ಮೈಸೂರಿನಲ್ಲಿ ಮನೆಮಗುವಿನ ತಲೆಯನ್ನೇ ಕಚ್ಚಿದ ಸಾಕುನಾಯಿ
ಮೈಸೂರು, ಸೆಪ್ಟೆಂಬರ್ 8 : ನಾಯಿ ನಂಬಿಕಸ್ಥ ಪ್ರಾಣಿ. ಅದು ಮಾಲಿಕನ ಸೇವೆಗೆ ಸದಾ ನಿಂತಿರುತ್ತದೆ. ತನ್ನನ್ನು ಸಾಕಿದವರಿಗೆ ಏನಾದರೂ ಆದರೆ ಊಟ ನಿದ್ದೆ ಬಿಟ್ಟು ಹಿಂದೆ ಮುಂದೆ ಸುತ್ತಾಡುತ್ತಲೇ ಇರುತ್ತದೆ. ಅಂಥ ನಾಯಿ ತನ್ನನ್ನು ಸಾಕಿದವರನ್ನೂ ಲೆಕ್ಕಿಸದೇ ತಿರುಗಿ ಬಿದ್ದರೆ? ಅಂತಹ ಭೀಕರ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಮನೆಯಲ್ಲಿ ಪ್ರೀತಿಯಿಂದ ಸಾಕಿದ ಶ್ವಾನವೇ ಮನೆಯ ಮಾಲಿಕನ ಮಗಳ ತಲೆಗೆ ಬಲವಾಗಿ ಕಚ್ಚಿದ ಪರಿಣಾಮ ಮಗುವಿನ ಪರಿಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಟ್ಟಗಳ್ಳಿ ನಿವಾಸಿ ಅಜಯ್ ಎಂಬವರು ರಾಟ್ ವೇಲರ್ ಎಂಬ ನಾಯಿಯನ್ನು ಸಾಕಿದ್ದರು. ಬುಧವಾರ ಮಧ್ಯಾಹ್ನ ಅವರ ಮುದ್ದಿನ ಮಗಳು ಅಮೋಘವರ್ಷಾಳ ತಲೆಯನ್ನು ನಾಯಿ ಬಲವಾಗಿ ಕಚ್ಚಿ ಹಿಡಿದಿದ್ದು, ಮಗು ನಾಯಿಯಿಂದ ಬಿಡಿಸಿಕೊಳ್ಳಲು ಕೂಗಾಡಿದೆ.

ಇದನ್ನು ನೋಡಿದ ಅಕ್ಕಪಕ್ಕದವರು ಮನೆಯವರನ್ನು ಕೂಗಿ ಕರೆದಿದ್ದು, ಮನೆಯವರು ನಾಯಿ ಹೊಡೆದು ಮಗುವಿನ ತಲೆಯನ್ನು ಬಿಡಿಸುವಲ್ಲಿ ಸಫಲರಾಗಿದ್ದಾರೆ. ಮಗುವಿನ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಸಾಲಬಾಧೆ ಹಿನ್ನೆಲೆ ರೈತ ನೇಣಿಗೆ ಶರಣು
ಸಾಲಬಾಧೆ ತಾಳಲಾರದೇ ರೈತನೋರ್ವ ನೇಣಿಗೆ ಶರಣಾದ ಘಟನೆ ಎಚ್ ಡಿ ಕೋಟೆ ತಾಲೂಕಿನ ವಡ್ಡರಗುಡಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಾತನನ್ನು ಮಹೇಶ್ ಆರಾಧ್ಯ ಅವರ ಮಗ ಪ್ರದೀಪ್ (28) ಎಂದು ಗುರುತಿಸಲಾಗಿದೆ. ಈತ ಸುಮಾರು ಆರು ಲಕ್ಷ ರೂ.ಸಾಲ ಮಾಡಿದ್ದ. ಆದರೆ ಸಾಲ ಮರುಪಾವತಿಸಲಾಗದೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.












Click it and Unblock the Notifications