ಭಾರೀ ಬರಗಾಲದ ಮಧ್ಯೆ ಮೈಸೂರಿನ ಭತ್ತದ ಕಣಜದ ರೈತರ ಕೈಹಿಡಿದ ಧಾನ್ಯಲಕ್ಷ್ಮೀ
ಮೈಸೂರು, ಡಿಸೆಂಬರ್ 14: ಈಗ ಭತ್ತದ ಕೊಯ್ಲು ಕಾಲ.. ವಿಶಾಲಗದ್ದೆಯಲ್ಲಿ ಹೊಂಬಣ್ಣದಲ್ಲಿ ಮಿನುಗುತ್ತಿರುವ ಧಾನ್ಯಲಕ್ಷ್ಮಿ ರೈತರ ಮುಖದಲ್ಲಿ ಮಂದಹಾಸ ಮೂಡಿಸುತ್ತಿದೆ. ಈ ಬಾರಿ ಹೆಚ್ಚು ಇಳುವರಿ ಮತ್ತು ಉತ್ತಮ ಬೆಲೆ ದೊರೆಯುತ್ತಿರುವುದು ಭತ್ತ ಬೆಳೆದವರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಮಳೆ ಮತ್ತು ನೀರಿನ ಕೊರತೆಯಿಂದ ಕೆಲವು ಕಡೆಗಳಲ್ಲಿ ಭತ್ತ ಬೆಳೆದಿಲ್ಲವಾದರೂ ನೀರು ಆಶ್ರಯವಿರುವ ಪ್ರದೇಶಗಳಲ್ಲಿ ಭತ್ತ ಬೆಳೆಯಲಾಗಿದ್ದು ಇದೀಗ ಭತ್ತದ ಕೊಯ್ಲುನಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಸಾಮಾನ್ಯವಾಗಿದೆ.
ಒಂದೆಡೆ ಭತ್ತದ ಕೊಯ್ಲುಗೆ ಕಾರ್ಮಿಕರ ಕೊರತೆಯಿದ್ದರೂ ಇನ್ನೊಂದೆಡೆ ಹೆಚ್ಚುವರಿ ಕೂಲಿ ನೀಡಿ ಕೊಯ್ಲು ಮಾಡಿಸುವುದು ಸಣ್ಣ ಹಿಡುವಳಿ ರೈತರಿಗೆ ಕಷ್ಟವಾಗಿದೆ. ಹೀಗಾಗಿ ಹೆಚ್ಚಿನವರು ಯಂತ್ರಗಳ ಮೊರೆ ಹೋಗುತ್ತಿರುವುದು ಕಂಡು ಬಂದಿದೆ. ಮೈಸೂರು ಜಿಲ್ಲೆಯ ನಂಜನಗೂಡು, ತಿ.ನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಭತ್ತವನ್ನು ಬೆಳೆಯುತ್ತಾರೆಯಾದರೂ ಕೆ.ಆರ್.ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆಯಲಾಗುತ್ತಿದ್ದು, ಭತ್ತದ ಕಣಜ ಎಂದೇ ಕರೆಯಲಾಗುತ್ತಿದೆ. ಅದರಲ್ಲೂ ಈ ವ್ಯಾಪ್ತಿಯಲ್ಲಿ ಈ ವರ್ಷ ಭತ್ತ ರೈತರ ಕೈಹಿಡಿದಿದೆ ಎಂದರೆ ತಪ್ಪಾಗಲಾರದು.

