South Western Railway: ಮೈಸೂರು ವಿಮಾನ ನಿಲ್ದಾಣ ಬಳಿ ರೈಲ್ವೆಯ ಯೋಜನೆ
ಮೈಸೂರು, ಮೇ 29: ಸಾಂಸ್ಕೃತಿಕ ನಗರಿ ಮೈಸೂರು ವಿಮಾನ ನಿಲ್ದಾಣ ಬಳಿ 'ಗತಿ ಶಕ್ತಿ' ಯೋಜನೆಯಡಿ ನೈಋತ್ಯ ರೈಲ್ವೆಗೆ ಸಂಬಂಧಿಸಿದ ಪ್ರಮುಖ ಯೋಜನೆಗೆ ಕಾಮಗಾರಿ ನಡೆಸಲು ಕಾರ್ಯಸಾಧ್ಯತೆಯ ಸಮೀಕ್ಷೆ ಟೆಂಡರ್ ಆಹ್ವಾನಿಸಲಾಗಿದೆ.
ಮೈಸೂರು-ಚಾಮರಾಜನಗರ ವ್ಯಾಪ್ತಿಯಲ್ಲಿ ಅದರಲ್ಲೂ ವಿಶೇಷವಾಗಿ ಮೈಸೂರು ವಿಮಾನ ನಿಲ್ದಾಣದ ಬಳಿ 8/147 ರಿಂದ 12/576 ಕಿಲೋಮೀಟರ್‌ಗಳ ಮಧ್ಯೆ ಕಾಮಗಾರಿಗೆ ಉದ್ದೇಶಿಸಲಾಗಿದೆ. ಇಲ್ಲಿ ಅಸ್ತಿತ್ವದಲ್ಲಿರುವ ರೈಲ್ವೆ ಜೋಡಣೆ ಬದಲಾಯಿಸಬೇಕು ಅಥವಾ ಭೂಗತ ಮಾರ್ಗ ನಿರ್ಮಿಸಬೇಕಿದೆ.

ಈ ಕಾಮಗಾರಿ ನಡೆಸಲು ಕಾರ್ಯಸಾಧ್ಯತೆಯ ಸಮೀಕ್ಷೆಯ ನಡೆಸುವ ಉದ್ದೇಶದಿಂದ ನೈಋತ್ಯ ರೈಲ್ವೆಯ ಸಿಗ್ನಲ್‌ಗಳು ಮತ್ತು ದೂರ ಸಂಪರ್ಕಗಳ ಉಪಮುಖ್ಯ ಯೋಜನಾ ವ್ಯವಸ್ಥಾಪಕರು ಟೆಂಡರ್ ಆಹ್ವಾನಿಸಿದ್ದಾರೆ.
ಈ ಪ್ರದೇಶದಲ್ಲಿ ಒಟ್ಟು 21.99 ಲಕ್ಷ ಮೌಲ್ಯದ ಯೋಜನೆ ಆರಂಭಿಸಲು ತೀರ್ಮಾನಿಸಲಾಗಿದೆ. ಇದನ್ನು ಒಟ್ಟು ಒಂದೂವರೆ ತಿಂಗಳಲ್ಲಿ (45 ದಿನ) ಪೂರ್ಣಗೊಳಿಸಲು ಗುರಿ ಹಾಕಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಯೋಜನೆಗೆ ಎದುರಾದ ಕೆಲವು ಸವಾಲುಗಳು
ಮೈಸೂರು ಹಾಗೂ ಚಾಮರಾಜನಗರ ಸದರಿ ರೈಲು ಮಾರ್ಗದಲ್ಲಿ ಮೈಸೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ಪ್ರದೇಶಕ್ಕೆ ಹತ್ತಿರದಲ್ಲಿದೆ. ಇಲ್ಲಿ ವಿದ್ಯುದ್ದೀಕರಣಕ್ಕೆ ಬೇಕಾದ ಓವರ್‌ಹೆಡ್ ಸಲಕರಣೆ (OHE) ಸ್ಥಾಪಿಸಲು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ (AAI) ನಿರಾಕ್ಷೇಪಣಾ ಪ್ರಮಾಣಪತ್ರ (NOC) ಪಡೆಯಲು ಒಂದಷ್ಟು ಸವಾಲುಗಳು ಎದುರಾಗಿವೆ.
AAI ಹೇಳುತ್ತಿರುವುದು ಏನು?
ಭಾರತೀಯ ರೈಲ್ವೆಯ ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್‌ಗಳು ಮತ್ತು ಏರ್‌ಕ್ರಾಫ್ಟ್ ರಾಡಾರ್ ಮತ್ತು ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್ (ಐಎಲ್‌ಎಸ್) ಸಿಗ್ನಲ್ ವ್ಯವಸ್ಥೇ ಜೊತೆಗೆ ರೈಲುಗಳನ್ನು ಚಲಿಸುವಂತೆ ಮಾಡಲಾಗುತ್ತಿದೆ. ಈ ಬಗ್ಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ (AAI) ಗಮನಾರ್ಹ ಕಳವಳ ವ್ಯಕ್ತವಾಗಿದೆ. ಏಕೆಂದರೆ ಇಲ್ಲಿನ ಓವರ್‌ಹೆಡ್ ಎಲೆಕ್ಟ್ರಿಕ್ ಲೈನ್‌ಗಳು ಸುರಕ್ಷಿತ ವಿಮಾನ ಕಾರ್ಯಾಚರಣೆಗೆ ಅಪಾಯ ಉಂಟು ಮಾಡಬಹುದೆಂದು ಎಎಐ ಕಳವಳ ವ್ಯಕ್ತಪಡಿಸಿದೆ.

