ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಾಗಿಯ ಚಳಿಗೆ ಅವರೆಕಾಯಿ ಸುಗ್ಗಿ

By Yashaswini
|
Google Oneindia Kannada News

ಮೈಸೂರು, ಡಿಸೆಂಬರ್ 19 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವರೆಕಾಯಿ ಸುಗ್ಗಿ ಮನೆ ಮಾಡಿದೆ. ಡಿಸೆಂಬರ್ ಚಳಿ ಅವರೆಕಾಯಿ ಬೆಳೆಗೆ ಹೇಳಿ ಮಾಡಿಸಿದ ವಾತಾವರಣ.

ಅಲ್ಲದೇ ಈ ಬೆಳೆಯ ಸಾಂದರ್ಭಿಕ ವ್ಯಾಪಾರ ಸಮಯ ಕೂಡ. ನವಂಬರ್ ಕಳೆದು ಡಿಸೆಂಬರ್ ಮಾಗಿ ಚಳಿ ನೆಲಕಚ್ಚುತ್ತಿದ್ದಂತೆ ಹೊಲಗಳಲ್ಲಿ ಸೊನೆ ಅವರೆ ಸೊಗಡು ಮೂಗಿಗೆ ಅಡರತೊಡಗುತ್ತದೆ. ಆ ಘಮಲಿಗೆ ವರ್ಷಕ್ಕೆ ಒಮ್ಮೆಯಾದರೂ ಅವರೆ ರುಚಿಯನ್ನು ಬಾಯಿ ಚಪ್ಪರಿಸಲೇಬೇಕು ಎಂಬಾಸೆ ಎಂಥವರಲ್ಲೂ ಮೂಡುತ್ತದೆ. ಈ ಭಾಗದಲ್ಲಿ ರಾಗಿ ಮುದ್ದೆಯ ಬಿಸಿ ಬಿಸಿಯೂಟಕ್ಕೆ ಅವರೆಕಾಯಿ ಸಾರು ಉತ್ತಮ ಹೊಂದಾಣಿಕೆ.

ಉಪ್ಸಾರು, ಮಸಾಲೆ ಸಾಂಬಾರ್, ತಿಂಡಿಗೆ ಚಿಲುಕಿಸಿದ ಅವರೆ ಗೊಜ್ಜು, ಕೂಟುಗಳು ಎಲ್ಲರ ಬಾಯಲ್ಲೂ ನೀರೂರಿಸುತ್ತವೆ. ಮೈಸೂರು ಜಿಲ್ಲೆಯ ಹುಣಸೂರು ಸುತ್ತಮುತ್ತ ಬೆಳೆಯುವ ಅವರೆಕಾಯಿ ಘಮಲು ದೂರದ ಬೆಂಗಳೂರು, ದೊಡ್ಡಬಳ್ಳಾಪುರ, ಮಂಗಳೂರು, ಬಾಂಬೆ, ಚೆನ್ನೈ, ತಮಿಳುನಾಡು, ಆಂಧ್ರಪ್ರದೇಶ ಮೊದಲಾದ ರಾಜ್ಯಗಳಿಗೆ ರವಾನೆಯಾಗುತ್ತದೆ.

Avarekai to Tickle your taste buds at Winter festival : Mysuru

ಇವತ್ತಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಅವರೆಕಾಯಿ ವರ್ಷಪೂರ್ತಿಯಾಗಿ ಸಿಗುತ್ತದೆ. ದಪ್ಪ ಅವರೆ, ಮಣಿಲಾ ಅವರೆ, ದಬ್ಬೆ ಅವರೆಕಾಯಿಗಳಿಗಿಂತಲೂ ಇದು ಬಹಳ ರುಚಿಕರ. ಆದ್ದರಿಂದಲೇ ಸೊಗಡಿನ ಅವರೆಗೆ ಹೆಚ್ಚಿನ ಬೇಡಿಕೆಯಿದೆ. ಜನರು ಅವರೆಕಾಯಿ ಸೀಸನ್‌ನಲ್ಲಿ ತರಕಾರಿಗಳು ರುಚಿಸುವುದಿಲ್ಲವೆಂದು ಹೇಳುತ್ತಾರೆ.

