ವ್ಯಾಸರಾಜ ಮಠದ ಆಡಳಿತಾಧಿಕಾರಿ ಹಿಂತೆಗೆತ, ನೂತನ ಮಠಾಧೀಶರ ನೇಮಕ
ಮೈಸೂರು, ಜುಲೈ 2: ಪ್ರಮುಖ ಬೆಳೆವಣಿಗೆಯೊಂದರಲ್ಲಿ ವ್ಯಾಸರಾಜ ಮಠದ ತಾನು ನೇಮಿಸಿದ್ದ ಆಡಳಿತಧಿಕಾರಿಯನ್ನು ಸರಕಾರ ಹಿಂಪಡೆದಿದೆ. ಆಡಳಿತಾಧಿಕಾರಿ ಜೆ. ಜಯರಾಜ್ ರನ್ನು ಸರಕಾರ ಹಿಂದಕ್ಕೆ ಕರೆಸಿಕೊಂಡಿದೆ.
ವ್ಯಾಸರಾಜ ಮಠದ ನೂತನ ಪೀಠಧ್ಯಾಕ್ಷರಾಗಿ ಪ್ರಹ್ಲಾದಾಚಾರ್ಯ ನೇಮಕಗೊಂಡ ಹಿನ್ನಲೆಯಲ್ಲಿ ಸರಕಾರ ಆಡಳಿತಾಧಿಕಾರಿಯನ್ನು ವಾಪಸ್ಸು ಕರೆಸಿಕೊಂಡಿದೆ.
ಶುಕ್ರವಾರವಷ್ಟೇ ವ್ಯಾಸರಾಜ ಮಠದಲ್ಲಿ ಪೀಠಾಧಿಪತಿ ಆಗಿದ್ದ ವಿದ್ಯಾ ಮನೋಹರ ತೀರ್ಥರು ಪೀಠ ತ್ಯಾಗ ಮಾಡಿದ್ದರು. ಮತ್ತು ಅವರ ಸ್ಥಾನಕ್ಕೆ ನೂತನ ಪೀಠಾಧ್ಯಕರ ನೇಮಕವಾಗಿತ್ತು. ನೂತನ ಪೀಠಾಧ್ಯಕ್ಷರ ಪೀಠಾರೋಹಣ ಇಂದು ನಡೆದಿದ್ದು ಸರಕಾರ ಮತ್ತೆ ಮಠದ ಆಡಳಿತವನ್ನು ಸ್ವಾಮೀಜಿ ಕೈಗಿತ್ತಿದೆ.

ವಿವಾದದ ಗೂಡಾಗಿದ್ದ ಮಠ
ಆಡಳಿತಾಧಿಕಾರಿ ನೇಮಕಕ್ಕೂ ಮುಂಚೆ ವ್ಯಾಸರಾಜ ಮಠ ವಿವಾದದ ಗೂಡಾಗಿತ್ತು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವ್ಯಾಸರಾಜ ಮಠದಲ್ಲಿ ಪೀಠಾಧಿಪತಿ ಆಗಿದ್ದ ವಿದ್ಯಾ ಮನೋಹರ ತೀರ್ಥ ಮತ್ತು ಮಠದ ಪಂಡಿತರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು.

2012ರಲ್ಲಿ ಆಡಳಿತಾಧಿಕಾರಿ ನೇಮಕ
ಭಿನ್ನಾಭಿಪ್ರಾಯದ ಬೆನ್ನಿಗೆ ಮನೋಹರ ತೀರ್ಥರವರು ಮಠದ ಆಸ್ತಿಯನ್ನ ಕಬಳಿಕೆ ಮಾಡಿದ್ದಾರೆ ಎಂದು ಹೇಳಿ ಮಠದ ಪಂಡಿತರು ತೀರ್ಥರ ಮೇಲೆ ತಮ್ಮ ಅಸಮಾಧಾನ ಹೊರಹಾಕಿದ್ದರು. ಮಠದಲ್ಲೇ ಗಲಾಟೆ ಕೂಡ ನಡೆದಿತ್ತುಈ ವಿವಾದ ತಾತ್ಕಾಲಿಕ ಪರಿಹಾರಕ್ಕೆ ಸರಕಾರ 2012ರಲ್ಲಿ ವ್ಯಾಸರಾಜ ಮಠಕ್ಕೆ ನಿವೃತ್ತ ಐ.ಎ.ಎಸ್ ಅಧಿಕಾರಿ ಜಯರಾಜ್ ರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿತ್ತು.

ಪೀಠ ತ್ಯಾಗ
ಅಕ್ರಮವಾಗಿ ಮಠದ ಆಸ್ತಿಯನ್ನು ಪರಭಾರೆ ಮಾಡಿಕೊಂಡ ಆರೋಪದಡಿ ಸೋಸಲೆ ವ್ಯಾಸರಾಜ ಮಠದ ವಿದ್ಯಾ ಮನೋಹರರವರು ಪೀಠತ್ಯಾಗ ಮಾಡಿದ್ದಾರೆ. ಅವರು ಪೀಠ ತ್ಯಾಗ ಮಾಡಿ ಮೈಸೂರಿನ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಆಸ್ಥಾನಕ್ಕೆ ಇದೀಗ ವಿದ್ವಾಂಸ ಡಿ. ಪ್ರಹ್ಲಾದಾಚಾರ್ಯರು ನೇಮಕವಾಗಿದ್ದಾರೆ.
ಇದರಿಂದ ಮಠದಲ್ಲೀಗ ಗೊಂದಲಗಳು ನಿವಾರಣೆಯಾಗಿದ್ದು ಸಂತಸದ ವಾತಾವರಣ ನಿರ್ಮಾಣವಾಗಿದೆ.

