Arkeshwara Temple: ಚೋಳರ ಕಾಲದ ಅರ್ಕೇಶ್ವರ ದೇಗುಲದ ಕುತೂಹಲಕಾರಿ ಸಂಗತಿಗಳಿವು, ಇಲ್ಲಿದೆ ವಿವರ
ಮೈಸೂರು, ಆಗಸ್ಟ್, 23: ಜಿಲ್ಲೆಯ ಹುಣಸೂರು ತಾಲೂಕಿನಲ್ಲಿರುವ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದು ಎನ್ನಲಾದ ಅರ್ಕೇಶ್ವರ ದೇಗುಲ ಇತಿಹಾಸ ಕಥೆ ಹೇಳುತ್ತಿದೆ. ಇಲ್ಲಿ ಈಗ ನೂತನ ದೇಗುಲವನ್ನು ನಿರ್ಮಿಸಲಾಗುತ್ತಿದೆಯಾದರೂ ಹಿಂದೆ ಇದ್ದ ದೇಗುಲದ ಕಥೆ ಮಾತ್ರ ರೋಚಕವಾಗಿದೆ.
ಹಳೆಯ ದೇಗುಲ ಕಾಡಿನ ನಡುವೆ ಲೀನವಾಗಿ ಹೋಗಿತ್ತು. ಅದು ಹೇಗೆ ಪತ್ತೆಯಾಯಿತು? ಇದನ್ನು ನಿರ್ಮಿಸಿದ್ದು ಯಾರು? ಇದರ ಮಹತ್ವವೇನು? ಹೀಗೆ ಒಂದಷ್ಟು ಮಾಹಿತಿಯನ್ನು ನೋಡುತ್ತಾ ಹೋಗೋಣ. ಹುಣಸೂರು ಸಮೀಪದ ಕೊಯಮತ್ತೂರು ಕಾಲೋನಿ ಬಳಿಯಲ್ಲಿರುವ ದೇಗುಲ ಮೈಸೂರು-ಮಂಗಳೂರು ಮುಖ್ಯ ಹೆದ್ದಾರಿಯ ಬೀಜಗನ ಹಳ್ಳಿಯಿಂದ ದಕ್ಷಿಣಕ್ಕೆ 8 ಕಿ.ಮೀ. ದೂರದಲ್ಲಿದೆ.

ಇಲ್ಲಿಗೆ ಹುಣಸೂರಿನಿಂದ ಕೊಯಮುತ್ತೂರು ಕಾಲೋನಿ ಮತ್ತು ರತ್ನಾಪುರಿ ಕಾಲೋನಿಗಳ ಮೂಲಕ 2 ಕಿ.ಮೀ. ಸಾಗಿದರೆ ಸಮೀಪಕ್ಕೆ ತಲುಪಬಹುದಾಗಿದೆ. ಮೈಸೂರು, ಹುಣಸೂರು ಮತ್ತು ಹೆಚ್.ಡಿ.ಕೋಟೆ ಕಡೆಗಳಿಂದ ಸುಲಭವಾಗಿ ಬರಬಹುದಾಗಿದೆ. ಇದು ಪತ್ತೆಯಾಗುವಾಗಲೇ ಪಾಳು ಬಿದ್ದಂತೆ ಇತ್ತು. ಅಲ್ಲಿಯೇ ಪೂಜಾ ಕಾರ್ಯಗಳನ್ನು ಮಾಡುತ್ತಾ ಬರಲಾಗಿತ್ತು. ಇತ್ತೀಚೆಗೆ ಇಲ್ಲಿ ನೂತನ ದೇಗುಲ ನಿರ್ಮಾಣ ಮಾಡಲಾಗಿದೆ.
ಕಷ್ಟದಿಂದ ಬಿಡುಗಡೆಗೊಳಿಸುವ ಅರ್ಕೇಶ್ವರ
ಹಳೆಯ ಅರ್ಕೇಶ್ವರ ದೇಗುಲಕ್ಕೆ ಸುಮಾರು ಒಂದು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದ್ದು, ಇದನ್ನು ಚೋಳರ ಕಾಲದಲ್ಲಿ ನಿರ್ಮಾಣವಾದ ದೇಗುಲ ಎಂದು ಹೇಳಲಾಗುತ್ತದೆ. ಹೊಲಗದ್ದೆ ಬಯಲಲ್ಲಿ ಇರುವ ದೇಗುಲದ ಅಧಿದೇವತೆ ಅರ್ಕೇಶ್ವರನಾಗಿದ್ದು, ಭಕ್ತರನ್ನು ಕಷ್ಟ ಕಾರ್ಪಣ್ಯಗಳಿಂದ ಬಿಡುಗಡೆ ಗೊಳಿಸುತ್ತಾ ಬರುತ್ತಿದ್ದಾನೆ ಎನ್ನುವ ನಂಬಿಕೆ ಇಲ್ಲಿನ ಜನರದ್ದಾಗಿದೆ.