ಬಹಳಷ್ಟು ಜನರ ಮನೆಗಳಲ್ಲಿ ಪ್ರತಿ ದಿನವೂ ಅವರೆಯ ಭೋಜನವೇ ಜಾಸ್ತಿ. ಹಿಚುಕಿದ ಬೇಳೆ ಸಾರಿಗೆ ಮುದ್ದೆ, ಚಪಾತಿ, ರಾಗಿರೊಟ್ಟಿ ಅದ್ಭುತವಾದ ರುಚಿ ಕೊಡುತ್ತದೆ. ಹಿಚುಕಿದಬೇಳೆ ಸಾರು, ತವ್ವೆ, ಅವರೆಕಾಳು ಉಪ್ಪಿಟ್ಟು, ಕಾಳು ರೋಟಿ, ಹಿಚುಕಿದಬೇಳೆಯ ಬಿಸಿಬೇಳೆ ಬಾತು, ಪಲಾವು ಮುಂತಾದ ಪದಾರ್ಥಗಳನ್ನು ಮಾಡಲಾಗುತ್ತದೆ.

Avarekai to Tickle your taste buds at Winter festival : Mysuru

ಇನ್ನು ಕೆಲವರು ಅವರೆಕಾಯಿಯನ್ನು ಮೂಟೆಗಳಗಟ್ಟಲೆ ಕೊಂಡುಕೊಂಡು ಹಿಚುಕಿದ ಬೇಳೆ ಮಾಡಿ ಎಣ್ಣೆಯಲ್ಲಿ ಕರಿದು ಅದಕ್ಕೆ ಅವಲಕ್ಕಿ, ಕಡಲೇಬೀಜ, ಹುರಿಗಡಲೆ ಮುಂತಾದವುಗಳನ್ನು ಸೇರಿಸಿ ಪುರಿ ಮಾಡಿ ಮಾಡುತ್ತಾರೆ.

ಇನ್ನೂ ಕೆಲವರು ಮನೆಗಳಲ್ಲಿ ಹೆಂಗಸರು ಅವರೆಕಾಯಿ ಕಾಲ ಮುಗಿಯುವವರೆವಿಗೂ ಅವರೆಕಾಯಿ ಸುಲಿದು ಬೇಳೆಯನ್ನು ಎಣ್ಣೆಯಲ್ಲಿ ಕರಿದು ಒಣಕೊಬ್ಬರಿ, ನೆಲಗಡಲೆಬೀಜ, ಹುರಿಗಡಲೆಯನ್ನು ಸೇರಿಸಿ ಡಬ್ಬಗಳಲ್ಲಿ ತುಂಬಿಟ್ಟುಕೊಂಡಿದ್ದು ಮನೆಗೆ ಬಂದ ನೆಂಟರಿಷ್ಟರಿಗೆ ಕೊಡುವುದು, ಊರುಗಳಿಗೆ ಕಳಿಸುವುದು ವಾಡಿಕೆಯಾಗಿದೆ. ಇಲ್ಲಿನ ಸೊಗಡಿನ ಅವರೆಕಾಯಿ ಬೆಂಗಳೂರು ಅವರೆ ಮೇಳಕ್ಕೂ ಹೋಗುತ್ತದೆ.