ಮುಜುರಾಯಿ ಸಚಿವರ ಭೇಟಿ
ಮಠಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ವೆಂಕಟಾಚಲಪತಿ ಮತ್ತು ಮುಜರಾಯಿ ಇಲಾಖೆ ಸಚಿವ ರುದ್ರಪ್ಪ ಮಾನಪ್ಪ ಲಮಾಣಿ ಭೇಟಿ ನೀಡಿದ್ದಾರೆ.

ಸಂಸ್ಕ್ರತ ವಿವಿಯ ವಿಶ್ರಾಂತ ಕುಲಪತಿ
ತಿ ನರಸೀಪುರದ ತಿರಮಕೂಡಲಿನಲ್ಲಿ ವಾಸವಿರುವ ಪ್ರಹ್ಲಾದಾಚಾರ್ಯರು ತಿರುಮಲ ಸಂಸ್ಕ್ರತ ವಿವಿಯ ವಿಶ್ರಾಂತ ಕುಲಪತಿಗಳಾಗಿದ್ದಾರೆ.

ಪೀಠಾರೋಹಣ
ಪ್ರಹ್ಲಾದಾಚಾರ್ಯರು ಸನ್ಯಾಸ ದೀಕ್ಷೆ ಪಡೆದು ಬಳಿಕ ಪೀಠಾರೋಹಣರಾದರು. ಇದಕ್ಕಾಗಿ ನಿನ್ನೆಯಿಂದಲೇ ಮಠದ ಆವರಣದಲ್ಲಿ ಧಾರ್ಮಿಕ ಕಾರ್ಯಗಳು ಆರಂಭಗೊಂಡಿದ್ದು ಇಂದು ಪೀಠಾರೋಹಣ ಕಾರ್ಯಕ್ರಮ ನಡೆಯಿತು.

ಪೀಠ ಸ್ವೀಕರಿಸಿದ ಪ್ರಹ್ಲಾದಾಚಾರ್ಯರು
ಸನ್ಯಾಸ ಆಶ್ರಮ ಅಂದರೆ ಅವರಲ್ಲಿದ್ದಂತಹ ಬಟ್ಟೆ ಮತ್ತು ಜನಿವಾರವನ್ನು ತೆಗೆದು ಹೊಸ ಬಟ್ಟೆಯನ್ನು ತೊಡುವುದು. ಅದರಂತೆ ಬಟ್ಟೆ ಜನಿವಾರ ತೆಗೆದು, ಬಳಿಕ ಪೀಠ ಸ್ವೀಕಾರ ನಡೆಯಿತು. ಕಪಿಲ, ಕಾವೇರಿ, ಸ್ಪಟಿಕ ಹೀಗೆ ಮೂರು ನದಿಗಳ ನೀರಿನಲ್ಲಿ ಸನ್ಯಾಸ ಆಶ್ರಮವನ್ನು ಪ್ರಹ್ಲಾದಾಚಾರ್ಯರು ಸ್ವೀಕರಿಸಿದರು.

ರಾಘವೇಂದ್ರ ಸ್ವಾಮಿಗಳು ಉಪಸ್ಥಿತಿ
ಇಂದು ನಡೆದ ಪೀಠಾರೋಹಣ ಶೇಷಚಂದ್ರಿಕಾಚಾರ್ಯರ ಸನ್ನಿಧಾನದಲ್ಲಿ ನಡೆಯಿತು. ಪೂಜೆ ಕೈಂಕರ್ಯ ನಡೆಸಿದ ಪ್ರಹ್ಲಾದಚಾರ್ಯರು ರಾಘವೇಂದ್ರ ಮಠದ ಸುಭುದೇಂದ್ರ ತೀರ್ಥರು, ಮಾಧವ ತೀರ್ಥರು ಉಪಸ್ಥತಿಯಲ್ಲಿ ಪೀಠವೇರಿದರು. ನಂತರ ರಾಘವೇಂದ್ರ ಮಠ, ತಂಬಿಹಳ್ಳಿ ಮಠ ಮತ್ತು ವ್ಯಾಸರಾಜ ಮಠದ ಮೂರು ಪೀಠಾಧಿಪತಿಗಳಿಂದ ಆಯಾ ಮಠದ ಪಟ್ಟದ ದೇವರುಗಳಿಗೆ ಪೂಜಾ ಕೈಂಕರ್ಯ ನಡೆಯಿತು. ವಿದ್ಯಾ ಮನೋಹರ ತೀರ್ಥರು ಪಟ್ಟಾಭಿಷೇಕವನ್ನು ನಡೆಸಿಕೊಟ್ಟರು.

41 ನೇ ಪೀಠಾಧಿಪತಿ
ಪ್ರಹ್ಲಾದಾಚಾರ್ಯರು ಪೀಠವೇರಿದ ನಂತರ ವಿದ್ಯಾ ಶ್ರೀಷ ತೀರ್ಥರಾಗಿ ಹೆಸರು ಬದಲಾಯಿಸಿಕೊಂಡರು. ಅವರು ವ್ಯಾಸರಾಯ ಮಠದ 41ನೇ ಪೀಠಾಧಿಪತಿಗಳಾಗಿದ್ದಾರೆ. ಪೀಠಾರೋಹಣದ ನಂತರ ನೂತನ ಮಠಾಧೀಶರ ಆಶಿರ್ವಾದವನ್ನು ಮಠದ ಭಕ್ತರು ಮತ್ತು ಪಂಡಿತರು ಪಡೆದುಕೊಂಡರು.












Click it and Unblock the Notifications