ವಿಶೇಷ ವರದಿ; ಮೈಸೂರಲ್ಲಿ ಅಫ್ಘಾನ್‌ನ 90 ವಿದ್ಯಾರ್ಥಿಗಳ ಆತಂಕ
ಮೈಸೂರು, ಆಗಸ್ಟ್ 18; ಅಫ್ಘಾನಿಸ್ಥಾನ ಶಾಂತಿ ಕದಡಿ ಹೋಗಿದೆ. ಎಲ್ಲಿ ನೋಡಿದರೂ ಬಂದೂಕಿನ ಸದ್ದು, ನೋವಿನ ಆರ್ತನಾದ, ಎಲ್ಲರಿಗೂ ಜೀವಭಯ. ಕುಟುಂಬದವರೊಂದಿಗೆ ಬೆಳಗ್ಗೆ ಮಾತನಾಡಿದೆವು. ಸದ್ಯದ ಮಟ್ಟಿಗೆ ಎಲ್ಲರೂ ಸುರಕ್ಷಿತ. ಆದರೆ ಯಾವ ಸಮಯದಲ್ಲಿ ಏನಾಗುತ್ತದೆ? ಎಂಬ ಆತಂಕ ಮನೆ ಮಾಡಿದೆ.
ಅಫ್ಘಾನಿಸ್ಥಾನದಿಂದ ಮೈಸೂರಿಗೆ ವ್ಯಾಸಂಗಕ್ಕಾಗಿ 90 ವಿದ್ಯಾರ್ಥಿಗಳು ಬಂದಿದ್ದಾರೆ. ಅವರು ಈಗ ತವರು ದೇಶದ ಪರಿಸ್ಥಿತಿಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಮೈಸೂರು ವಿವಿ ಕುಲಪತಿಗಳನ್ನು ವಿದ್ಯಾರ್ಥಿಗಳು ಭೇಟಿ ಮಾಡಿದ್ದಾರೆ.
ತಾಲಿಬಾನಿಗಳ ಕೈಗೆ ಸಿಲುಕಿರುವ ಅಫ್ಘಾನಿಸ್ಥಾನದ ಸ್ಥಿತಿ-ಗತಿಗಳ ಕುರಿತು ಒನ್ ಇಂಡಿಯಾ ಕನ್ನಡದದೊಂದಿಗೆ ವಿದ್ಯಾರ್ಥಿಗಳು ಮಾತನಾಡಿದ್ದಾರೆ. "ನಮ್ಮ ದೇಶ ಮೊದಲಿನಂತೆ ಆಗಬೇಕು. ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೆರವು ಬೇಕು. ತಾಲಿಬಾನಿಗಳು ನಗರದ ತುಂಬಾ ವಿಜಯೋತ್ಸವ ಆಚರಿಸುತ್ತಿದ್ದಾರೆ. ಜನರಿಗೆ ಉಸಿರುಗಟ್ಟಿಸುವ ವಾತಾವರಣ ನಿರ್ಮಾಣವಾಗಿದೆ. ನಿತ್ಯವೂ ನಮಗೆ ಭಯ ಕಾಡುತ್ತಿದೆ. ಕುಟುಂಬದವರಿಗೆ ಏನೂ ಆಗದಿರಲಿ ಎಂದು ಪ್ರಾರ್ಥನೆ ಮಾಡುತ್ತಿದ್ದೇವೆ" ಎಂದರು.

ಬೆಳಗ್ಗೆ ಮಾತನಾಡಿದೆ; "ಬೆಳಗ್ಗೆ ಮನೆಯವರಿಗೆ ಕರೆ ಮಾಡಿದ್ದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಪೋಷಕರು ಸುರಕ್ಷಿತವಾಗಿದ್ದಾರೆ. ಆದರೆ, ತಾಲಿಬಾನಿಗಳು ಯಾವಾಗ ಏನು ಬೇಕಾದರೂ ಮಾಡಬಹುದು. ಪ್ರತಿ ಕ್ಷಣ ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳುತ್ತಲೇ ಇರುತ್ತಾರೆ. ಸದ್ಯ ಮನೆಯಿಂದ ಯಾರೂ ಹೊರಗೆ ಹೋಗದಂತೆ ನಿರ್ಬಂಧ ವಿಧಿಸಿದ್ದಾರೆ. ಯಾರೂ ಯಾರನ್ನೂ ಭೇಟಿ ಮಾಡದಂತೆ ಷರತ್ತು ಹಾಕಲಾಗಿದೆ. ಸದ್ಯ ತಾಲಿಬಾನ್ ಸಂಘಟನೆ ಯಾರಿಗೂ ಏನೂ ಮಾಡಲ್ಲ ಎಂದು ಘೋಷಿಸಿದೆ. ಹೀಗಾಗಿ ಸ್ವಲ್ಪ ನಿರಾಳವಾಗಿದ್ದೇವೆ" ಎಂದು ಕಾನೂನು ವಿದ್ಯಾರ್ಥಿ ಸೈಯದ್ ಕುದ್ರಾತ್ ಹೇಳಿದರು.