ಈ ಬಾರಿ ಹಿಂಗಾರು ಉತ್ತಮವಾಗಿ ದ್ದರೂ ಮಳೆ ಸ್ವಲ್ಪ ವಿಳಂಬವಾಯಿತು. ಈಹಿನ್ನೆಲೆಯಲ್ಲಿ ಅವರೆಕಾಯಿ ಸುಗ್ಗಿ ನವೆಂಬರ್ ಬದಲು ಡಿಸೆಂಬರ್ ಮಾಹೆಯಲ್ಲಿ ಪ್ರಾರಂಭವಾಗಿದೆ. ಮಾರಾಟ ಕೇಂದ್ರಗಳಿಗೆ ಜನತೆ ಮುಗಿಬಿದಿದ್ದಾರೆ. ಈ ಬಾರಿ ಒಳ್ಳೆಯ ಮಳೆಯ ಕಾರಣ ಗಿಡಗಳು ಹುಲುಸಾಗಿ ಬೆಳೆದು ಫಸಲಿನ ಇಳುವರಿ ಹೆಚ್ಚಾಗಿದೆ.

Avarekai to Tickle your taste buds at Winter festival : Mysuru

ಪ್ರತಿ ದಿನ 60ರಿಂದ 70 ಟನ್ ಅವರೆಕಾಯಿ ತಾಲ್ಲೂಕಿನಲ್ಲಿ ಬಿಕರಿಯಾಗುತ್ತಿದೆ. ಬನ್ನಿಕುಪ್ಪೆ ಮುಖ್ಯರಸ್ತೆಯಲ್ಲಿ ಪ್ರತಿ ದಿನ 35 ಟನ್, ಎಪಿಎಸಿಯಲ್ಲಿ 15 ಟನ್, ನ್ಯಾಯಾಲಯ ವೃತ್ತದ ಬಳಿ 12 ಟನ್
ದಿನವೊಂದಕ್ಕೆ ಸರಾಸರಿ ಮಾರಾಟವಾಗುತ್ತಿದೆ.

ನವೆಂಬರ್ ಕೊನೆ ವಾರದಲ್ಲಿ ಕೆಜಿ ಒಂದಕ್ಕೆ50ರಿಂದ 60 ರೂ.ಗೆ ಮಾರಾಟವಾಗು ತ್ತಿದ್ದು, ಈಗ ಮಾರುಕಟ್ಟೆಗೆ ಅವರೆಕಾಯಿವಿಪುಲವಾಗಿ ಲಗ್ಗೆ ಇಟ್ಟ ಪರಿಣಾಮ 15ರಿಂದ 20 ರೂ. ದರವಿದೆ. ನಗರ ಹಾಗೂ ಗ್ರಾಮಾಂತರ ಭಾಗಗಳ ಮುಖ್ಯ ಕೇಂದ್ರಗಳಲ್ಲಿ ರಸ್ತೆ ಬದಿಯಲ್ಲೇ ಸಾಕಷ್ಟು ಮಂದಿ ನೇರ ಖರೀದಿದಾರರು ವಾಸ್ತವ್ಯ ಹೂಡಿದ್ದಾರೆ.

ಸಾಕಷ್ಟು ವಹಿವಾಟು ನಡೆಯುತ್ತಿದ್ದರೂ ಹೆಚ್ಚಿನ ಇಳುವರಿ ಇರುವ ಕಾರಣ ಮಾರುಕಟ್ಟೆಯಲ್ಲಿ ತೀವ್ರ ಪೈಪೋಟಿ ಉಂಟಾಗಿದೆ. ಅಲ್ಲದೆ ಬೆಲೆ ಕುಸಿದಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರೈತರ ಶ್ರಮ ಮತ್ತು ಖರ್ಚನ್ನು ಗಮನಿಸಿದರೆ ಅವರಿಗೆ ಇನ್ನಷ್ಟು ಬೆಲೆ ಸಿಗಬೇಕಾಗಿದೆ.

English summary
Food lovers can savour a variety of dishes made of avrekai at winter festival held in the city of Mysuru. It’s getting RS10 to 15 per kg Formers not been satisfied on this rate. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅವರೆಕಾಯಿ ಸುಗ್ಗಿ ಮನೆ ಮಾಡಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X