ಆಂಬಿಡೆಂಟ್ ವಂಚನೆ ಪ್ರಕರಣ: ಮೈಸೂರಿಗೆ ಆರೋಪಿಗಳನ್ನು ಕರೆತರಲು ಚಿಂತನೆ
ಮೈಸೂರು, ನವೆಂಬರ್ 22: ಬಹುಕೋಟಿ ಆಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಮುಖ್ಯಸ್ಥನನ್ನು ಮೈಸೂರಿಗೆ ವಿಚಾರಣೆಗೆ ಕರೆತರಲು ಉದಯಗಿರಿ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ನಗರದ ರಾಜೀವನಗರದಲ್ಲಿ ಕಚೇರಿ ಹೊಂದಿದ್ದ ಆಂಬಿಡೆಂಟ್ ಮಾರ್ಕೆಟಿಂಗ್ ಕಂಪನಿ ನಗರದ ವಿವಿಧೆಡೆ ಸಾರ್ವಜನಿಕರಿಂದ ಕೋಟ್ಯಂತರ ರೂ. ಹಣ ಪಡೆದು ವಂಚಿಸಿರುವ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿಯನ್ನು ಆದಷ್ಟು ಬೇಗ ವಿಚಾರಣೆಗೆ ಕರೆತರಲಿದ್ದಾರೆ ಎಂದು ತಿಳಿದು ಬಂದಿದೆ.
ಇಲ್ಲಿನ ಎನ್.ಆರ್.ಮೊಹಲ್ಲಾ, ಮಂಡಿ ಹಾಗೂ ಉದಯಗಿರಿಯ ಸಾಕಷ್ಟು ನಿವಾಸಿಗಳಿಗೆ ಸಂಸ್ಥೆಯಿಂದ ವಂಚನೆಯಾಗಿದೆ. ಈ ಸಂಬಂಧ ವಂಚನೆಗೆ ಒಳಗಾದ ಏಳು ಮಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣದ ಆರೋಪಿಗಳಾಗಿರುವ ಬೆಂಗಳೂರಿನ ಸೈಯದ್ ಫರೀದ್, ಇರ್ಫಾನ್ ಮಿರ್ಜಾ, ಮೈಸೂರಿನ ಖಿಜರ್ ಮತ್ತು ಬೆಂಗಳೂರಿನ ರಾಜ್ ಮಲಯಾ ವಿರುದ್ಧ ದೂರು ದಾಖಲಾಗಿದೆ.

ಬಾಡಿ ವಾರೆಂಟ್ ಗೆ ಯತ್ನ
ಈ ನಡುವೆ ಉದಯಗಿರಿ ಪೊಲೀಸರು ನಗರದ ನ್ಯಾಯಾಲಯದಲ್ಲಿ ಬಾಡಿ ವಾರೆಂಟ್ ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದರು. ಆದರೆ, ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಸಂಸ್ಥೆಯ ಮುಖ್ಯಸ್ಥ ಫರೀದ್ ಗೆ ನಿರೀಕ್ಷಣಾ ಜಾಮೀನು ಮಂಜೂರಾಗಿರುವ ಕಾರಣ ಪೊಲೀಸರು ಬಾಡಿ ವಾರೆಂಟ್ ಯತ್ನ ಕೈ ಬಿಟ್ಟಿದ್ದಾರೆ.
ಹೀಗಾಗಿ ಆರೋಪಿಯನ್ನು ಬಂಧಿಸದೆ, ವಿಚಾರಣೆಗಾಗಿ ಮಾತ್ರ ನಗರಕ್ಕೆ ಕರೆತರಲು ಪೊಲೀಸರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಅದಕ್ಕಾಗಿ ಈಗಾಗಲೇ ಸಾಕಷ್ಟು ಸಿದ್ಧತೆ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತ್ರವೇ ಸಂಸ್ಥೆ ವಿರುದ್ಧ 400ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ.












Click it and Unblock the Notifications