4 ಬಾರಿ ಶಾಸಕರಾದವರು ಹೊಸ ಅಭ್ಯರ್ಥಿ ಗೆಲುವಿಗೆ ಪಣತೊಟ್ಟಿದ್ದಾರೆ- ರಾಮದಾಸ್ ಹೊಗಳಿದ ಅರುಣ್ ಸಿಂಗ್
ಮೈಸೂರು, ಏಪ್ರಿಲ್ 27: ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ವಿಭಜಿತ ಸ್ಥಿತಿಯಲ್ಲಿದೆ. ಅದರ ಸ್ಥಾನಗಳು ಇನ್ನಷ್ಟು ಕುಸಿಯಲಿವೆ. ಕೇಂದ್ರ-ರಾಜ್ಯಗಳ ಸಾಧನೆ, ಸಂಘಟನೆಯ ಆಧಾರದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದರು.
ಮೈಸೂರಿನ ಮಾಧ್ಯಮ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮೀಸಲಾತಿ, ಸಾಮಾಜಿಕ ನ್ಯಾಯದ ಕಡೆ ಗಮನ ಕೊಡಲಿಲ್ಲ. ಇದರಿಂದಾಗಿ ಅವರಿಗೆ ಹೇಳಲು ವಿಷಯಗಳೇ ಇಲ್ಲ. ಈ ಬಾರಿ ಮೈಸೂರು ಭಾಗದಲ್ಲಿ ಬಿಜೆಪಿ ಪಕ್ಷವು ಅತ್ಯಧಿಕ ಶಾಸಕ ಸ್ಥಾನವನ್ನು ಗೆಲ್ಲಲಿದೆ. ಕರ್ನಾಟಕ ಮತ್ತು ದೇಶದ ಹಿತದಿಂದ ಮತ್ತೆ ಡಬಲ್ ಎಂಜಿನ್ ಸರಕಾರವು ಕರ್ನಾಟಕದಲ್ಲಿ ರಚನೆ ಆಗಬೇಕು. ಕರ್ನಾಟಕದ ವಿಕಾಸ ಮತ್ತು ದೇಶದ ಅಭಿವೃದ್ಧಿ ಪರಸ್ಪರ ಜೋಡಿಸಿಕೊಂಡಿವೆ ಎಂದರು.

ದೇಶ-ರಾಜ್ಯದಲ್ಲಿ ಪ್ರಧಾನಿ ಮೋದಿಜಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಡಿಮೆ ಅವಧಿಯಲ್ಲಿ ದಾಖಲೆ ಪ್ರಮಾಣದ ಕೆಲಸಗಳು ಆಗಿವೆ. ಬಿಜೆಪಿ ಕಾರ್ಯಕರ್ತ ಮತ್ತು ಸಂಘಟನೆ ಆಧರಿತ ಪಕ್ಷ. 4 ಬಾರಿ ಶಾಸಕರಾದ ರಾಮದಾಸ್ ಅವರು ಹೊಸಬರಿಗೆ ಅವಕಾಶ ನೀಡಿದ್ದು, ಹೆಚ್ಚು ಮತಗಳ ಅಂತರದಿಂದ ಹೊಸ ಅಭ್ಯರ್ಥಿಯನ್ನು ಗೆಲ್ಲಿಸಲು ಪಣ ತೊಟ್ಟಿದ್ದಾರೆ. ಇಂಥ ದೇವದುರ್ಲಭ ಕಾರ್ಯಕರ್ತರನ್ನು ನಾವು ಬಿಜೆಪಿಯಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ತಿಳಿಸಿದರು.
2 ಲಕ್ಷ ರೈತರಿಗೆ ಇಲ್ಲಿ ಭ್ರಷ್ಟಾಚಾರ ರಹಿತವಾಗಿ ಕಿಸಾನ್ ಸಮ್ಮಾನ್ ನಿಧಿ ಲಭಿಸುತ್ತಿದೆ. ಮೋದಿಜಿ ನೇತೃತ್ವದಲ್ಲಿ ಬ್ಯಾಂಕ್ ಖಾತೆ ತೆರೆದು ಇದನ್ನು ಸಾಧ್ಯ ಮಾಡಲಾಗಿದೆ. ಸುಮಾರು 4 ಲಕ್ಷ ಶೌಚಾಲಯ ನಿರ್ಮಾಣ, ಮನೆಮನೆಗೆ ನಳ್ಳಿ ನೀರು, ಬೆಂಗಳೂರು- ಮೈಸೂರು ಎಕ್ಸ್‍ಪ್ರೆಸ್ ವೇ ನಿರ್ಮಾಣ, ರಿಂಗ್ ರೋಡ್ ಸೇರಿ ಅನೇಕ ಅಭಿವೃದ್ಧಿ ಕಾರ್ಯಕ್ರಮ ನಡೆದಿವೆ. ಸೆಮಿಕಂಡಕ್ಟರ್ ಕಾರ್ಖಾನೆ ಮೂಲಕ 10 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸಿಗಲಿದೆ ಎಂದು ವಿವರಿಸಿದರು.

