ಪ್ರತಾಪ್ ಸಿಂಹ ಬಂಧನ ವಿರೋಧಿಸಿ ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆ
ಮೈಸೂರು, ಡಿಸೆಂಬರ್ 04: ಹುಣಸೂರು ಹನುಮ ಜಯಂತಿ ಗಲಭೆ ವೇಳೆ ಸಂಸದ ಪ್ರತಾಪ್ ಸಿಂಹ ಬಂಧನವನ್ನು ಖಂಡಸಿ ಬಿಜೆಪಿ ಕಾರ್ಯಕರ್ತರು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅಣುಕು ತಿಥಿಮಾಡಿವ ಮೂಲಕ ಪ್ರತಿಭಟನೆ ನಡೆಸಿದರು.
ಮೈಸೂರಿನ ಗಾಂಧಿವೃತ್ತದ ಬಳಿ ಸಂಸದೆ ಶೋಭಾ ಕರಂದ್ಲಾಜೆ, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್, ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಧರಣಿನಿರತರು ಸಿಎಂ ಸಿದ್ದರಾಮಯ್ಯನ ಅಣುಕು ತಿಥಿಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಜತೆಗೆ ಸಿಎಂ ಸಿದ್ದರಾಮಯ್ಯ ಭಾವಚಿತ್ರಕ್ಕೆ ಚಪ್ಪಲಿ ಏಟು ನೀಡಿ ವಿವಿಧ ಘೋಷಣೆಗಳನ್ನು ಕೂಗಿ ನೂರಾರು ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯ ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಹನುಮ ಜಯಂತಿಗೆ ಹೊರಡುತ್ತಿದ್ದ ಪ್ರತಾಪ್ ಸಿಂಹರನ್ನು ತಡೆಯುವಂತಹ ಕೆಲಸವನ್ನು ಏಕೆ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ನಿನ್ನೆ ಚಿಕ್ಕಮಗಳೂರಿನಲ್ಲಿಯೂ ಕೂಡಾ ಹಿಂದುಗಳ ಮೇಲೆ ದೌರ್ಜನ್ಯವೆಸಗಿದ್ದಾರೆ. ಅಲ್ಲದೆ ಪ್ರತಾಪ್ ಸಿಂಹರನ್ನು ಬಂಧಿಸಿ ಅವರನ್ನು ತಡರಾತ್ರಿಯವರೆಗೂ ಸುತ್ತಾಡಿಸಿ ಚುನಾಯಿತ ಪ್ರತಿನಿಧಿಯನ್ನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತುಳಿಯುವ ಕೆಲಸ ಮಾಡ್ತಿದ್ದಾರೆ. ಹಿಂದುಗಳಿಗೊಂದು ನ್ಯಾಯ, ಮುಸಲ್ಮಾನರಿಗೊಂದು ನ್ಯಾಯ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಾಪ್ ಸಿಂಹ ಸುದ್ದಿಗೋಷ್ಠಿ
ಹನುಮ ಜಯಂತಿ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂದು ಬೆಳಿಗ್ಗೆ(ಡಿ.4) ಪತ್ರಿಕಾಗೋಷ್ಠಿ ನಡೆಸಿದ ಸಂಸದ ಪ್ರತಾಪ್ ಸಿಂಹ, "ಹುಣಸೂರಿನಲ್ಲಿ ನಿನ್ನೆ ನಡೆದ ಘಟನೆಗೆ ಜಿಲ್ಲಾಡಳಿತವೇ ನೇರ ಹೊಣೆ. ಮೈಸೂರು ಎಸ್ಪಿ ರವಿ ಡಿ ಚನ್ನಣ್ಣನವರ್ ಸರ್ಕಾರದ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಗೂಂಡಾ ಸಂಸ್ಕೃತಿ ನನ್ನದಲ್ಲ, ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್, ಅವರಪ್ಪ ಗುಂಡೂರಾವ್ ಅವರು ಗೂಂಡಾ ರಾಜಕೀಯ ಮಾಡಿದ್ದಾರೆ ಎಂದು ಕಿಡಿಕಾರಿದರು.

"ನಿನ್ನೆ ಪೊಲೀಸರು ನನ್ನ ಧಾರ್ಮಿಕ ಭಾವನೆಗೆ ಧಕ್ಕೆ ಮಾಡಿದ್ರು. ಹೀಗಾಗಿ ನಾನೇ ನನ್ನ ಕಾರಿನಲ್ಲಿ ತೆರಳಬೇಕಾಯ್ತು. ಮೈಸೂರು ಎಸ್ಪಿ ರವಿ ಡಿ ಚನ್ನಣ್ಣನವರ್ ಸರ್ಕಾರದ ಆಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಹನುಮ ಜಯಂತಿ ಆಚರಣೆ ವಿಚಾರ ಕಾನೂನು ಹೋರಾಟ ಮಾಡ್ತೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ಅವರಿಗೂ ಈ ಘಟನೆಗೂ ಸಂಬಂಧ ಇಲ್ಲ" ಎಂದರು.












Click it and Unblock the Notifications