ಪೌಡರ್ ಹಾಕೊಳ್ಳಿ, ತಲೆ ಬಾಚ್ಕೊಳ್ಳಿ, ಕಡ್ಡಾಯವಾಗಿ ಮತಹಾಕಿ!
ಒಂದೊಂದು ಮತವೂ ಎಷ್ಟೊಂದು ಅಮೂಲ್ಯ ಎಂಬ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ 'ಅರಿವು' ಸಂಸ್ಥೆಯು ನಂಜನಗೂಡಿನಲ್ಲಿ ಅಣಕು ಪ್ರದರ್ಶನ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.
ಮೈಸೂರು, ಏಪ್ರಿಲ್ 6: ರಾಜಕೀಯದ ಬಗ್ಗೆ ಮಾತನಾಡುವ ಬಹಳಷ್ಟು ಮಂದಿ ಚುನಾವಣೆ ಹತ್ತಿರ ಬಂದಾಗ ಮತದಾನದ ಹಕ್ಕನ್ನು ಚಲಾಯಿಸದೆ ಮೌನಕ್ಕೆ ಜಾರಿ ಬಿಡುತ್ತಾರೆ.
ಇಂತಹವರಿಗೆ ಅರಿವು ಮೂಡಿಸಿ, ಒಂದೊಂದು ಮತವೂ ಎಷ್ಟೊಂದು ಅಮೂಲ್ಯ ಎಂಬ ಕುರಿತು ಜನಜಾಗೃತಿ ಮೂಡಿಸುವ ಸಲುವಾಗಿ ಇಂದು, 'ಅರಿವು' ಸಂಸ್ಥೆಯು ಅಣಕು ಪ್ರದರ್ಶನ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.[ಯಡ್ಡಿಯೂರಪ್ಪನವರದ್ದು ಉತ್ತರ ಕುಮಾರನ ಪೌರುಷ: ಉಗ್ರಪ್ಪ]

ನಂಜನಗೂಡಿನ ರಾಷ್ಟ್ರಪತಿ ರಸ್ತೆ ಮತ್ತು ಹುಲ್ಲಹಳ್ಳಿ ವೃತ್ತ, ಶ್ರೀಕಂಠೇಶ್ವರ ದೇವಸ್ಥಾನದ ಮುಂಭಾಗ ಹೀಗೆ ಅಲ್ಲಲ್ಲಿ ಅರಿವು ಸಂಸ್ಥೆಯ ಪದಾಧಿಕಾರಿಗಳು ತೆರಳಿ ಮುಖಕ್ಕೆ ಪೌಡರ್ ಹಾಕೊಳ್ಳಿ.. ತಲೆಗೆ ಎಣ್ಣೆ ಹಾಕೊಳ್ಳಿ..ಕೂದಲು ಬಾಚ್ಕೊಳ್ಳಿ... ಕಡ್ಡಾಯ ಮತದಾನ ಮಾಡಿ ಎಂಬ ಘೋಷಣೆ ಕೂಗಿದರು. ಅಷ್ಟೇ ಅಲ್ಲ, ಮನುಷ್ಯನಿಗೆ ಸೋಪು, ಪೌಡರ್, ಕೊಬ್ಬರಿ ಎಣ್ಣೆ ಎಷ್ಟು ಮುಖ್ಯವೊ ಅಷ್ಟೆ ಮುಖ್ಯ ಮತ ಚಲಾವಣೆ ಎನ್ನುವುದನ್ನು ಅಭಿನಯದ ಮೂಲಕ ತೋರಿಸಿಕೊಟ್ಟರು.
ಮತದಾನ ಮಾಡುವುದರಿಂದ ನಾಗರಿಕನಿಗಾಗುವ ಉಪಯೋಗ ಮತ್ತು ಪ್ರಜಾಪ್ರಭುತ್ವ ಹೊಂದಿದ ದೇಶದಲ್ಲಿ ಮತದಾನಕ್ಕಿರುವ ಪ್ರಾಮುಖ್ಯತೆಯ ಬಗ್ಗೆ ಈ ಸಂದರ್ಭದಲ್ಲಿ ವಿವರಿಸಲಾಯಿತು.[ಉಪಚುನಾವಣೆ ದಿಕ್ಸೂಚಿ ಚುನಾವಣೆಯಲ್ಲ - ಸಿದ್ದರಾಮಯ್ಯ]
ರಾಜ್ಯದಲ್ಲಿ ಏಪ್ರಿಲ್ 9 ರಂದು ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ಮತದಾರರೂ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡಿ ಎಂದು ಅರಿವು ತಂಡದ ಸದಸ್ಯರು ತಿಳಿಸಿದರು. ನಿಮ್ಮ ಜನಪ್ರತಿನಿಧಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಿ ಎಂದು ಜನರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಕೆಎಂಪಿಕೆ ಚಾರಿಟಬಲ್ ಸದಸ್ಯ ವಿಕ್ರಮ್ ಅಯ್ಯಂಗಾರ್, 'ಅರಿವು' ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೊಳ ಜಗದೀಶ್, ಮುಂತಾದವರಿದ್ದರು.












Click it and Unblock the Notifications