1000 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್; ಪ್ರತಿ ವರ್ಷ ಭಾರತ ಸರ್ಕಾರ 1 ಸಾವಿರ ವಿದ್ಯಾರ್ಥಿಗಳಿಗೆ ಓದಲು ಸ್ಕಾಲರ್ ಶಿಪ್ ನೀಡುತ್ತದೆ. ಇಂಡಿಯನ್ ಕೌನ್ಸಿಲ್ ಆಫ್ ಕಲ್ಚರಲ್ ರಿಲೇಷನ್ ಇದರ ನೇತೃತ್ವ ವಹಿಸಿಕೊಂಡಿದೆ. ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್, ಕಾನೂನು, ಎಂಬಿಎ, ರಾಜ್ಯಶಾಸ್ತ್ರ, ಇಂಟರ್ ನ್ಯಾಷನಲ್ ರಿಲೇಷನ್ಸ್ ವಿಷಯಗಳಲ್ಲಿ 90 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕಾಬೂಲ್‌ನ ವಿದ್ಯಾರ್ಥಿ ಮಾತು; "ನನ್ನ ಊರು ಕಾಬೂಲ್. ಆತಂಕದಲ್ಲೇ ಬೆಳಗ್ಗೆ ಕರೆ ಮಾಡಿ ಪೋಷಕರೊಂದಿಗೆ ಮಾತನಾಡಿದೆ. ಸದ್ಯ ತಾಲಿಬಾನಿಗಳು ಕಾಬೂಲ್ ಸುತ್ತುವರಿದಿದ್ದಾರೆ. ನಿನ್ನೆ ರಾತ್ರಿ ತಾಲಿಬಾನಿಗಳು ನನ್ನ ಮನೆಯನ್ನು ಪರಿಶೀಲಿಸಿದ್ದಾರೆ. ಯಾವುದೇ ಕಾರಣಕ್ಕೂ ನೀನು ಇಲ್ಲಿಗೆ ಬರಬೇಡ ಎಂದು ಪೋಷಕರು ಮನವಿ ಮಾಡುತ್ತಿದ್ದಾರೆ. ಇಲ್ಲಿನ ವಾತಾವರಣ ತಿಳಿಯಾಗುವರೆಗೂ ಭಾರತದಲ್ಲೇ ಇರು. ಅದು ಸುರಕ್ಷಿತ ಪ್ರದೇಶ ಎಂದಿದ್ದಾರೆ" ಎಂದು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ಶಕೀರ್ ಹೇಳಿದರು.
ವೀಸಾ ವಿಸ್ತರಣೆ ಮನವಿ; ಸದ್ಯ ನಮ್ಮ ದೇಶದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ದೇಶದಲ್ಲಿ ತಾಲಿಬಾನಿಗಳು ಎಲ್ಲದಕ್ಕೂ ನಿರ್ಬಂಧ ಹೇರಿದ್ದಾರೆ. ಹಾಗಾಗಿ ನಾವು ದೇಶಕ್ಕೆ ಸದ್ಯ ಹೋಗುವ ಪರಿಸ್ಥಿತಿಯಲ್ಲಿ ಇಲ್ಲ.
ನಾವು ಪರೀಕ್ಷೆ ಮುಗಿಸಿ ವಾಪಾಸ್ ತಾಯ್ನಾಡಿಗೆ ಹೋಗಬೇಕಿತ್ತು. ಆದರೆ, ತಾಲಿಬಾನಿಗಳ ಅಟ್ಟಹಾಸ ಇರುವುದರಿಂದ ಭಾರತ ಸರಕಾರ ನಮ್ಮ ವೀಸಾದ ಅವಧಿಯನ್ನು ವಿಸ್ತರಣೆ ಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.
ಕರ್ನಾಟಕ ಸರ್ಕಾರ ಅಫ್ಘಾನಿಸ್ಥಾನದಲ್ಲಿರುವ ಕನ್ನಡಿಗರನ್ನು ಕರೆತರುವ ಸಲುವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಮನ್ವಯ ನಡೆಸಲು ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ ನೇಮಕ ಮಾಡಿದೆ. ಜನರ ನೆರವಿಗಾಗಿ ಕಂಟ್ರೋಲ್ ರೂಮ್ ಸಹ ಸ್ಥಾಪಿಸಲಾಗಿದೆ. ಜನರು ಸಹಾಯಕ್ಕಾಗಿ 080-22094498, 080-22942628, 9480800187 ನಂಬರ್‌ಗಳಿಗೆ ಕರೆ ಮಾಡಬಹುದು. [email protected] ವಿಳಾಸಕ್ಕೆ ಇ-ಮೇಲ್ ಸಹ ಮಾಡಬಹುದು.












Click it and Unblock the Notifications