ಮೈಸೂರಿಗರಿಗೆ ಮತ್ತೆ ಕೈ ಕೊಟ್ಟ ಸ್ಪೈಸ್ ಜೆಟ್
ಮೈಸೂರು, ಸೆ.2 : ದಸರಾ ಸಿದ್ಧತೆಯಲ್ಲಿ ತೊಡಗಿರುವ ಮೈಸೂರಿನ ಜನರಿಗೆ ಸ್ಪೈಸ್ ಜೆಟ್ ಮತ್ತೊಮ್ಮೆ ಕೈ ಕೊಟ್ಟಿದೆ. ನಗರಕ್ಕೆ ನೀಡಲಾಗುತ್ತಿರುವ ವಿಮಾನ ಸೇವೆಯನ್ನು ಸೆ.5ರಿಂದ ನಿಲ್ಲಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕರಾದ ಸಿ.ಮಂಜುನಾಥ್ ಅವರಿಗೆ ಸ್ಪೈಸ್ ಜೆಟ್ ಈ ಕುರಿತು ಮಾಹಿತಿ ನೀಡಿದ್ದು, ಸೆ.5ರಿಂದ ಆ.31ರ ತನಕ ಮೈಸೂರಿನ ವಿಮಾನ ಯಾನ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಆ.31ರಂದು ಪತ್ರ ಬರೆದಿದೆ. [ಮೈಸೂರು ವಿಮಾನ ನಿಲ್ದಾಣಕ್ಕೆ ವಿಸ್ತರಣೆ ಭಾಗ್ಯ]

ಸೆ.25ರಿಂದ ಅ.4ವರೆಗೆ ಈ ಬಾರಿಯ ದಸರಾ ಉತ್ಸವ ನಡೆಯಲಿದೆ. ಈ ಸಮಯಕ್ಕೆ ಸರಿಯಾಗಿ ಸ್ಪೈಸ್ ಜೆಟ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿರುವುದರಿಂದ ಪ್ರವಾಸಿಗರಿಗೆ ತೊಂದರೆ ಉಂಟಾಗಲಿದೆ. ಸತತ ಮೂರು ವಾರಗಳ ಕಾಲ ಮೈಸೂರಿಗೆ ವಿಮಾನ ಹಾರಾಟವನ್ನು ರದ್ದುಗೊಳಿಸಿದ್ದ ಸ್ಪೈಸ್ ಜೆಟ್, ಆ.21ರಿಂದ ತನ್ನ ಸೇವೆಯನ್ನು ಪುನಃ ಆರಂಭಿಸಿತ್ತು. [ಮಂಡಕಳ್ಳಿ ವಿಮಾನ ನಿಲ್ದಾಣದ ಬಗ್ಗೆ ಓದಿ]
ಸದ್ಯ, ಮೈಸೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ಭಾನುವಾರ 78 ಪ್ರಯಾಣಿಕರ ಸಾಮರ್ಥ್ಯದ ವಿಮಾನದಲ್ಲಿ 71 ಸೀಟುಗಳು ತುಂಬಿದ್ದವು. ಉಳಿದ ದಿನ 50 ಸೀಟುಗಳು ಭರ್ತಿಯಾಗಿರುತ್ತವೆ. ಹೀಗಿರುವಾಗ ಸಂಸ್ಥೆ ವಿಮಾನ ಯಾನ ಸೇವೆ ಸ್ಥಗಿತಗೊಳಿಸಲು ಏಕೆ ನಿರ್ಧರಿಸಿದೆ ಎಂಬುದು ತಿಳಿದಿಲ್ಲ ಎಂದು ಮಂಜುನಾಥ್ ಹೇಳಿದ್ದಾರೆ.
ಸಂಸದರ ಭೇಟಿ : ವಿಮಾನ ನಿಲ್ದಾಣದ ನಿರ್ದೇಶಕರಾದ ಮಂಜುನಾಥ್ ಅವರು ಮಂಗಳವಾರ ಸಂಜೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಭೇಟಿಯಾಗಲಿದ್ದು, ಸ್ಪೈಸ್ ಜೆಟ್ ಸೇವೆ ಮುಂದುವರೆಸುವ ಬಗ್ಗೆ ಕೇಂದ್ರ ವಿಮಾನಯಾನ ಸಚಿವರೊಂದಿಗೆ ಮಾತುಕತೆ ನಡೆಸುವಂತೆ ಮನವಿ ಮಾಡಲಿದ್ದಾರೆ.
ಮೈಸೂರಿನ ಮಂಡಕಳ್ಳಿಯಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ 2010ರಲ್ಲಿ ಪ್ರಾರಂಭವಾಗಿತ್ತು. ಮೊದಲು ಕಿಂಗ್ ಫಿಷರ್ ಮೈಸೂರು-ಬೆಂಗಳೂರು ವಿಮಾನ ಹಾರಾಟ ಪ್ರಾರಂಭಿಸಿತ್ತು. ಆದರೆ, ನಂತರ ಕಿಂಗ್ ಫಿಷರ್ ಸಂಸ್ಥೆ ನಷ್ಟ ಅನುಭವಿಸಿದ ನಂತರ ಹಾರಾಟ ನಿಲ್ಲಿಸಲಾಗಿತ್ತು. ಆಗ ಸ್ಪೈಸ್ ಜೆಟ್ ತನ್ನ ಸೇವೆಯನ್ನು ಆರಂಭಿಸಿತು. ಆದರೆ, ಅದು ಸಹ ಈಗ ಸ್ಥಗಿತಗೊಳ್ಳುತ್ತಿದೆ.












Click it and Unblock the Notifications