ಮುಂಗಾರು ದುರ್ಬಲವಾಗಿದ್ದರಿಂದ ರೈತರು ಆತಂಕದಲ್ಲಿಯೇ ಭತ್ತದ ಕೃಷಿಗೆ ಮುಂದಾಗಿದ್ದರು. ಹಿಂದಿನ ವರ್ಷಗಳಂತೆ ಪ್ರವಾಹ ಏರ್ಪಡಲಿಲ್ಲ. ಕೀಟ, ರೋಗದ ಬಾಧೆಯೂ ಕಡಿಮೆಯಿತ್ತು. ಇದರಿಂದ ಭತ್ತದ ನಾಟಿಗೆ ತೊಂದರೆಯಾಗಿರಲಿಲ್ಲ. ಆದರೆ ಮಳೆಯ ಕೊರತೆಯ ನಡುವೆಯೇ ರೈತರು ಭತ್ತವನ್ನು ಬೆಳೆದಿದ್ದು ಸುಲಭವೇನಲ್ಲ. ಸದ್ಯ ಕೊಯ್ಲಿಗೆ ಬಂದಿರುವುದರಿಂದ ನೆಮ್ಮದಿಯುಸಿರು ಬಿಟ್ಟಿದ್ದಾರೆ. ಜೊತೆಗೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಭತ್ತಕ್ಕೂ ಸಮಾಧಾನಕರ ಬೆಲೆ ದೊರೆಯುತ್ತಿದೆ.
ಗದ್ದೆಗಳಲ್ಲಿ ಕೊಯ್ಲು ಯಂತ್ರಗಳ ದರ್ಬಾರ್
ರೈತರು ಹೇಳುವ ಪ್ರಕಾರ ಈ ಬಾರಿ ಭತ್ತದ ಫಸಲನ್ನು ಯಶಸ್ವಿಯಾಗಿ ಪಡೆಯುತ್ತೇವೆ ಎಂಬ ನಂಬಿಕೆಯೇ ಇರಲಿಲ್ಲವಂತೆ. ಕಾವೇರಿ ಕಣಿವೆಯ ಮಳೆಯಾಶ್ರಿತ ಹಾಗೂ ನೀರಾವರಿ ನಾಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಸಮರ್ಪಕವಾಗಿ ಮಳೆಯಾಗಿರಲಿಲ್ಲ. ಹೀಗಾಗಿ ಭತ್ತದ ಕೃಷಿಗೆ ಮುಂದಾಗಿದ್ದ ರೈತರಲ್ಲಿ ಭಯವಿತ್ತು. ಇಲ್ಲಿ ಭತ್ತ ಹೊರತುಪಡಿಸಿ ಬೇರೆ ಬೆಳೆಯಲು ಸಾಧ್ಯವಾಗದ ಕಾರಣ ಕಷ್ಟವೋ ಸುಖವೋ ದೇವರ ಮೇಲೆ ಭಾರ ಹಾಕಿ ಕೃಷಿ ಕೈಗೊಂಡಿದ್ದರು. ನೀರಿನ ಕೊರತೆಯಿಂದಾಗಿ ನೀರಾವರಿ ಇಲಾಖೆ ಕೂಡ ನಾಲೆಗಳಿಗೆ ಸೂಕ್ತ ಸಮಯದಲ್ಲಿ ನೀರು ಹರಿಸಿರಲಿಲ್ಲ. ಇದೆಲ್ಲದರ ನಡುವೆ ಹಠಕ್ಕೆ ಬಿದ್ದು ರೈತರು ಭತ್ತ ಬೆಳೆದಿದ್ದರು.

