ಮೈಸೂರು ಉದಯಗಿರಿ ಗಲಾಟೆ ಕೇಸ್: ಆರೋಪಿಯ ಜಾಮೀನು ಭವಿಷ್ಯ ಇಂದು ನಿರ್ಧಾರ
ಮೈಸೂರು, ಫೆಬ್ರವರಿ 14: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಉದಯಗಿರಿಯಲ್ಲಿ ನಡೆದ ಘಟನೆಗೆ ಕಾರಣದ ಆರೋಪದ ಮೇರೆಗೆ ಬಂಧಿತನಾಗಿರುವ ವ್ಯಕ್ತಿಯ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ. ಆರೋಪಿಯ ನಿಜವಾದ ಹೆಸರು ಸುರೇಶ್ ಅಲ್ಲ ಸತೀಶ್ ಅಲಿಯಾಸ್ ಪಾಂಡುರಂಗ ಎಂದು ತಿಳಿದು ಬಂದಿದೆ.
ಈಗಾಗಲೇ ಸತೀಶ್ ಪರ ಜಾಮೀನು ಕೋರಿ ಮೈಸೂರಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ನ್ಯಾಯಾಲಯ ಇಂದು ನಡೆಸಲಿದೆ. ಪ್ರಕರಣದಲ್ಲಿ ಬಂಧಿತನಾಗಿರುವ ಸತೀಶ್ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಅವರ ಪರ ವಕೀಲರು, ಮೈಸೂರಿನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಧೀಶರು ನಡೆಸುವ ವೇಳೆ ಸರ್ಕಾರಿ ವಕೀಲರು, ಜಾಮೀನು ನೀಡಲು ಆಕ್ಷೇಪ ವ್ಯಕ್ತಪಡಿಸಿ ಮತ್ತೆ ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ನೀಡುವಂತೆ ಮನವಿ ಮಾಡಿದರು.

ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಯನ್ನು ಪೊಲೀಸ್ ಕಸ್ಟಡಿಗೆ ಪಡೆಯುವ ಉದ್ದೇಶವಾದರು ಏನು ಎಂದು ಪ್ರಶ್ನಿಸಿದರು. ಆಗ ಸರ್ಕಾರಿ ವಕೀಲರು, ಆರೋಪಿಯ ಮೊಬೈಲ್ ಫೋನ್ ವಶಕ್ಕೆ ಪಡೆಯಬೇಕಾಗಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಪರ ವಕೀಲರು, ಆರೋಪಿಯ ಮೊಬೈಲ್ ಫೋನ್ ವಶಕ್ಕೆ ಪಡೆಯದೇ ಹೇಗೆ ಆತನೇ ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಎಂದು ಬಂಧಿಸಿದ್ದೀರಾ? ಇದು ಕಾನೂನು ಬಾಹಿರ ಹಾಗೂ 299ರ ಅಡಿ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ವಾದಿಸಿದರು.
ವಾದ-ವಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗನನ್ನು ಇಂದು ಶುಕ್ರವಾರ (ಫೆ.14) ಕೋರ್ಟ್‌ಗೆ ಹಾಜರು ಪಡಿಸುವಂತೆ ಆದೇಶಿಸಿ ವಿಚಾರಣೆ ಮುಂದೂಡಿದರು. ಸೋಷಿಯಲ್ ಮೀಡಿಯಾದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಸತೀಶ್ ಅಲಿಯಾಸ್ ಪಾಂಡುರಂಗ ಎಂಬಾತನನ್ನು ಉದಯಗಿರಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದರು. ಭಾರತೀಯ ನ್ಯಾಯ ಸಂಹಿತೆ ಕಾಯಿದೆ 299 ಅಡಿ ಪ್ರಕರಣ ದಾಖಲಿಸಿ ಆತನನ್ನು ವಶಕ್ಕೆ ಪಡೆಯಲಾಗಿತ್ತು. ಅದೇ ದಿನ ರಾತ್ರಿ 2.30ಕ್ಕೆ ನ್ಯಾಯಾಧೀಶರ ಎದುರು ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

ಇನ್ನೊಂದೆಡೆ ಉದಯಗಿರಿ ಪೊಲೀಸ್ ಠಾಣೆ, ಪೊಲೀಸರು ಮತ್ತು ವಾಹನಗಳ ಮೇಲೆ ಕಲ್ಲು ತೂರಿದ ಪ್ರಕರಣ ಸಂಬಂಧ ಸಾವಿರಕ್ಕೂ ಅಧಿಕ ಆರೋಪಿಗಳ ವಿರುದ್ಧ ಪೊಲೀಸರ ಎಫ್ಐಆರ್ ದಾಖಲಾಗಿದೆ. ಪ್ರಥಮ ವರದಿ ಪ್ರಕಾರ, ಗಲಭೆಯಲ್ಲಿ ಇದ್ದವರು ಒಂದು ಸಾವಿರಕ್ಕೂ ಹೆಚ್ಚು ಮಂದಿ ಎಂದು ಪೊಲೀಸರು ತಿಳಿಸಿದ್ದಾರೆ.
ಉದಯಗಿರಿಯಲ್ಲಿ ಡಿಸಿಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ತೂರಾಟ ನಡೆಯಿತು. ಬಳಿಕ ಹೆಚ್ಚಿನ ಪೊಲೀಸ್ ಸಿಬ್ಬಂದಿ ಕರೆಸಿ ಯುವಕರ ಗುಂಪನ್ನು ಚದುರಿಸಲಾಯಿತು. ಅಧಿಕಾರಿಗಳ ಮೇಲೆ ಹಲ್ಲೆ, ನಿಂದನೆ, ಸರ್ಕಾರಿ ಆಸ್ತಿ ವಾಹನಗಳ ಜಖಂ ಸೇರಿದಂತೆ ಆಸ್ತಿಪಾಸ್ತಿ ಹಾನಿ, ಅಕ್ರಮ ಗುಂಪು ಕಟ್ಟಿಕೊಂಡು ಹಾನಿಯುಂಟು ಮಾಡಿದ ಯುವಕರ ಗುಂಪಿನ ಮೇಲೆ ಕ್ರಮಕ್ಕೆ ಕೋರಿ ಉದಯಗಿರಿ ಠಾಣೆಯ ಪಿಎಸ್ಐ ಸುನೀಲ್ ದೂರು ದಾಖಲಿಸಿದ್ದಾರೆ. ಘಟನೆ ಸಂಬಂಧ ಬುಧವಾರ ಪೊಲೀಸರು ವಶಕ್ಕೆ ಪಡೆದಿದ್ದವರಲ್ಲಿ 13 ಮಂದಿಯನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ಇವರಲ್ಲಿ 12 ಮಂದಿಯನ್ನು ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications