Bengaluru-Mysuru expressway: ವಾಹನಗಳಿಗೆ ವೇಗ ಮಿತಿ ಜಾರಿ: ವಿವರವನ್ನು ಇಲ್ಲಿ ತಿಳಿಯಿರಿ
ಮೈಸೂರು, ಮಾರ್ಚ್, 29: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಆದಾಗಿನಿಂದ ಇಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಲೇ ಇವೆ. ಮತ್ತೊಂದೆಡೆ ಇತ್ತೀಚೆಗಷ್ಟೇ ಮಳೆ ಸುರಿದ ಕಾರಣ ಕೆಲವೆಡೆ ಹೆದ್ದಾರಿ ಚರಂಡಿಯಂತೆ ಆಗಿತ್ತು. ಇದರಿಂದ ಪ್ರತಿಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ಧ ಟೀಕಾಪ್ರಹಾರವನ್ನೇ ನಡೆಸಿದ್ದವು. ಇದೀಗ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ವೇಗ ಮಿತಿಯನ್ನು ಜಾರಿ ಮಾಡಿದ್ದಾರೆ. ಹಾಗಾರೆ ಈ ನಿಯಮದ ಬಗ್ಗೆ ಇರುವ ಅಂಶಗಳನ್ನು ಇಲ್ಲಿ ಗಮನಿಸಿ.
ಬೆಂಗಳೂರು - ಮೈಸೂರು ಹೆದ್ದಾರಿಗೆ ವೇಗ ಮಿತಿಯನ್ನು ಜಾರಿ ಮಾಡಲಾಗಿದೆ. ಇಷ್ಟು ದಿನ ವಾಹನ ಸವಾರರು ಈ ನಿಯಮವನ್ನು ಉಲ್ಲಂಘಿಸಿರುವುದು ಮತ್ತು ಲೇನ್‌ಗಳನ್ನು ತಮಗಿಷ್ಟ ಬಂದಂತೆ ಬದಲಿಸುತ್ತಿದ್ದು, ಇದು ಅಪಘಾತ ಸಂಭವಿಸುವುದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಮೂಲಗಳು ಹೇಳುತ್ತಿವೆ.

ಯಾವ ಪಥದಲ್ಲಿ ಎಷ್ಟು ವೇಗ?
ಏಕಮುಖ ಸಂಚಾರಕ್ಕೆ 3 ಪಥದ ರಸ್ತೆಯಲ್ಲಿ ಪ್ರತಿ ಪಥಕ್ಕೂ ಒಂದೊಂದು ವೇಗ ಮಿತಿಯನ್ನು ಜಾರಿ ಮಾಡಲಾಗಿದೆ. ಎಡಭಾಗದ ರಸ್ತೆಗೆ ಪ್ರತಿ ಗಂಟೆಗೆ 60 ಕಿಲೋ ಮೀಟರ್, ಮಧ್ಯದ ಪಥಕ್ಕೆ 80 ಕಿಲೋ ಮೀಟರ್, ಬಲ ಭಾಗದ ರಸ್ತೆಗೆ 100 ಕಿಲೋ ಮೀಟರ್ ವೇಗ ಮಿತಿಯನ್ನು ಜಾರಿಗೊಳಿಸಲಾಗಿದೆ.
ಆದರೆ ಪ್ರತಿ ಪಥಕ್ಕೆ 20 ಕಿ.ಮೀ. ಹೆಚ್ಚುವರಿಯಾಗಿ ವೇಗ ಮಿತಿ ಮಾಡಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ತಪ್ಪಾಗಿ ಸೂಚನಾ ಫಲಕಗಳನ್ನು ಅಳವಡಿಸಿದೆ. ಇನ್ನೆರಡು ದಿನಗಳಲ್ಲಿಗರಿಷ್ಠ ವೇಗ ಮಿತಿಯನ್ನು 100 ಕಿಲೋ ಮೀಟರ್‌ಗಳಿಗೆ ನಿಗದಿಪಡಿಸಿ ಸೂಚನಾ ಫಲಕಗಳನ್ನು ಅಳವಡಿಕೆ ಮಾಡಲಿದೆ.