ಇವತ್ತು ದೇಗುಲದ ಸುತ್ತಲೂ ಹೊಲಗದ್ದೆಗಳಿವೆ. ಆದರೂ ಹಿಂದೆ ಇದೆಲ್ಲವೂ ದಟ್ಟ ಅರಣ್ಯದಿಂದ ಕೂಡಿತ್ತು ಎಂದು ಹೇಳಲಾಗಿದೆ. ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ಮತ್ತು ತಿಳಿದವರು ಹೇಳುವಂತೆ ಈ ಅರ್ಕೇಶ್ವರ ದೇಗುಲವು ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದಂತೆ.
ಚೋಳರ ಕಾಲದಲ್ಲಿ ನಿರ್ಮಿಸಿದ ದೇಗುಲ
ಬಹುಶಃ ಅಂದಿನ ಕಾಲದಲ್ಲಿ ಜನ ಇಲ್ಲಿ ನೆಲೆಸಿ ಬದಲಾದ ಕಾಲಘಟ್ಟದಲ್ಲಿ ನಾಶ ಹೊಂದಿರಬಹುದೆಂದು ಅಂದಾಜಿಸಲಾಗುತ್ತಿದೆ. ಇದಕ್ಕೆ ಇಲ್ಲಿನ ಹೊಲಗದ್ದೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಸಿಗುವ ಮಡಿಕೆ ಚೂರುಗಳು, ಕಲ್ಲುಗಳು ಇನ್ನಿತರ ವಸ್ತುಗಳು ನಿದರ್ಶನವಾಗಿವೆ. ಈ ದೇಗುಲ ಪುರಾತನದ್ದಾಗಿದೆ. ಇದನ್ನು ಸಂರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ. ಪರಿಣಾಮ ಜನರೇ ಇಲ್ಲಿ ಪೂಜಾ ಕೈಂಕರ್ಯಗಳನ್ನು ಮಾಡುತ್ತಾ ಬರುತ್ತಿದ್ದಾರೆ. ಇನ್ನು ಚಪ್ಪಡಿ ಮತ್ತು ಹಾಸುಕಲ್ಲುಗಳಿಂದ ಈ ದೇಗುಲವನ್ನು ನಿರ್ಮಿಸಲಾಗಿದೆ.
ವಿಷ ಜಂತುಗಳ ಆವಾಸ ಸ‍್ಥಾನವಾಗಿತ್ತು
ದೇವಸ್ಥಾನದ ಗರ್ಭಗುಡಿಯಲ್ಲಿ ಅರ್ಕೇಶ್ವರ ಸ್ವಾಮಿಯ ಸುಂದರ ಶಿವಲಿಂಗವಿದ್ದು, ಪ್ರಾಂಗಣದಲ್ಲಿ ಸುಂದರ ಕೆತ್ತನೆಯ ಕಲ್ಲಿನ ಕಂಬಗಳು ಹಾಗೂ ನಂದಿ ವಿಗ್ರಹ ಹಾಗೂ ಹೊರಭಾಗದಲ್ಲಿ ದೇವರ ವಿವಿಧ ಭಂಗಿಗಳ ವಿಗ್ರಹಗಳು ಹೋಮ ಕುಂಡ, ಗಂಡಬೇರುಂಡ ಚಿತ್ರಗಳ ಕೆತ್ತನೆಗಳಿವೆ.
ಇನ್ನು ಹಿಂದಿನ ಕಾಲದಲ್ಲಿ ವೈಭವ ಮೆರೆದಿದ್ದ ಈ ದೇಗುಲ ಬಹುಶಃ ದಾಳಿಗೆ ಒಳಗಾಗಿ ಭಿನ್ನವಾಗಿರಬಹುದು. ಬಳಿಕ ಜನರಿಲ್ಲದೆ ಪಾಳು ಬಿದ್ದಿರಬಹುದು ಎಂದು ಹೇಳಲಾಗಿತ್ತು. ಬಹಳಷ್ಟು ವರ್ಷಗಳ ಕಾಲ ಇಲ್ಲೊಂದು ದೇಗುಲವಿತ್ತು ಎಂಬುದೇ ಜನರಿಗೆ ಗೊತ್ತಿರಲಿಲ್ಲ. ಕಾಡಿನಿಂದ ಆವೃತವಾಗಿದ್ದ ಈ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ. ಏಕೆಂದರೆ ಈ ಜಾಗ ಹಾವು ವಿಷ ಜಂತುಗಳ ಆವಾಸ ಸ‍್ಥಾನವಾಗಿತ್ತು.