ಕರ್ನಾಟಕವು ಎಫ್‍ಡಿಐಯಲ್ಲಿ ಮುಂಚೂಣಿ ಸ್ಥಾನ ಪಡೆದಿದೆ. ಸುಲಭದಲ್ಲಿ ವ್ಯವಹಾರ ವಿಚಾರದಲ್ಲೂ ಕರ್ನಾಟಕವು ಮೊದಲ ಸ್ಥಾನದಲ್ಲಿದೆ. ಇನೊವೇಶನ್ ಇಂಡೆಕ್ಸ್‍ನಲ್ಲೂ ಅದು ಮೊದಲ ಸ್ಥಾನ ಪಡೆದಿದೆ. ಮೊದಲ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲು ಇಲ್ಲಿಂದ ಆರಂಭವಾಗಿದೆ. ವ್ಯಾಪಾರ, ವ್ಯವಹಾರ, ಅಭಿವೃದ್ಧಿ ವಿಚಾರದಲ್ಲಿ ಗಣನೀಯ ಸಾಧನೆ ಬಿಜೆಪಿ ಸರಕಾರದ್ದು, ಆದರೆ, ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಋಣಾತ್ಮಕ ಪರಿಸ್ಥಿತಿ ಇತ್ತು ಎಂದು ಹೇಳಿದರು.
ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಪಿಎಫ್ಐ ಜಾಲ ವಿಸ್ತ್ರತವಾಗಿತ್ತು. ದಂಗೆ, ಹಿಂದೂ ಹತ್ಯೆ ನಿರಂತರವಾಗಿತ್ತು. ಸಿದ್ದರಾಮಯ್ಯ ಅವಧಿಯಲ್ಲಿ ಇಂತಹ ಸ್ಥಿತಿ ಇತ್ತು. ನಮ್ಮ ಸರಕಾರ ಬಂದಾಗ ಅಭಿವೃದ್ಧಿ ಕಾರ್ಯ ವೇಗ ಪಡೆಯಿತು. ಯಡಿಯೂರಪ್ಪ ಅವರ ಸರಕಾರವು ಗೋಹತ್ಯೆ ನಿಷೇಧಿಸಿತು. ಕೇಂದ್ರ ಸರಕಾರವು ಪಿಎಫ್ಐ ನಿಷೇಧಿಸಿತು. ಕಾಂಗ್ರೆಸ್ ತುಷ್ಟೀಕರಣ ನೀತಿ ತನ್ನದಾಗಿಸಿಕೊಂಡಿತ್ತು. ಆದರೆ, ಬಿಜೆಪಿ ಎಲ್ಲರ ಅಭಿವೃದ್ಧಿಗೆ ಗಮನ ಕೊಟ್ಟಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷವು ಇಷ್ಟು ವರ್ಷ ಆಡಳಿತದಲ್ಲಿದ್ದರೂ ಸಾಮಾಜಿಕ ನ್ಯಾಯ ನೀಡಲು ಗಮನ ಕೊಡಲಿಲ್ಲ. ಬಿಜೆಪಿ ಸರಕಾರವು ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸ್ಸಿ, ಎಸ್ಟಿ ಅವಮಾನ ಮಾಡುತ್ತಿತ್ತು. ಆದರೆ, ನಮ್ಮ ಸರ್ಕಾರದ್ದು, ಕೇವಲ ಘೋಷಣೆಯಲ್ಲ. ಅದು ಅನುಷ್ಠಾನಕ್ಕೆ ಬಂದಿದೆ ಎಂದು ತಿಳಿಸಿದರು.
ಮುಸ್ಲಿಮರಿಗೆ ಅಸಾಂವಿಧಾನಿಕ ರೀತಿಯಲ್ಲಿ ಮೀಸಲಾತಿ ಕೊಡಲಾಗಿತ್ತು. ಅದನ್ನು ರದ್ದು ಮಾಡಿ, ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ತಲಾ ಶೇ 2ರಷ್ಟು ಮೀಸಲಾತಿ ಕೊಡಲಾಗಿದೆ. ಒಳ ಮೀಸಲಾತಿ ಪ್ರಕಟಿಸಿದ್ದೇವೆ. ಕಾಂಗ್ರೆಸ್ ಮುಸ್ಲಿಮರಿಗೆ ಮತ್ತೆ ಮೀಸಲಾತಿ ಕೊಡುವ ಮಾತನಾಡುತ್ತಿದೆ. ಯಾರ ಮೀಸಲಾತಿ ರದ್ದು ಮಾಡಿ ನೀವು ಮುಸ್ಲಿಮರಿಗೆ ಮೀಸಲಾತಿ ಕೊಡುತ್ತೀರಿ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಶಾಸಕ ರಾಮದಾಸ್ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷ ಗಿರಿಧರ್ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications