ನಾಗರಹೊಳೆ ಸಫಾರಿಗೆ ಬುಕಿಂಗ್ ಮಾಡುವ ಮುನ್ನ ಎಚ್ಚರ ವಹಿಸಿ: ಯಾಕೆ ಗೊತ್ತಾ?
ಮೈಸೂರು, ಜೂನ್ 16: ಈಗ ಆನ್ ಲೈನ್ ಮೋಸ, ವಂಚನೆಗಳು ಹೆಚ್ಚಾಗುತ್ತಿದ್ದು, ಅಸಲಿ, ನಕಲಿ ಯಾವುದು ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟವಾಗಿ ಪರಿಣಮಿಸಿದೆ. ಈ ನಡುವೆ ಆನ್ ಲೈನ್ ವಂಚಕರು ಯಾವ ಕ್ಷೇತ್ರವನ್ನೂ ಬಿಡದೆ ಆವರಿಸಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಸದ್ಯ ವಂಚಕರ ಕಾಟ ಅರಣ್ಯ ಇಲಾಖೆಗೆ ತಟ್ಟಿದ್ದು, ನಾಗರಹೊಳೆ ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತಯಾರಿಸಿ ಹಣ ದೋಚುತ್ತಿರುವುದು ಬೆಳಕಿಗೆ ಬಂದಿದೆ.
ಈಗಾಗಲೇ ಆನ್ ಲೈನ್ ನಲ್ಲಿ ಹಲವರು ಹಲವು ರೀತಿಯಲ್ಲಿ ವಂಚನೆಗೊಳಗಾಗಿದ್ದಾರೆ. ಆದರೆ ಅರಣ್ಯ ಇಲಾಖೆಗೆ ವಂಚಿಸಿ ಪ್ರವಾಸಿಗರ ಹಣ ದೋಚಿದ ಪ್ರಕರಣ ಬೆಳಕಿಗೆ ಬಂದಿದ್ದು, ಹೀಗೆ ಆದರೆ ಹೇಗಪ್ಪಾ? ಎಂದು ಜನ ತಲೆಚಚ್ಚಿಕೊಳ್ಳುವಂತಾಗಿದೆ. ಸದ್ಯ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿರುವುದರಿಂದ ಮುಂದೆ ಆಗಬಹುದಾಗ ವಂಚನೆಗೆ ಕಡಿವಾಣ ಬಿದ್ದಂತಾಗಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡುತ್ತಾ ಹೋದರೆ ವಂಚಕರ ವಂಚನೆ ಬಯಲಾಗುತ್ತಾ ಹೋಗುತ್ತದೆ.

ಹಾಗೆನೋಡಿದರೆ ನಾಗರಹೊಳೆ ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ನಕಲಿ ವೆಬ್ ಸೈಟ್ ನ್ನು ಕಳೆದ ಜನವರಿಯಲ್ಲಿಯೇ ವಂಚಕರು ತೆರೆದಿದ್ದರಾದರೂ ಅದು ಬೆಳಕಿಗೆ ಬರಲು ಆರು ತಿಂಗಳೇ ಬೇಕಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿಯೇ ಇರಲಿಲ್ಲ. ಇದೀಗ ಬೆಳಕಿಗೆ ಬರುತ್ತಿದ್ದಂತೆಯೇ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಪ್ರವಾಸಿಗರು ಆನ್ ಲೈನ್ ನಲ್ಲಿ ಬುಕಿಂಗ್ ಮಾಡುವ ಮುನ್ನ ಇಲಾಖೆಯ ಅಧಿಕೃತ ವೆಬ್ ಸೈಟಾ ಎಂಬುದನ್ನು ಖಾತರಿ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿದೆ.
ನಕಲಿ ಬುಕಿಂಗ್ ಮೂಲಕ ವಂಚನೆ
ಈಗಾಗಲೇ ನಾಗರಹೊಳೆಯ ಕಾಕನಕೋಟೆ, ವೀರನಗೊಸಳ್ಳಿ ಮತ್ತು ನಾಣಚ್ಚಿ ಕೇಂದ್ರಗಳ ಮೂಲಕ ಸಫಾರಿಗೆ ತೆರಳಲು ಪ್ರವಾಸಿಗರಿಗೆ ಆನ್ಲೈನ್ ಬುಕಿಂಗ್ ವ್ಯವಸ್ಥೆ ಇದೆ. ಈ ಹಿಂದೆ ಜನವರಿಯಲ್ಲಿ ನಕಲಿ ವೆಬ್ ಸೈಟ್ ಮೂಲಕ ಇಲ್ಲಿಗೆ ಬುಕಿಂಗ್ ಮಾಡಿಕೊಂಡು ಪ್ರವಾಸಿಗರಿಗೆ ಸಾವಿರಾರು ರೂಪಾಯಿ ವಂಚನೆ ಮಾಡಲಾಗಿತ್ತು. ಬುಕಿಂಗ್ ಮಾಡಿದ ಪ್ರವಾಸಿಗರು ಸಫಾರಿ ಕೇಂದ್ರಕ್ಕೆ ಬಂದಾಗ ನಕಲಿ ಬುಕಿಂಗ್ ವಂಚನೆ ಬೆಳಕಿಗೆ ಬಂದಿತ್ತು. ಅಲ್ಲದೆ ಈ ವಂಚಕರು ಸಕ್ರಿಯರಾಗಿರುವುದು ಗಮನಕ್ಕೆ ಬಂದಿತ್ತು.
ವಿಷಯ ಗೊತ್ತಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕೊಡಗು ಜಿಲ್ಲಾ ಪೋಲೀಸ್ ಅಧಿಕಾರಿಯವರಿಗೆ ಜನವರಿ ತಿಂಗಳಿನಲ್ಲೇ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಕೋರಿತ್ತು. ಆಗ ನಕಲಿ ವೆಬ್ ಸೈಟ್ ಗಳು ಸ್ಥಗಿತಗೊಂಡಿದ್ದವು. ಇದೀಗ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದಂತೆಯೇ ಮತ್ತೆ ವಂಚಕರು ಬಾಲ ಬಿಚ್ಚಿದ್ದು, ನಕಲಿ ವೆಬ್ ಸೈಟ್ ಗಳು ಸಕ್ರಿಯವಾಗಿರುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿರುವುದಾಗಿ ನಾಗರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷ ಕುಮಾರ್ ಚಿಕ್ಕನರಗುಂದ ಮಾಹಿತಿ ನೀಡಿದ್ದಾರೆ.

ಅಧಿಕೃತ ವೆಬ್ ಸೈಟ್‌ನಲ್ಲೇ ಬುಕಿಂಗ್ ಮಾಡಿ
ಈಗ ನಾಗರಹೊಳೆ ಮಾತ್ರವಲ್ಲದೆ, ಬಂಡೀಪುರ, ವೈನಾಡು, ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್, ಕಾಜೀರಂಗ ಅಭಯಾರಣ್ಯ ಈ ರೀತಿ ದೇಶದ ಎಲ್ಲಾ ಅರಣ್ಯಗಳ ನಕಲಿ ವೆಬ್ ಸೈಟ್ ಮಾಡಿಕೊಂಡು ಪ್ರವಾಸಿಗರನ್ನು ವಂಚಿಸುವುದೇ ಅಲ್ಲದೆ ಅವರ ಪ್ರವಾಸ ಯೋಜನೆ, ಅಮೂಲ್ಯ ಸಮಯವನ್ನೂ ದುಷ್ಕರ್ಮಿಗಳು ಹಾಳು ಮಾಡುತಿದ್ದು, ಈ ಸಂಬಂಧ ಅರಣ್ಯ ಇಲಾಖೆ ಮತ್ತೆ ಪೋಲೀಸ್ ಇಲಾಖೆಗೆ ಪತ್ರ ಬರೆದು ವಂಚಕರ ವಿರುದ್ಧ ಕ್ರಮಕ್ಕೆ ಮನವಿ ಮಾಡಿರುವುದಾಗಿ ಅವರು ಹೇಳಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಚಿತ್ರ, ಆನೆ, ಹುಲಿ ಮತ್ತು ಇತರ ಪ್ರಾಣಿಗಳ ಚಿತ್ರ ಇರುವ ನಕಲಿ ವೆಬ್ ಸೈಟ್ ನಲ್ಲಿ ರಿಸರ್ವೇಶನ್ (ಕಾಯ್ದಿರಿಸುವಿಕೆ) ಮಾಡಿಕೊಳ್ಳಲಾಗುತ್ತಿತ್ತು. ರಿಸರ್ವೇಶನ್ಆಗಿರುವ ಕುರಿತು ಮೊಬೈಲ್ ಗೆ ಸಂದೇಶ ಬರುವಂತೆಯೂ ವಂಚಕರು ಮಾಡಿಕೊಂಡಿದ್ದಾರೆ. ನಾಗರಹೊಳೆಯ ಅಧಿಕೃತ ವೆಬ್ ಸೈಟ್ ನಾಗರಹೊಳೆ ಟೈಗರ್ ರಿಸರ್ವ್ ಮಾತ್ರ ಆಗಿದ್ದು (https://www.nagaraholetigerreserve.com/) ಇತರ ಯಾವುದೇ ವೆಬ್ ಸೈಟ್ ಗಳಲ್ಲಿ ರಿಸರ್ವೇಷನ್ ಮಾಡಿಸದಂತೆ ಹರ್ಷ ಕುಮಾರ್ ಪ್ರವಾಸಿಗರಿಗೆ ಗಮನಕ್ಕೆ ತಂದಿದ್ದಾರೆ.
ನಕಲಿ ವೆಬ್ ಸೈಟ್ ನಲ್ಲಿ ನೀಡಿರುವ ಸಂಖ್ಯೆಗೆ ಕರೆ ಮಾಡಿದರೆ ಅಲ್ಲಿ ಬರೀ ಹಿಂದಿಯಲ್ಲಿ ಮಾತಾಡುತ್ತಿದ್ದಾರೆ. ಇದರಿಂದಲೇ ವಂಚಕರೆಂಬುದು ಸ್ಪಷ್ಟವಾಗುತಿದ್ದು ಅಧಿಕೃತ ವೆಬ್ ಸೈಟ್ ನಲ್ಲಿ ನೀಡಿರುವ ಮೊಬೈಲ್ ನಲ್ಲಿ ಕನ್ನಡದಲ್ಲಿ ಮಾತಾಡಿ ನಂತರ ಬುಕಿಂಗ್ ಖಚಿತಪಡಿಸಿಕೊಳ್ಳಿ ಎಂದು ಇಲಾಖೆ ಎಚ್ಚರಿಸಿದೆ. ಇನ್ನಾದರೂ ಸಫಾರಿಗೆ ಟಿಕೆಟ್ ಮಾಡುವ ಪ್ರವಾಸಿಗರು ಎಚ್ಚರಿಕೆಯ ಹೆಜ್ಜೆಯಿಡುವುದು ಬಹು ಮುಖ್ಯವಾಗಿದೆ.












Click it and Unblock the Notifications