ಕೆ.ಆರ್.ನಗರ ವ್ಯಾಪ್ತಿಯ ಚುಂಚನಕಟ್ಟೆ, ಸಾಲಿಗ್ರಾಮ, ಮಿರ್ಲೆ, ಹೆಬ್ಬಾಳು, ಕಸಬಾ, ಹೊಸ ಅಗ್ರಹಾರ ಹೋಬಳಿಗಳ ಬಹುತೇಕ ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ರೈತರು 1001, ಐ. ಆರ್ 64, ಆರ್.ಎನ್.ಆರ್, ಸೇರಿದಂತೆ ಖಾಸಗಿ ಹೈಬ್ರಿಡ್ ನ ಹಲವು ತಳಿಯ ಭತ್ತವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ರೈತರು ಬೆಳೆದಿದ್ದರು. ಹೀಗಾಗಿ ಬೆಳೆ ಕೊಯ್ಲುಗೆ ಬಂದಿದ್ದು, ಕೆಲವರು ಕೊಯ್ಲು ಆರಂಭಿಸಿದ್ದರೆ, ಮತ್ತೆ ಕೆಲವರು ಯಂತ್ರದ ಮೊರೆ ಹೋಗಿದ್ದಾರೆ. ಈಗಾಗಲೇ ಭತ್ತದ ಕೊಯ್ಲುಗಾಗಿ ಹೊರ ರಾಜ್ಯಗಳಿಂದ ಸುಮಾರು 30ಕ್ಕೂ ಹೆಚ್ಚು ಯಂತ್ರಗಳು ಇಲ್ಲಿಗೆ ಬಂದಿದ್ದು, ಸಾಲಿಗ್ರಾಮ, ಮಿರ್ಲೆ, ಅಂಕನಹಳ್ಳಿ, ಚುಂಚನಕಟ್ಟೆ ಸೇರಿದಂತೆ ತಾಲೂಕಿನ ಕೆಲವೆಡೆ ಕೊಯ್ಲು ಯಂತ್ರಗಳು ಗದ್ದೆಗಳಲ್ಲಿ ಕೊಯ್ಲು ಕಾರ್ಯವನ್ನು ಮುಂದುವರೆಸಿವೆ.
ಭತ್ತ ಖರೀದಿಗೆ ಮುಗಿಬಿದ್ದ ವ್ಯಾಪಾರಸ್ಥರು
ರೈತರು ಒಬ್ಬರಾದ ನಂತರ ಒಬ್ಬರು ಎಂಬಂತೆ ಯಂತ್ರಗಳಿಂದ ಕೊಯ್ಲು ಮಾಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಗದ್ದೆಯಿಂದಲೇ ಭತ್ತವನನ್ನು ಮಾರಾಟ ಮಾಡುತ್ತಿದ್ದು, ಭತ್ತದ ವಹಿವಾಟು ಜೋರಾಗಿ ನಡೆಯುತ್ತಿದೆ. ಸರ್ಕಾರ ಭತ್ತಕ್ಕೆ ಬೆಂಬಲ ಬೆಲೆ ನಿಗದಿ ಮಾಡಿದ್ದರೂ ಭತ್ತಕ್ಕೆ ಬೇಡಿಕೆಯಿರುವ ಕಾರಣ ವ್ಯಾಪಾರಸ್ಥರು ಹಾಗೂ ದಲ್ಲಾಳಿಗಳು ಭತ್ತಕ್ಕಾಗಿ ರೈತರ ಗದ್ದೆಗೆ ದೌಡಾಯಿಸುತ್ತಿದ್ದಾರೆ.

ಸರ್ಕಾರ ಡಿ. 1 ರಿಂದ ಭತ್ತ, ರಾಗಿ ನೊಂದಣಿ ಕೇಂದ್ರ ತೆರೆಯಲು ಸೂಚಿಸಿದ್ದು ಸಾಮಾನ್ಯ ಭತ್ತಕ್ಕೆ 2183 ರೂ, ಎ ಗ್ರೇಡ್ ಭತ್ತಕ್ಕೆ 2203 ರೂ ಬೆಂಬಲ ಬೆಲೆಯನ್ನು ನಿಗದಿ ಮಾಡಿದೆ. ಆದರೆ ವ್ಯಾಪಾರಸ್ಥರು ಬೆಂಬಲ ಬೆಲೆಗಿಂತ ಹೆಚ್ಚು ಅಂದರೆ ಪ್ರತಿ ಕ್ವಿoಟಾಲ್ 2100 ರಿಂದ 2200 ರೂ ಹಾಗೂ ಸಣ್ಣ ಭತ್ತಕ್ಕೆ 2700 ರಿಂದ 2800 ರೂ.ಗಳ ದರ ನೀಡಿ ರೈತರಿಂದ ಖರೀದಿ ಮಾಡುತ್ತಿದ್ದಾರೆ. ಇದರಿಂದ ಸಾಗಾಣಿಕೆಯ ವೆಚ್ಚ ಹಾಗೂ ಸಮಯ ಉಳಿತಾಯವಾಗುವುದರಿಂದ ತಕ್ಷಣ ಸ್ಥಳದಲ್ಲಿಯೇ ಹಣವೂ ಸಿಗುವುದರಿಂದ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಗದ್ದೆಯಿಂದಲೇ ಭತ್ತವನ್ನು ಮಾರಾಟ ಮಾಡಿ ಕೈ ತೊಳೆದು ಕೊಳ್ಳುತ್ತಿದ್ದಾರೆ.
