ಧ ನಗರ. ಈ ನಗರದಲ್ಲಿ ಕಳೆದ ಮೂರು ದಶಕಗಳಿಂದ ಬಿಜೆಪಿಯ ಪ್ರಾಬಲ್ಯವಿದೆ. ಇಲ್ಲಿಂದ ಶಾಸಕರು, ಸಂಸದರ ಆಯ್ಕೆ ಮಾಡಿದ್ದೀರಿ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನೀವು ಸೇರಿರುವುದನ್ನು ನೋಡಿದರೆ, ಇಲ್ಲಿ ಶ್ರೀವತ್ಸ ಅವರು ಅತ್ಯಧಿಕ ಮತದಿಂದ ಆಯ್ಕೆ ಆಗುತ್ತಾರೆ ಎಂದು ಭವಿಷ್ಯ ನುಡಿದರು.
ಹತಾಶರಾದ ಕಾಂಗ್ರೆಸ್ ಜನರನ್ನು ಯಾಮಾರಿಸುತ್ತಿದೆ
ಡಬಲ್ ಇಂಜಿನ್ನ ಬಿಜೆಪಿ ಸರ್ಕಾರವು ಕಾರ್ಯಕ್ರಮಗಳ ಮೂಲಕ ಸಕಾರಾತ್ಮಕ ಮತಗಳ ಪಡೆಯುವ ಪ್ರಯತ್ನ ಮಾಡುತ್ತಿದೆ. ಆದರೆ ವಿರೋಧ ಪಕ್ಷದ ನಾಯಕರು ಕೆಳಮಟ್ಟದ ಮಾತುಗಳನ್ನಾಡುತ್ತಿದ್ದಾರೆ. ಇದೆಲ್ಲ ನೋಡಿದರೆ ಅವರು ಹತಾಶರಾಗಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಹೀಗಾಗಿಯೇ ಅವರು ನಕಾರಾತ್ಮಕವಾಗಿ ಮತಯಾಚನೆ ಮಾಡುತ್ತಿದ್ದಾರೆ.

ಕಾಂಗ್ರೆಸ್ ಹತ್ತು ಕೆ.ಜಿ ಅಕ್ಕಿ ಕೊಡುವ ಗ್ಯಾರೆಂಟಿ ಕೊಡುತ್ತಿದ್ದಾರೆ. 2013 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಿದ್ದಾಗ 10 ಕೆ.ಜಿ ಅಕ್ಕಿ ಕೊಡುತ್ತಿದ್ದೇವು. ಇವರು ಅಧಿಕಾರಕ್ಕೆ ಬಂದ ಮೇಲೆ 5 ಕೆ.ಜಿ ಗೆ ಇಳಿಸಿದರು. ಕಾಂಗ್ರೆಸ್ ಚುನಾವಣೆಗಾಗಿ ಜನರನ್ನು ಯಾಮಾರಿಸುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ಮಾಡಿದ್ದೇವೆ. ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ, ಸಾರ್ವಜನಿಕರ ಆರೋಗ್ಯಕ್ಕಾಗಿ ಆಯುಷ್ಮಾನ್ ಭಾರತ ಯೋಜನೆ, ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮನೆ ಕಟ್ಟಲು ಪ್ರಧಾನಮಂತ್ರಿ ಆವಾಸ್ ಯೋಜನೆ ಮಾಡಿದ್ದೇವೆ. ರೈತರು ಮತ್ತು ಕೂಲಿಕಾರರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ತಂದಿದ್ದೇವೆ.
ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಮೈಸೂರು ನಗರ ಅಭಿವೃದ್ಧಿ ಮಾಡಿದ್ದೇವೆ. ನರೇಂದ್ರ ಮೋದಿಯವರಿಗೆ ಮತ್ತು ಮೈಸೂರಿಗೆ ಬಹಳ ಒಲವು ಇದೆ. ಇಡೀ ಭಾರತದಲ್ಲಿ ಅವರು ಯೋಗ ದಿನಾಚರಣೆಗೆ ಆಯ್ಕೆ ಮಾಡಿದ್ದು ಮೈಸೂರು. ನರೇಂದ್ರ ಮೋದಿಯವರ ಮೈಸೂರಿನ ಮೇಲಿನ ಪ್ರೀತಿಗೆ ಶ್ರೀವತ್ಸವಗೆ ಮತ ನೀಡಬೇಕು ಎಂದರು.
ಜಿಲ್ಲೆ ಅಭಿವೃದ್ಧಿ ಬಗ್ಗೆ ವಿವರಿಸಿದ ಸಿಎಂ ಬೊಮ್ಮಾಯಿ
ಮೈಸೂರಿನ ಆಸ್ಪತ್ರೆ ಪುನರ್ ನಿರ್ಮಾಣ ಮಾಡಲು 80 ಕೋಟಿ ಕೊಟ್ಟಿದ್ದೇವೆ. ನಮ್ಮ ಬಜೆಟ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಎಲ್ಲ ವಿದ್ಯಾರ್ಥಿಗಳಿಗೆ, ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಡಿಗ್ರಿವರೆಗೂ ಉಚಿತ ಶಿಕ್ಷಣ ನೀಡುತ್ತಿದ್ದೇವೆ. ಇಲ್ಲಿನ 50 ಸಾವಿರ ಕುಟುಂಬಕ್ಕೆ ಸರ್ಕಾರದ ಯೋಜನೆಗಳ ಲಾಭ ಸಿಕ್ಕಿದೆ. ಅವರೆಲ್ಲರೂ ಬಿಜೆಪಿ ಮತ ನೀಡಲು ತೀರ್ಮಾನ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ನಾನು ಮುಖ್ಯಮಂತ್ರಿ ಆದ ಮೇಲೆ 250 ಕೋಟಿ ರೂ. ಅಧಿಕ ಅನುದಾನ ಕೊಟ್ಟಿದ್ದೇನೆ. ಮೈಸೂರು ದಸರಾಗೆ ವಿಶೇಷ ಅನುದಾನ 5 ಕೋಟಿ ಕೊಡುವ ವೇಳೆಯಲ್ಲಿ 25 ಕೋಟಿ ನೀಡಿ ಈ ಬಾರಿಯ ದಸರಾ ಆಚರಣೆ ಮಾಡಿದ್ದೇವೆ. ಮೈಸೂರು ಅಂತರಾಷ್ಟ್ರೀಯ ಯಾತ್ರಾ ಕೇಂದ್ರವಾಗಿದೆ. ಮೈಸೂರು ಸರ್ಕಿಟ್ ಮಾಡಿ ಇಲ್ಲಿ ವಿಶೇಷವಾದ ಪ್ರವಾಸೋದ್ಯಮ ಮಾಡಲಿದ್ದೇವೆ ಎಂದು ಹೇಳಿದರು.












Click it and Unblock the Notifications