ರೈಲ್ವೆ ಟ್ರ್ಯಾಕ್ ಮರು ಜೋಡಣೆ ಇಲ್ಲವೇ ಇಂಡಕ್ಷನ್ ಶೀಲ್ಡಿಂಗ್ ಪರಿಕಲ್ಪನೆಯ ಬಗ್ಗೆ ಮೈಸೂರು ವಿಭಾಗೀಯ ಗತಿ ಶಕ್ತಿ ಉಪಕ್ರಮದ ಸಭೆಯಲ್ಲಿ ಪ್ರತಾಪ್ ಸಿಂಹ ಸಲಹೆ ನೀಡಿದ್ದಾರೆ. ಏಕೆಂದರೆ ಈ ಪರಿಕಲ್ಪನೆಯನ್ನು ಈಗಾಗಲೇ ಚೆನ್ನೈ ವಿಮಾನ ನಿಲ್ದಾಣದ ಬಳಿ ಅಲ್ಲಿನ CMRL ಮೆಟ್ರೋ ಸಂಸ್ಥೆ ಯಶಸ್ವಿಯಾಗಿ ಜಾರಿಗೊಳಿಸಿದೆ. ಇದರಿಂದ ವಿಮಾನಗಳ ಸಮರ್ಪಕ ಕಾರ್ಯಾಚರಣೆಗೆ ತೊಂದರೆ ಆಗದಂತೆ ನೋಡಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ರೈಲ್ವೆ ಹಳಿ ಮರುಜೋಡಣೆ ಸೂಕ್ತ?
ಒಂದು ವೇಳೆ ಇಂಡಕ್ಷನ್ ಶೀಲ್ಡಿಂಗ್ ಅಸಾಧ್ಯ ಎಂದಾದರೆ, ಮೈಸೂರು ಏರ್‌ಪೋರ್ಟ್ ಗಡಿಯಿಂದ ಸುರಕ್ಷಿತ ಕಾರ್ಯಾಚರಣೆ ಅನುಕೂಲವಾಗುವಂತೆ ದೂರದ ಪ್ರದೇಶ ಗುರುತಿಸಬೇಕು. ನಂತರ ಅಲ್ಲಿ ರೈಲ್ವೆ ಹಳಿಗಳನ್ನು ಮರು ಜೋಡಣೆ ಮಾಡಿ, ರೈಲು ಸಂಚಾರಕ್ಕೆ ಅನುಕೂಲ ಆಗುವಂತೆ ಮಾಡಬೇಕೆಂಬುದನ್ನು ಪ್ರಸ್ತಾಪಿಸಿದರು.
ಏರ್‌ಪೋರ್ಟ್ ಸಮೀಪ ಕಾಮಗಾರಿ ಕೈಗೊಳ್ಳುವ ಬದಲು ಬೇರೆಡೆಗೆ ರೈಲ್ವೆ ಹಳಿ ಬದಲಾಯಿಸಬೇಕು ಎಂಬ ಪ್ರಸ್ತಾವದಿಂದ ಯಾವುದೇ ತೊಂದರೆ ಆಗುವುದಿಲ್ಲ. ಇದು ಸಮಂಜಸವಾಗಿದೆ. ಇದನ್ನು ಅನುಮೋದಿಸಬಹುದು ಎಂದು ಎಎಐ ಅಭಿಪ್ರಾಯಪಟ್ಟಿದೆ. ಮೈಸೂರು ಭಾಗದಲ್ಲಿ ರೈಲ್ವೆ ಕಾರ್ಯಾಚರಣೆಗಳ ಸುರಕ್ಷತೆ ಮತ್ತು ದಕ್ಷತೆಯನ್ನು ನೈಋತ್ಯ ರೈಲ್ವೆ (SWR) ಖಚಿತಪಡಿಸಿಕೊಳ್ಳಲು ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿದು ಬಂದಿದೆ.
ಸದ್ಯ ಉದ್ದೇಶಿತ ಕಾಮಗಾರಿಯು ಅನುಮೋದನೆಯ ಹಂತದಲ್ಲಿದೆ. ಪ್ಲಾನ್ ರೂಪಿಸಲಾಗಿದೆ. ಸವಾಲು, ಸಮಸ್ಯೆಗಳಿಗೆ ಪರಿಹಾರ ಸಿಕ್ಕ ಕೂಡಲೇ ಸೂಕ್ತ ತೀರ್ಮಾನಕ್ಕೆ ಬಂದು ಕೆಲಸ ಆರಂಭಿಸಲಾಗುವುದು. ಸದ್ಯ ಕಾರ್ಯಸಾಧ್ಯತಾ ವರದಿ ನಡೆಯಬೇಕಿದೆ.












Click it and Unblock the Notifications