ಮುಂದುವರಿದ ಖುಷ್ಕಿ ಜಮೀನು ರೈತರ ಗೋಳು
ಇದೆಲ್ಲದರ ನಡುವೆ ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆದ ರೈತರು ಸ್ವಲ್ಪ ಮಟ್ಟಿಗೆ ನೆಮ್ಮದಿ ಕಂಡಿದ್ದರೆ ನೀರಿನ ಕೊರತೆಯಿಂದಾಗಿ ಖುಷ್ಕಿ ಪ್ರದೇಶದಲ್ಲಿ ಭತ್ತದ ಗದ್ದೆ ಹೊಂದಿದ್ದ ರೈತರದ್ದು ಮಾಮೂಲಿ ಗೋಳು ಮುಂದುವರೆದಿದೆ. ಮಳೆ ಕೊರತೆಯಿಂದ ರೈತರು ಎರಡೆರಡು ಬಾರಿ ಬಿತ್ತನೆ ಮಾಡಿದರೂ ಬಿತ್ತಿದ ಬೆಳೆ ಬೆಳೆದಿಲ್ಲ. ಜತೆಗೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ರೈತರಿಗೆ ಗಾಯದ ಮೇಲೆ ಬರ ಎಳೆದಂತಾಗಿದೆ. ಹೀಗಾಗಿ ಭತ್ತ ಬೆಳೆಯುವುದು ಇರಲಿ ರಾಗಿ, ಜೋಳ ಸೇರಿದಂತೆ ಇನ್ನಿತರ ಯಾವುದೇ ಬೆಳೆಯನ್ನು ಬೆಳೆಯಲಾಗದೆ ಜಾನುವಾರುಗಳ ಮೇವಿಗೆ ಚಿಂತೆ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕೃಷಿಯೇ ಹಾಗೆ ಕೆಲವು ರೈತರ ಕೈಹಿಡಿದರೆ, ಮತ್ತೆ ಕೆಲವರಿಗೆ ಕೈಕೊಡುತ್ತದೆ. ಅದು ಏನೇ ಇರಲಿ ಭತ್ತ ಬೆಳೆದ ರೈತರಿಗೆ ಉತ್ತಮ ದರ ದೊರೆಯುತ್ತಿರುವುದು ತುಸು ನೆಮ್ಮದಿ ತಂದಿದೆ. ನೀರಿನಾಶ್ರಯ ಹೊಂದಿದವರು ಮುಂದಿನ ಬೆಳೆ ಬೆಳೆಯುವತ್ತ ಚಿಂತನೆ ಮಾಡುತ್ತಿದ್ದಾರೆ. ನೀರಿನ ಸೌಲಭ್ಯ ಇಲ್ಲದ ಹೆಚ್ಚಿನ ರೈತರು ಮುಂದಿನ ಮುಂಗಾರು ಮಳೆಯ ತನಕ ಕಾಯುವುದು ಅನಿವಾರ್ಯವಾಗಿದೆ.












Click it and Unblock the Notifications