ಗಜಪಡೆ ತೂಕ ಪರೀಕ್ಷೆ; ಅರ್ಜುನ ಮತ್ತೆ ಟಾಪರ್, 5 ಟನ್ ತಲುಪಿದ ಅಭಿಮನ್ಯು
ಮೈಸೂರು, ಸೆಪ್ಟೆಂಬರ್ 9: ಗಜಪಡೆಗೆ ನಡೆದ ಎರಡನೇ ಹಂತದ ತೂಕ ಪರೀಕ್ಷೆಯಲ್ಲಿ ಎಲ್ಲಾ ಆನೆಗಳು 125 ರಿಂದ 425 ಕೆ.ಜಿಯವರೆಗೆ ತೂಕ ಹೆಚ್ಚಿಸಿಕೊಂಡಿವೆ. ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇಬ್ರಿಡ್ಜ್‌ನಲ್ಲಿ ಅಭಿಮನ್ಯು ನೇತೃತ್ವದ ಎಲ್ಲಾ 14 ಆನೆಗಳಿಗೂ ಶುಕ್ರವಾರ ತೂಕ ಪರೀಕ್ಷೆ ನಡೆಯಿತು.
ಇಡೀ ಗಜಪಡೆಯ ಹಿರಿಯಣ್ಣ, ಹಲವು ವರ್ಷಗಳಿಂದ ಅತಿ ಹೆಚ್ಚು ತೂಕದ ಆನೆ ಎಂದೇ ಖ್ಯಾತಿ ಪಡೆದಿರುವ ಮಾಜಿ ಕ್ಯಾಪ್ಟನ್ ಅರ್ಜುನ 63ನೇ ವಯಸ್ಸಿನಲ್ಲೂ ಬರೋಬ್ಬರಿ 5950 ಕೆ.ಜಿ ತೂಗುವ ಮೂಲಕ ಬಲಿಷ್ಠನೆನಿಸಿಕೊಂಡನು. ಎಂಟು ಬಾರಿ ಅಂಬಾರಿ ಹೊತ್ತು, ಅಭಿಮನ್ಯುವಿಗೆ ಜವಾಬ್ದಾರಿ ವಹಿಸಿ ಗಜಪಡೆಯ ಸದಸ್ಯನಾಗಿರುವ ಅರ್ಜುನ ಮೊದಲ ಪರೀಕ್ಷೆಯಲ್ಲಿ 5775 ಕೆಜಿ ತೂಕವಿದ್ದವನು ಈಗ, ತನ್ನ ತೂಕವನ್ನು 5950 ಕೆ.ಜಿಗೆ ಏರಿಕೆ ಕಂಡಿದ್ದಾನೆ. ಈ ಮೂಲಕ ಎಲ್ಲಾ ಆನೆಗಳಿಂದ ನಾನೇ ಹೆಚ್ಚು ತೂಕ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾನೆ.
ನಂತರದ ಸ್ಥಾನದಲ್ಲಿ ಗೋಪಾಲಸ್ವಾಮಿ 5,460 ಕೆ.ಜಿ, ಧನಂಜಯ 4890 ಕೆ.ಜಿ ತೂಗುವ ಮೂಲಕ ಎರಡೂ ಆನೆಗಳು ಕ್ರಮವಾಗಿ 320, 80 ಕೆ.ಜಿ ಹೆಚ್ಚಿಸಿಕೊಂಡಿವೆ.

ಅಭಿಮನ್ಯು ತೂಕ ಎಷ್ಟು?
ಆಗಸ್ಟ್ 10ರಂದು ಅರಮನೆ ಪ್ರವೇಶಿಸಿದ ಗಜಪಡೆಗೆ ಮರುದಿನ (ಆ.11) ಮೊದಲ ತಂಡದಲ್ಲಿ ಆಗಮಿಸಿದ್ದ 09 ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಶುಕ್ರವಾರ ಮೊದಲ ಮತ್ತು ಎರಡನೇ ತಂಡ ಸೇರಿ ಎಲ್ಲಾ 14 ಆನೆಗಳಿಗೂ ನಡೆಸಿದ ತೂಕ ಪರೀಕ್ಷೆಯಲ್ಲಿ ಅಂಬಾರಿ ಆನೆ ಅಭಿಮನ್ಯು 4770 ರಿಂದ 5 ಸಾವಿರ ಕೆ.ಜಿಗೆ ಹೆಚ್ಚಳವಾಗಿದ್ದು, ಒಟ್ಟು 230 ಕೆ.ಜಿ. ಹೆಚ್ಚಿಸಿಕೊಂಡಿರುವುದು ವಿಶೇಷ.
425 ಕೆ.ಜಿ ಹೆಚ್ಚಿಸಿಕೊಂಡ ಭೀಮ
ಭವಿಷ್ಯದ ಅಂಬಾರಿ ಆನೆ ಎಂದೇ ಗುರುತಿಸಿಕೊಳ್ಳುತ್ತಿರುವ ಹಾಗೂ 2ನೇ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಭೀಮ ಒಂದು ತಿಂಗಳಲ್ಲಿ ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕ ಹೆಚ್ಚಿಸಿಕೊಂಡಿದ್ದಾನೆ. ಪುಂಡಾನೆ ಪಳಗಿಸುವ ಪಂಟರ್ ಬರೋಬ್ಬರಿ 425 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ.
ಕಳೆದ ತಿಂಗಳ ತೂಕ ಪರೀಕ್ಷೆಯಲ್ಲಿ 3,950 ಕೆ.ಜಿ ಭಾರವಿದ್ದ ಭೀಮ 4,345 ಕೆ.ಜಿ ತೂಗಿದನು. ಹಾಗೆಯೇ ಮಹೇಂದ್ರ 4,450 ಕೆ.ಜಿ ತೂಗುವ ಮೂಲಕ 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಉಳಿದಂತೆ ಧನಂಜಯ 4,890 ಕೆ.ಜಿ.ತೂಕ ಹೊಂದಿದ್ದಾನೆ. ಮೊದಲ ತೂಕದ ಪರೀಕ್ಷೆಯಲ್ಲಿ 4,810 ಕೆ.ಜಿ. ಇದ್ದ ಧನಂಜಯ, ಒಂದು ತಿಂಗಳ ಅಂತರದಲ್ಲಿ 80 ಕೆ.ಜಿ.ತೂಕ ಹೆಚ್ಚಿಸಿಕೊಂಡಿದ್ದಾನೆ.
ಮೊದಲ ತಂಡದ ಹೆಣ್ಣಾನೆಗಳಾದ ಕಾವೇರಿ 3,245 (ಮೊದಲು 3,105) ಕೆ.ಜಿ., ಚೈತ್ರಾ 3,235 (ಮೊದಲು 3,050) ಕೆ.ಜಿ., ಲಕ್ಷ್ಮೀ 3,150 (ಮೊದಲು 2,920) ಕೆ.ಜಿ. ತೂಕ ಹೊಂದಿವೆ.
2ನೇ ತಂಡದಲ್ಲಿ ಅರಮನೆಗೆ ಆಗಮಿಸಿದ 5 ಆನೆಗಳಿಗೂ ಪರೀಕ್ಷೆ ನಡೆಸಿದ್ದು, ಶ್ರೀರಾಮ 4475, ಸುಗ್ರೀವ 4,785, ಗೋಪಿ 4,460, ಪಾರ್ಥಸಾರಥಿ 3,445 ಹಾಗೂ ಹೆಣ್ಣಾನೆ ವಿಜಯಾ 2,760 ಕೆ.ಜಿ ತೂಗಿದವು.












Click it and Unblock the Notifications