ಕಾಡಿನಲ್ಲಿದ್ದ ದೇಗುಲ ಪತ್ತೆಯಾಗಿದ್ದು ಹೇಗೆ?
ಇಂತಹ ಪ್ರದೇಶದಲ್ಲಿ ದೇವಾಲವೊಂದು ಇದೆ ಎಂಬುದು ಗೊತ್ತಾಗಿದ್ದು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸರ ಕಾಲದಲ್ಲಿ ಎನ್ನಲಾಗಿದೆ. ದೇವರಾಜ ಅರಸರಿಗೆ ಸೇರಿದ ಸುಮಾರು ಮುನ್ನೂರು ಹೆಕ್ಟೇರ್ ಪ್ರದೇಶ ಪಾಳು ಬಿದ್ದಿತ್ತು. ಇಲ್ಲಿದ್ದ ಕಾಡನ್ನು ಕಡಿದು ಕೃಷಿಗೆ ಜಮೀನನ್ನು ಸಿದ್ಧಗೊಳಿಸಲೆಂದೇ ತಮಿಳುನಾಡಿನ ಕೊಯಮತ್ತೂರಿನಿಂದ ಕೂಲಿ ಕಾರ್ಮಿಕರನ್ನು ಕರೆಯಿಸಿ ಅವರು ನೆಲೆಸಲು ಅವಕಾಶ ಮಾಡಿಕೊಡಲಾಯಿತು.
ಅಲ್ಲಿದ್ದುಕೊಂಡೇ ಕೂಲಿ ಕಾರ್ಮಿಕರು ಕಾಡನ್ನು ಕಡಿದು ಕೃಷಿ ಜಮೀನು ನಿರ್ಮಾಣಕ್ಕೆ ಮುಂದಾಗಿದ್ದರು. ಈ ವೇಳೆ ಕಾಡಿನ ನಡುವೆ ಪಾಳು ಬಿದ್ದ ದೇಗುಲ ಕಾಣಿಸಿತ್ತು. ಅದನ್ನು ಶುಚಿಗೊಳಿಸಿ ಪೂಜೆ ಆರಂಭಿಸಲಾಯಿತು ಎಂದು ಹೇಳಲಾಗುತ್ತಿದೆ. ಅಂದಿನಿಂದ ಆರಂಭವಾದ ಪೂಜೆ ಇಂದಿಗೂ ನಡೆದುಕೊಂಡು ಬರುತ್ತಿದ್ದು, ನಿತ್ಯ ಅರ್ಕೇಶ್ವರನಿಗೆ ಪೂಜೆ ನಡೆಯುತ್ತದೆಯಾದರೂ ಸೋಮವಾರ, ಶುಕ್ರವಾರ ಬೆಳಗ್ಗೆ ಮತ್ತು ಸಂಜೆ ಹುಣ್ಣಿಮೆ ಅಮವಾಸ್ಯೆ ದಿನಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ.
ದೇವಸ್ಥಾನದ ಮುಂದೆ ಭಾರಿ ಗಾತ್ರದ ದೊಡ್ಡ ಅಲದ ಮರವಿದ್ದು, ಅದರ ಕೆಳಗೆ ದೊಡ್ಡ ರುಬ್ಬುವ ಕಲ್ಲಿದ್ದು, ಇದು ದೇವಸ್ಥಾನ ನಿರ್ಮಾಣ ಮತ್ತು ಬೇಟೆಗಾಗಿ ತಂಗಿದ್ದ ಅವಧಿಯಲ್ಲಿ ಚೋಳರು ನಿರ್ಮಿಸಿರಬಹುದು ಎಂದು ನಂಬಲಾಗಿದೆ. ಒಟ್ಟಾರೆ ದೇಗುಲ ಮತ್ತು ಸುತ್ತಮುತ್ತ ನೆಲೆ ನಿಂತಿರುವ ವಿಶೇಷತೆಗಳು ಈ ಸ್ಥಳದ ಮಹಿಮೆಯನ್ನು ಸಾರುತ್ತಿರುವುದಂತೂ ನಿಜ.












Click it and Unblock the Notifications