ಅಪಘಾತ ಸಂಭವಿಸಲು ಕಾರಣ ಏನು?
ಅತೀ ನಿಧಾನಗತಿಯ ವಾಹನಗಳು, ಟ್ರಕ್‌ಗಳು ಕಡ್ಡಾಯವಾಗಿ 60 ಕಿಲೋ ಮೀಟರ್ ವೇಗದೊಳಗೆ ಎಡಭಾಗದಲ್ಲೇ ಸಂಚಾರ ಮಾಡಬೇಕು. ಓವರ್ ಟೇಕ್ ಮಾಡುವವರು ಬಲಭಾಗಕ್ಕೆ ಹಾಗೂ ವೇಗದ ವಾಹನಗಳು ಮಧ್ಯದ ಲೇನ್‌ನಲ್ಲಿ 80 ಕಿ.ಮೀ. ವೇಗದೊಳಗೆ ಸಂಚಾರ ಮಾಡಬೇಕು. ಆದರೆ, ಈ ಎಲ್ಲ ನಿಯಮಗಳು ಕೂಡ ಉಲ್ಲಂಘನೆ ಆಗುತ್ತಲೇ ಇವೆ. ಲಾರಿಗಳು ಕೂಡ ಬಲ ಭಾಗದಲ್ಲೇ ಸಂಚರಿಸುತ್ತಿದ್ದು, ಎಡ ಭಾಗದಿಂದಲೂ ಓವರ್ ಟೇಕ್ ಮಾಡುತ್ತಿರುತ್ತಾರೆ. ಇದೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ.
ಹಳೆ ಟೈರ್‌ಗಳು ಬಿಸಿಲಿನ ತಾಪಕ್ಕೆ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತಿದ್ದು, ಇದು ಟೈರ್‌ಗಳು ಬ್ಲಾಸ್ಟ್ ಆಗುವುದಕ್ಕೆ ಕಾರಣವಾಗಿದೆ. ಇನ್ನು ಕಡಿಮೆ ದರದಲ್ಲಿ ಖರೀದಿಸಿದ ಕಾರುಗಳು ವೇಗ ಮಿತಿ ಮೀರಿ ಗಂಟೆಗೆ 120 ಕಿಲೋ ಮೀಟರ್‌ವರೆಗೂ ಸಂಚರಿಸುತ್ತಿರುತ್ತವೆ. ಅಲ್ಲದೇ ಎಕ್ಸ್‌ಪ್ರೆಸ್ ವೇನಲ್ಲಿ ಎಕ್ಸಿಟ್ ಪಾಯಿಂಟ್‌ಗಳಿಂದ ಸ್ವಲ್ಪ ದೂರ ಸಂಚರಿಸುವ ವಾಹನಗಳು ಮತ್ತೆ ಒನ್‌ವೇ ರಸ್ತೆಯಲ್ಲಿ ಯೂ-ಟರ್ನ್‌ನಲ್ಲಿ ಸಂಚರಿಸುತ್ತಿದ್ದು, ಇದು ಅಪಘಾತಗಳಿಗೆ ಮತ್ತೊಂದು ಕಾರಣ ಅಂತಲೇ ಹೇಳಬಹುದಾಗಿದೆ.
ಹೆದ್ದಾರಿಯಲ್ಲಿ ಯಾವುದೇ ಪ್ರಾಣಿಗಳು ಬಾರದಂತೆ ಫೆನ್ಸಿಂಗ್ ಅಳವಡಿಕೆ ಮಾಡಲಾಗಿದೆ. ಆದರೂ ಕೂಡ ಇತ್ತೀಚೆಗಷ್ಟೇ ರಾಮನಗರ ಬೈಪಾಸ್ ಬಳಿ ಫೆನ್ಸಿಂಗ್ ಹಾರಿ ಚಿರತೆಯೊಂದು ವಾಹನಕ್ಕೆ ಡಿಕ್ಕಿಯಾಗಿ ಸಾವನ್ನಪ್ಪಿತ್ತು. ಹೀಗೆ ಸಮಸ್ಯೆಗಳು ಸಂಭವಿಸುತ್ತಲೇ ಇವೆ.
ಇನ್ನು ಸಂಚಾರಿ ನಿಯಮಗಳ ಉಲ್ಲಂಘನೆಗೆ ದಂಡ ವಸೂಲಿ, ಶಿಸ್ತುಕ್ರಮ ಕೈಗೊಳ್ಳುವ ಕೆಲಸವಂತೂ ಈಗ ನಡೆಯುತ್ತಿಲ್ಲ. ಮುಂದಿನ ದಿನಗಳಲ್ಲಿ ಹೆದ್ದಾರಿಯುದ್ದಕ್ಕೂ ಪ್ರತಿ ಕಿಲೋ ಮೀಟರ್‌ಗೆ ಒಂದರಂತೆ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಇವುಗಳಿಂದ ಸಂಚಾರ ನಿಯಮ ಉಲ್ಲಂಘನೆಯೂ ಕಡಿಮೆ ಆದಂತಾಗುತ್ತದೆ. ಅಪಘಾತ ಪ್ರಕರಣಗಳ ಸಂಖ್ಯೆಯೂ ಕಡಿಮೆ ಆಗಲಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕ ಶ್ರೀಧರ್ ಪ್ರತಿಕ್ರಿಯೆ ನೀಡಿದ್ದು, ಪ್ರತಿ ಲೇನ್‌ಗೂ ವೇಗದ ಮಿತಿಯಿದೆ. ಇಡೀ ಹೆದ್ದಾರಿಯನ್ನೇ 100 ಕಿಲೋ ಮೀಟರ್ ವೇಗ ಮಿತಿಗೆ ವಿನ್ಯಾಸ ಮಾಡಲಾಗಿದೆ. ಎಐ ಕ್ಯಾಮೆರಾ ಅಳವಡಿಕೆ ಬಳಿಕ ಅಪಘಾತಗಳ ಪ್ರಮಾಣ ಕಡಿಮೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಪ್ರಯಾಣ ಮಾಡಲು ಉತ್ತಮವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ವಾಹನ ಸವಾರರು ತಮಗಿಷ್ಟಬಂದಂತೆ ವಾಹನಗಳನ್ನು ಚಲಾಯಿಸುತ್ತಿರುವುದೇ ಅಪಘಾತಗಳ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದೀಗ ಹೆದ್ದಾರಿ ಸಚಿವಾಲಯವು ವೇಗ ಮಿತಿಯನ್ನು ಜಾರಿ ಮಾಡಿದ್ದು, ಇದು ಅಪಘಾತಗಳ ಪ್ರಕರಣಗಳನ್ನು ತಗ್ಗಿಸಲಿದೆ ಎನ್ನಬಹುದಾಗಿದೆ.












Click it and Unblock the Notifications